ಕಂಪ್ಲಿ ವೆಂಕಟರಮಣ ದೇವಸ್ಥಾನದಲ್ಲಿ ಶ್ರೀ ರಾಮನವಮಿ ಪೂಜೆಯಲ್ಲಿ ಶ್ರೀ ಮನ್ನಾರಾಯಣಾಶ್ರಮದ ಪರಮಹಂಸ ನಾರಾಯಣ ವಿದ್ಯಾಭಾರತಿ ಸ್ವಾಮೀಜಿ, ಕೃಷ್ಣಮೂರ್ತಿ, ಜಯಂತ್ ಶ್ರೀವತ್ಸ ಇದ್ದರು. 
ಬಳ್ಳಾರಿ

ಹಿಂದೂಗಳ ಒಗ್ಗಟ್ಟಿಗೆ ಪ್ರೇರಕ ಶಕ್ತಿ

ಅಶೋಕ್ ಕುಮಾರ್ ಎನ್
ಕಂಪ್ಲಿ: ತಾಲೂಕಿನಾದ್ಯಂತ ರಾಮನವಮಿಯನ್ನು ಶುಕ್ರವಾರ ಶ್ರದ್ಧೆ-ಭಕ್ತಿಯಿಂದ ಆಚರಿಸಲಾಯಿತು. ಶ್ರೀ ರಾಮನವಮಿ ನಿಮಿತ್ತ ರಾಮಾಲಯಗಳಲ್ಲಿ ವಿಶೇಷ ಪೂಜಾ ಕಾರ್ಯಕ್ರಮ, ಪಾನಕ, ಕೋಸಂಬರಿ ವಿತರಣೆ ನಡೆದವು.
ಪಟ್ಟಣದ ವೆಂಕಟರಮಣ ದೇವಸ್ಥಾನಲ್ಲಿ 61ನೇವರ್ಷದ ಅಖಂಡ ರಾಮನಾಮ ಭಜನೆ ಆರಂಭಗೊಂಡಿತು. ಶ್ರೀಮನ್ನಾರಾಯಣಾಶ್ರಮದ ಪರಮಹಂಸ ನಾರಾಯಣ ವಿದ್ಯಾಭಾರತಿ ಸ್ವಾಮೀಜಿ ಮಾತನಾಡಿ, ಶ್ರೀರಾಮನಾಮ ಜಪದಿಂದ ಸಂಕಷ್ಟಗಳೆಲ್ಲ ದೂರವಾಗುತ್ತವೆ. ಹಿಂದೂಗಳ ಒಗ್ಗಟ್ಟಿಗೆ ಶ್ರೀರಾಮ ಪ್ರೇರಕನಾಗಿದ್ದಾನೆ ಎಂದು ಹೇಳಿದರು.
ಶ್ರೀರಾಮನಿಗೆ ಪಂಚಾಮೃತಾಭಿಷೇಕಸಹಿತ ಮಹಾನ್ಯಾಸ ರುದ್ರಾಭಿಷೇಕ, ಅಷ್ಟೋತ್ತರ ಮಹಾಪೂಜೆ ನಡೆದವು. ಸೇವಾ ಧರ್ಮದರ್ಶಿಗಳಾದ ವೈಷ್ಣವಿ ಕೃಷ್ಣಮೂರ್ತಿ, ಲಲಿತಾರಾಣಿ ಗಿರೀಶ್, ರೂಪಾ ಗುರುಪ್ರಸಾದ್, ಸವಿತಾ ಶಶಿಧರ್, ಭಗವತಿ ಇತರರಿದ್ದರು.
ಪಟ್ಟಣದ ಅಮೃತಶಿಲಾ ರಾಮಚಂದ್ರ ದೇವಸ್ಥಾನದಲ್ಲಿ 121ನೇ ವರ್ಷದ ಶ್ರೀ ರಾಮೋತ್ಸವ ನಡೆಯಿತು. ಗದಗಿನ ಪ್ರವಚನಕಾರ ಶ್ರೀಪಾದಾಚಾರ್ ಜಾಲಿಹಾಳ್ ಅವರಿಂದ ಶ್ರೀ ರಾಮಾಯಣ ಪ್ರವಚನ, ಪ್ರಾಂಗಣದಲ್ಲಿ ರಥೋತ್ಸವ, ರಾಮದೇವರ ಉತ್ಸವ ಮೂರ್ತಿ ಸಂಕೀರ್ತನೆ, ಗ್ರಾಮಪ್ರದಕ್ಷಿಣೆ ನಡೆಯಿತು. ಪ್ರಮುಖರಾದ ಜಿ.ಗೋಪಾಕೃಷ್ಣ, ಎ.ನಾಗರಾಜ ಆಚಾರ್, ರಮೇಶ ಬಬಲೇಶ್ವರ, ಡಿ.ವೇಣುಗೋಪಾಲಾಚಾರ್, ಕಾಕುಬಾಳ್ ಶ್ರೀಕಾಂತ ಆಚಾರ್, ಕೆ.ಅನಂತಪದ್ಮನಾಭ ಇತರರಿದ್ದರು.