ಬಳ್ಳಾರಿಯ ಡಿಸಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಕಂಪ್ಲಿ ಮತ್ತು ಕುರುಗೋಡು ಉತ್ಸವದ ಪೂರ್ವಭಾವಿ ಸಭೆಯಲ್ಲಿ ಡಿಸಿ ಕೆ.ನಾಗೇಂದ್ರ ಪ್ರಸಾದ್ ಮಾತನಾಡಿದರು. ಎಡಿಸಿ ಮಹಮ್ಮದ್ ಎನ್.ಜುಬೇರ್ ಇದ್ದರು.
ಬಳ್ಳಾರಿ : ಜಿಲ್ಲೆಯ ಕಂಪ್ಲಿ ಮತ್ತು ಕುರುಗೋಡು ಉತ್ಸವದಲ್ಲಿ ಅಧಿಕಾರಿಗಳಿಗೆ ವಹಿಸಿದ ಕರ್ತವ್ಯವನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕು ಎಂದು ಡಿಸಿ ಕೆ.ನಾಗೇಂದ್ರ ಪ್ರಸಾದ್ ಹೇಳಿದರು.
ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ಕಂಪ್ಲಿ ಮತ್ತು ಕುರುಗೋಡು ಉತ್ಸವ ಅಂಗವಾಗಿ ಶುಕ್ರವಾರ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ಈಗಾಗಲೇ ಶಾಸಕ ಜೆ.ಎನ್.ಗಣೇಶ್ ಅವರ ನೇತೃತ್ವದಲ್ಲಿ ಫೆ. 11, 12 ರಂದು ಕಂಪ್ಲಿ ಮತ್ತು ಫೆ.15, 16 ರಂದು ಕುರುಗೋಡು ಉತ್ಸವ ಆಯೋಜನೆ ನಿರ್ಧರಿಸಲಾಗಿದೆ. ಆದ್ದರಿಂದ ಅಧಿಕಾರಿಗಳು ಒಗ್ಗೂಡಿ ಕೆಲಸ ಮಾಡುವ ಮೂಲಕ ಉತ್ಸವಗಳನ್ನು ಯಶಸ್ವಿಗೊಳಿಸಬೇಕು ಎಂದು ಹೇಳಿದರು.
ಕಂಪ್ಲಿ ಉತ್ಸವದ ಅಂಗವಾಗಿ ಫೆ.11 ರಂದು ಸಂಜೆ ಕಂಪ್ಲಿ ಕೋಟೆ ಪಂಪಾಪತಿ ದೇವಸ್ಥಾನದಿಂದ ವಿವಿಧ ಸಾಂಸ್ಕೃತಿಕ ಕಲಾತಂಡಗಳ ಭವ್ಯ ಮೆರವಣಿಗೆ ನಡೆಯಲಿದ್ದು, ಸೋಮಪ್ಪ ಕೆರೆ ಆವರಣ ತಲುಪಿದ ಬಳಿಕ ವಾರಣಾಸಿ ಅರ್ಚಕರಿಂದ ತುಂಗಾರತಿ ನಡೆಯಲಿದೆ ಎಂದರು.
ಫೆ.12 ರಂದು ಸಂಜೆ ಕಂಪ್ಲಿ ಉತ್ಸವದ ಉದ್ಘಾಟನಾ ಕಾರ್ಯಕ್ರಮ ಜರುಗಲಿದೆ. ಬಳಿಕ ಖ್ಯಾತ ಗಾಯಕ ಚಂದನ್ ಶೆಟ್ಟಿ ತಂಡದಿಂದ ರಸಮಂಜರಿ ಕಾರ್ಯಕ್ರಮ ನಡೆಯಲಿದೆ. ಅದೇ ರೀತಿಯಾಗಿ ಫೆ.15, 16 ರಂದು ಕುರುಗೋಡು ಉತ್ಸವವನ್ನು ಸಹ ಆಯೋಜಿಸಲಾಗಿದೆ. ಫೆ.15 ರಂದು ಸಂಜೆ ಜಾನಪದ ಕಲಾತಂಡಗಳಿಂದ ಭವ್ಯ ಮೆರವಣಿಗೆ, ಬಳಿಕ ತುಂಗಾರತಿ ನಡೆಯಲಿದೆ. ಫೆ.16 ರಂದು ಉತ್ಸವದ ಉದ್ಘಾಟನೆ ನೆರವೇರಲಿದೆ. ಕಲಾವಿದರಿಗೆ ತಂಗಲು ವ್ಯವಸ್ಥೆ ಮಾಡಬೇಕು. ಸೂಕ್ತ ಪಾರ್ಕಿಂಗ್ ವ್ಯವಸ್ಥೆ, ಪೊಲೀಸ್ ಬಂದೋಬಸ್ತ್ ನಿಯೋಜನೆ ಮಾಡಬೇಕು. ಹೆಚ್ಚುವರಿ ಸಾರಿಗೆ ವ್ಯವಸ್ಥೆ, ಆಗ್ನಿಶಾಮಕ, ಅಂಬುಲೆನ್ಸ್ ವ್ಯವಸ್ಥೆ ಇರಿಸಿಕೊಳ್ಳಬೇಕು ಎಂದು ನಿರ್ದೇಶಿಸಿದರು.
ಎರಡು ದಿನಗಳ ಉತ್ಸವದಲ್ಲಿ ಚಿತ್ರಕಲಾ, ರಂಗೋಲಿ, ಮೆಹೆಂದಿ, ಅಡುಗೆ ಸ್ಪರ್ಧೆ, ಆಹಾರ ಮೇಳ, ಫಲಪುಷ್ಪ ಪ್ರದರ್ಶನ, ಸಿಂಗರಿಸಿದ ಎತ್ತಿನಗಾಡಿಗಳ ಜಾಥಾ, ಗ್ರಾಮೀಣ ಕ್ರೀಡೆಗಳು ಹಾಗೂ ವಿವಿಧ ಇಲಾಖೆಗಳ ಮಾಹಿತಿ ಒಳಗೊಂಡ ಮಳಿಗೆಗಳು ಇರಲಿವೆ. ಸಂಬಂಧಿಸಿದ ಇಲಾಖಾ ಅಧಿಕಾರಿಗಳು ಎಲ್ಲ ವ್ಯವಸ್ಥೆ ಮಾಡಿಕೊಳ್ಳಬೇಕು. ಶಿಷ್ಟಾಚಾರದನ್ವಯ ಆಹ್ವಾನ ಪತ್ರಿಕೆಗಳನ್ನು ಮುದ್ರಿಸಿ ಜನಪ್ರತಿನಿಧಿಗಳನ್ನು ಆಹ್ವಾನಿಸಬೇಕು. ಉತ್ಸವಗಳು ಜನೋತ್ಸವವಾಗಲು, ಸಾರ್ವಜನಿಕರು ಸಹ ಭಾಗವಹಿಸಿ ಯಶಸ್ವಿಯಾಗಿಸಲು ಸಾಕಷ್ಟು ಪ್ರಚಾರ ಕೈಗೊಳ್ಳಬೇಕು ಎಂದರು.