ಸಿರಿಗೇರಿಯಲ್ಲಿ ನಟಿ ಉಮಾಶ್ರೀ ಅವರಿಗೆ ‘ಸುಭದ್ರಮ್ಮ ಮನ್ಸೂರ್’ ಪ್ರಶಸ್ತಿ ನೀಡಿ ಗೌರವಿಸಲಾಯಿತು. ನಿರ್ದೇಶಕರಾದ ಎಸ್.ವಿ. ರಾಜೇಂದ್ರ ಸಿಂಗ್ ಬಾಬು, ‘ಶಂಕರ್ ಸಿಂಗ್‌‘ ಪ್ರಶಸ್ತಿ ಪುರಸ್ಕೃತ ಗಿರೀಶ್ ಕಾಸರವಳ್ಳಿ, ಅನ್ನಪೂರ್ಣ ಪ್ರಕಾಶಕ ಸಿರಿಗೇರಿ ಎರಿಸ್ವಾಮಿ ಇದ್ದರು. 
ಬಳ್ಳಾರಿ

ಬಳ್ಳಾರಿಯ ರಾಘವ ಕೊಡುಗೆ ಅಪಾರ

ಪ್ರಮುಖ ಮುಖ್ಯಾಂಶಗಳು

  • ನಟಿ ಡಾ.ಉಮಾಶ್ರೀ ಶ್ಲಾಘನೆ
  • ಸುಭದ್ರಮ್ಮ ಮನ್ಸೂರ್ ಪ್ರಶಸ್ತಿ ಸ್ವೀಕಾರ
ಸಿರಿಗೇರಿ: ರಂಗಭೂಮಿಗೆ ಬಳ್ಳಾರಿ ರಾಘವ ಮತ್ತು ಲಲಿತಮ್ಮ ಕೊಡುಗೆ ಅಪಾರ. ಸುಭದ್ರಮ್ಮ ಮನ್ಸೂರ್ ಗರಡಿಯಲ್ಲಿ ಬೆಳೆದು ಅವರೊಟ್ಟಿಗೆ ಪಾತ್ರ ಮಾಡಿದ್ದು ನನ್ನ ಜೀವನದ ಶ್ರೇಷ್ಠತೆ ಎಂದು ವಿಪ ಸದಸ್ಯೆ ಹಾಗೂ ನಟಿ ಡಾ. ಉಮಾಶ್ರೀ ಹೇಳಿದರು.
ಗ್ರಾಮದ ನಾಗನಾಥೇಶ್ವರ ದೇವಸ್ಥಾನದ ಆವರಣದಲ್ಲಿ ಅನ್ನಪೂರ್ಣ ಪ್ರಕಾಶನದಿಂದ ನಾಗನಾಥೇಶ್ವರ ಮತ್ತು ಸಿರಿಗೇರಮ್ಮ ದೇವಿ ರಥೋತ್ಸವದ ನಿಮಿತ್ತ ಇತ್ತೀಚೆಗೆ ಹಮ್ಮಿಕೊಂಡಿದ್ದ ‘ಶಂಕರ್ ಸಿಂಗ್’ ಮತ್ತು ‘ಸುಭದ್ರಮ್ಮ ಮನ್ಸೂರ್’ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ನಿರ್ದೇಶಕ ಎಸ್.ವಿ. ರಾಜೇಂದ್ರ ಸಿಂಗ್ ಬಾಬು ಮಾತನಾಡಿ, ಸಿನಿಮಾ ಕ್ಷೇತ್ರಕ್ಕೆ ನಮ್ಮ ತಂದೆ ಶಂಕರ್ ಸಿಂಗ್ ಅವರು ಮಹಾತ್ಮ ಟೂರಿಂಗ್ ಟಾಕೀಸ್ ಮತ್ತು ನೆಹರೂ ಟೂರಿಂಗ್ ಟಾಕೀಸ್ ಅನ್ನು ಸಣ್ಣ ಹಳ್ಳಿಯಿಂದಲೇ ಪ್ರಾರಂಭಿಸಿದ್ದರು. ಅವರು ಸ್ವಾತಂತ್ರ್ಯ ಹೋರಾಟದಲ್ಲೂ ಪಾಲ್ಗೊಂಡಿದ್ದರು. ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರವು ಚಿತ್ರನಗರಿ ಸ್ಥಾಪಿಸಲು ಮುಂದಾಗಿರುವುದು ಸಂತಸದ ವಿಷಯ. ನಾವು ಪ್ರಶಸ್ತಿಗಾಗಿ ನಿರೀಕ್ಷಿಸುವುದಿಲ್ಲ, ನೀವು ಕನ್ನಡ ಸಿನಿಮಾಗಳನ್ನು ನೋಡಿ ಪ್ರೋತ್ಸಾಹಿಸುವುದೆ ನಮಗೆ ದೊರೆಯುವ ನಿಜವಾದ ಪ್ರಶಸ್ತಿ ಎಂದು ತಿಳಿಸಿದರು.
ನಿರ್ದೇಶಕ ಗಿರೀಶ್ ಕಾಸರವಳ್ಳಿ ಮಾತನಾಡಿ, ನಿರ್ದೇಶಕ ಶಂಕರ್ ಸಿಂಗ್ ಹೆಸರಿನ ಪ್ರಶಸ್ತಿಯನ್ನು ಸ್ವೀಕರಿಸುತ್ತಿರುವುದು ನನಗೆ ಹೆಮ್ಮೆ ತಂದಿದೆ. ಕಥೆ ಆಧಾರಿತ ಮನಸ್ಸಿನ ಭಾವನೆಗಳ ಚಲನಚಿತ್ರಗಳು ಪ್ರೇಕ್ಷಕರನ್ನು ಸೆಳೆಯುತ್ತಿದ್ದವು. ಆದರೆ, ಈಗಿನ ಚಿತ್ರಗಳಲ್ಲಿ ಹಿಂಸೆ ಹಾಗೂ ಕ್ರೌರ್ಯವನ್ನು ವಿಜೃಂಭಿಸಲಾಗುತ್ತಿದೆ. ಬಾಬು ಮತ್ತು ಪುಟ್ಟಣ್ಣ ಕಣಗಲ್ ಅವರ ನಿರ್ದೇಶನದಂತಹ ಚಿತ್ರಗಳು ಮತ್ತೆ ಹೊರಹೊಮ್ಮಲಿ ಎಂದರು.
ಇದೇ ಸಂದರ್ಭದಲ್ಲಿ ಶಂಕರ್ ಸಿಂಗ್ ಪ್ರಶಸ್ತಿಯನ್ನು ನಿರ್ದೇಶಕ ಗಿರೀಶ್ ಕಾಸರವಳ್ಳಿ ಅವರಿಗೆ ಹಾಗೂ ಕಲಾವಿದೆ ಸುಭದ್ರಮ್ಮ ಮನ್ಸೂರ್ ಪ್ರಶಸ್ತಿಯನ್ನು ನಟಿ ಡಾ. ಉಮಾಶ್ರೀ ಅವರಿಗೆ ನೀಡಿ ಗೌರವಿಸಲಾಯಿತು.