ಬಿ.ಶ್ರೀರಾಮುಲು 
ಬಳ್ಳಾರಿ

ಪಾದಯಾತ್ರೆಗೆ ಒಪ್ಪದ ಬಿಜೆಪಿ ಹೈಕಮಾಂಡ್

ಪ್ರಮುಖ ಮುಖ್ಯಾಂಶಗಳು

  • ಕಳೆದ ಒಂದೂವರೆ ವರ್ಷದಿಂದ ಪ್ರಸ್ತಾಪ
  • ಕಾಂಗ್ರೆಸ್ ಹಗರಣಗಳ ವಿರುದ್ಧ ಹೋರಾಟ

ಬಳ್ಳಾರಿ :

ರಾಜ್ಯದಲ್ಲಿ ಕೆಲ ಹಗರಣಗಳ ವಿರುದ್ಧ ಪಾದಯಾತ್ರೆ ಕೈಗೊಂಡು ಯಶಸ್ಸು ಪಡೆದು ರಾಜಕಾರಣದಲ್ಲಿ ಯಶಸ್ಸು ಕಂಡ ನಾಯಕರಿದ್ದಾರೆ. ಆದರೆ, ಕಳೆದ ಒಂದೂವರೆ ವರ್ಷದಿಂದ ಕಾಂಗ್ರೆಸ್ ವಿರುದ್ಧ ಬಿಜೆಪಿ ನಾಯಕರು ಪಾದಯಾತ್ರೆ ಕೈಗೊಳ್ಳುವ ಬಗ್ಗೆ ಪ್ರಸ್ತಾಪಿಸಿದರೂ ಹೈಕಮಾಂಡ್ ಒಪ್ಪುತ್ತಿಲ್ಲ.

ಕಳೆದ ಒಂದೂವರೆ ವರ್ಷದ ಹಿಂದೆ ಸಚಿವ ಬಿ. ನಾಗೇಂದ್ರ ಅವರ ವಿರುದ್ಧ ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣ ಖಂಡಿಸಿ ಶಾಸಕರಾದ ಬಸವನಗೌಡ ಪಾಟೀಲ್ ಯತ್ನಾಳ್, ರಮೇಶ್ ಜಾರಕಿಹೊಳಿ ಅವರು ಬೆಳಗಾವಿಯಿಂದ ಗಡಿನಾಡು ಬಳ್ಳಾರಿಯವರೆಗೆ ಪಾದಯಾತ್ರೆ ಮಾಡುವುದಾಗಿ ಬಹಿರಂಗ ಹೇಳಿಕೆ ನೀಡುವುದರ ಜತೆಗೆ ಕೆಲ ರೂಪುರೇಷೆಗಳನ್ನು ಹಾಕಿಕೊಂಡಿದ್ದರು. ಈ ಪಾದಯಾತ್ರೆಯಿಂದ ರಾಜ್ಯದಲ್ಲಿ ಹೊಸ ಅಧ್ಯಾಯ ಬರೆಯಬಹುದೇ ಎಂಬುದಾಗಿ ವಿಶ್ಲೇಷಿಸಲಾಗಿತ್ತು.
ಆದರೆ, ಹೈಕಮಾಂಡ್ ಇದಕ್ಕೆ ಒಪ್ಪಿಗೆ ನೀಡಲಿಲ್ಲ. ಕೇವಲ ಬಿ. ನಾಗೇಂದ್ರ ಅವರನ್ನು ಸಚಿವ ಸ್ಥಾನದಿಂದ ರಾಜೀನಾಮೆ ಪಡೆಯಲು ಮಾತ್ರ ಶಕ್ತವಾಯಿತು. ಇನ್ನೂ ಮಾಜಿ ಸಚಿವ ಬಿ.ಶ್ರೀರಾಮುಲು ಕೂಡ ಜಿಲ್ಲೆಯಿಂದ ಪಾದಯಾತ್ರೆ ಬಗ್ಗೆ ರಾಜ್ಯ ನಾಯಕರ ಜತೆಗೆ ಚರ್ಚಿಸಿದರೂ, ವಿಧಾನಸಭಾ ಚುನಾವಣೆಯೂ ಇನ್ನೂ ಎರಡೂವರೆ ವರ್ಷ ಬಾಕಿಯಿದ್ದರಿಂದ ಪಾದಯಾತ್ರೆಗೆ ಅನುಮತಿ ನೀಡಲಿಲ್ಲ. ಕೇವಲ ಎರಡು ದಿನ ಅಹೋರಾತ್ರಿ ಧರಣಿ ನಡೆಸಿ ಹೋರಾಟ ಅಂತಿಮಗೊಳಿಸಿದರು.
ನಂತರದಲ್ಲಿ 2026ರ ಹೊಸ ವರ್ಷದ ದಿನದಂದೇ ಇದೇ ವಾಲ್ಮೀಕಿ ಪುತ್ಥಳಿ ಅನಾವರಣ ಕಾರ್ಯಕ್ರಮದ ಹಿನ್ನಲೆ ಮಾಜಿ ಸಚಿವ, ಹಾಲಿ ಶಾಸಕ ಜಿ.ಜನಾರ್ದನರೆಡ್ಡಿ, ಮಾಜಿ ಸಚಿವ ಬಿ.ಶ್ರೀರಾಮುಲು ಹಾಗೂ ಶಾಸಕ ನಾರಾ ಭರತರೆಡ್ಡಿ ನಡುವೆ ಬ್ಯಾನರ್ ಗಲಾಟೆ ಸಂಬಂಧ ಘರ್ಷಣೆಯಲ್ಲಿ ಓರ್ವ ಕಾಂಗ್ರೆಸ್ ಕಾರ್ಯಕರ್ತನೇ ಭರತರೆಡ್ಡಿ ಖಾಸಗಿ ಅಂಗರಕ್ಷಕನ ಬಂದೂಕಿನ ಗುಂಡೇಟಿಗೆ ಬಲಿಯಾಗಬೇಕಿತು. ಈ ಘರ್ಷಣೆ ದೇಶದ್ಯಾಂತ ದೊಡ್ಡ ಚರ್ಚೆಗೆ ಗ್ರಾಸವಾಗಿ ಕಾಂಗ್ರೆಸ್ ಮುಖಭಂಗ ಅನುಭವಿಸಿತು. ಬಿಜೆಪಿಯೂ ಈ ಪ್ರಕರಣವನ್ನೂ ಸಿಬಿಐ ಗೆ ವಹಿಸಬೇಕು ಹಾಗೂ ಶಾಸಕ ನಾರಾ ಭರತರೆಡ್ಡಿ ಅವರನ್ನು ಬಂಧಿಸಬೇಕು ಹೋರಾಟ ನಡೆಸಿತು. ಕಾಂಗ್ರೆಸ್ ಪಕ್ಷವೂ ತ್ವರಿತಗತಿಯಲ್ಲಿ ಸಿಐಡಿಗೆ ವಹಿಸಿ ಕೆಲ ಆರೋಪಿಗಳನ್ನು ಬಂಧಿಸುವಲ್ಲಿ ಯಶ್ವಸಿಯಾಯಿತು.
ಇದನ್ನು ದೊಡ್ಡಮಟ್ಟದಲ್ಲಿ ಹೋರಾಟ ಕೈಗೊಂಡು ರಾಜ್ಯದಲ್ಲಿ ಆಸ್ತಿತ್ವ ಕಾಯ್ದುಕೊಳ್ಳಬೇಕು ಎಂಬುದಾಗಿ ಶಾಸಕ ಜಿ.ಜನಾರ್ದನರೆಡ್ಡಿ, ಮಾಜಿ ಸಚಿವ ಬಿ.ಶ್ರೀರಾಮುಲು ಸೇರಿ ಬಳ್ಳಾರಿಯಿಂದ ಬೆಂಗಳೂರಿಗೆ ಪಾದಯಾತ್ರೆಯೇ ನಡೆಸುವುದಾಗಿ ಬಹಿರಂಗ ಪಡಿಸುವುದರ ಜತೆಗೆ ರೂಟ್ ಮ್ಯಾಪ್ ಬಿಡುಗಡೆ ಮಾಡಿದ್ದರು. ಆಗ ಕೂಡ ಬಿಜೆಪಿ ನಾಯಕರು ಪಾದಯಾತ್ರೆಗೆ ಅನುಮತಿ ನೀಡದೆ ಕೇವಲ ಬಹಿರಂಗ ಸಮಾವೇಶ ಆಯೋಜಿಸಿ ಅಂತಿಮಗೊಳಿಸಿದರು. ಪಾದಯಾತ್ರೆ ಬಗ್ಗೆ ದೆಹಲಿ ಮಟ್ಟದಲ್ಲಿ ಬಿ.ಶ್ರೀರಾಮುಲು ಚರ್ಚಿಸಿದರೂ ಮಣೆ ಹಾಕಲಿಲ್ಲ ಎಂದು ಮೂಲಗಳು ತಿಳಿಸಿದವು.
ಸದ್ಯ, ಸಿಎಂ ಡಿ.ಕೆ.ಶಿವಕುಮಾರ್ ಸಂಪುಟದಲ್ಲಿ ಬಿ.ನಾಗೇಂದ್ರ ಅವರಿಗೆ ಸಚಿವ ಸ್ಥಾನ ನೀಡಿರುವುದರಿಂದ ಒಂದಡೆ ರಾಯಚೂರಿನ ದೇವದುರ್ಗದಿಂದ ಬಳ್ಳಾರಿಯವರೆಗೆ ಪಾದಯಾತ್ರೆ ಬಗ್ಗೆ ಕೆಲ ನಾಯಕರು ಚರ್ಚಿಸಿದ್ದಾರೆ. ಇನ್ನೂ ಮಾಜಿ ಸಚಿವ ಬಿ.ಶ್ರೀರಾಮುಲು ಬಳ್ಳಾರಿಯಿಂದ ಬೆಂಗಳೂರಿಗೆ ಪಾದಯಾತ್ರೆ ಕೈಗೊಳ್ಳಲು ನಾಯಕರ ಜತೆಗೆ ಚರ್ಚಿಸಿದರೂ ಯಾರಿಗೂ ಒಪ್ಪಿಗೆ ನೀಡಿಲ್ಲ ಎಂಬುದಾಗಿ ಮೂಲಗಳು ಖಚಿತಪಡಿಸಿದವು. ಇನ್ನೂ ಒಂದೂವರೆ ವರ್ಷದಲ್ಲೇ ವಿಧಾನಸಭಾ ಚುನಾವಣೆ ಘೋಷಣೆ ಸಾಧ್ಯತೆಯಾಗುವುದರಿಂದ ಪಾದಯಾತ್ರೆಗೆ ಯಶಸ್ಸು ದೊರೆತರೆ ಈ ಇಬ್ಬರು ನಾಯಕರಿಗೆ ದೊಡ್ಡ ಹೆಸರು ಹಾಗೂ ಲಾಭವಾಗಲಿದೆ ಎಂಬ ಉದ್ದೇಶದಿಂದ ಮಣೆ ಹಾಕುತ್ತಿಲ್ಲ ಎಂದು ಅಂದಾಜಿಸಲಾಗಿದೆ.
"

ಕೋಟ್.... ಪಾದಯಾತ್ರೆ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನಿರ್ಧಾರ ಕೈಗೊಳ್ಳಲಿದ್ದು, ಇನ್ನೂ ಅಂತಿಮ ತಿರ್ಮಾನವಾಗಿಲ್ಲ.- ಬಿ.ಶ್ರೀರಾಮುಲು, ಮಾಜಿ ಸಚಿವ, ಬಳ್ಳಾರಿ.

===