ಗೋನಾಳ ಕ್ಯಾಂಪ್ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ
ಮಸ್ಕಿ: ಗೋನಾಳ ಕ್ಯಾಂಪ್ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಕಾಯಂ ಶಿಕ್ಷಕರೊಬ್ಬರನ್ನು ನಿಯೋಜನೆ ಮಾಡಿ ಸಿಂಧನೂರು ಕ್ಷೇತ್ರ ಶಿಕ್ಷಣಾಧಿಕಾರಿ ಬಸವಲಿಂಗಪ್ಪ ಗುರುವಾರ ಆದೇಶ ಹೊರಡಿಸಿದ್ದಾರೆ.
ಶೈಕ್ಷಣಿಕ ವರ್ಷ ಆರಂಭದ ಹಿನ್ನೆಲೆಯಲ್ಲಿ ಶಾಲೆಗೆ ಗ್ರಾಮಸ್ಥರು ಶ್ರಮದಾನ ಮಾಡುವ ಮೂಲಕ ಸುಣ್ಣ -ಬಣ್ಣ ಬಳಿದು ಸ್ವಚ್ಛತೆ ಕೈಗೊಂಡಿದ್ದರು. ಶಿಕ್ಷಣ ಇಲಾಖೆ ಕಾಯಂ ಶಿಕ್ಷಕರನ್ನು ನೀಡಿದಲ್ಲಿ ಮಕ್ಕಳ ಶೈಕ್ಷಣಿಕ ಚಟುವಟಿಕೆಗೆ ಸಹಕಾರ ನೀಡುವುದಾಗಿ ಗ್ರಾಮಸ್ಥರು ತಿಳಿಸಿ, ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಶಿಕ್ಷಕರನ್ನು ಒದಗಿಸಬೇಕು ಎಂದು ಒತ್ತಾಯಿಸಿದ್ದರು.
ಕ್ಷೇತ್ರ ಶಿಕ್ಷಣಾಧಿಕಾರಿ ಗ್ರಾಮಸ್ಥರ ಬೇಡಿಕೆಗೆ ಸ್ಪಂದಿಸಿ, ಗೋನಾಳದ ಸರ್ಕಾರಿ ಹಿಪ್ರಾ ಶಾಲೆಯ ಸಹಶಿಕ್ಷಕ ಮಲ್ಲಪ್ಪ ಎಂಬುವರನ್ನು ನಿಯೋಜಿಸಿರುವುದಕ್ಕೆ ಎಸ್ಡಿಎಂಸಿ ಅಧ್ಯಕ್ಷ ಬಾಳಪ್ಪ ಹಾಗೂ ಗ್ರಾಮಸ್ಥರು ಹರ್ಷ ವ್ಯಕ್ತಪಡಿಸಿದ್ದಾರೆ. ಈ ಕುರಿತು ವಿಜಯವಾಣಿ ಜೂ.4ರಂದು ‘ಶಿಕ್ಷಕರಿಲ್ಲದ ಶಾಲೆ ಸ್ವಚ್ಛಗೊಳಿಸಿದ ಗ್ರಾಮಸ್ಥರು’ ಶೀರ್ಷಿಕೆಯಡಿ ವರದಿ ಪ್ರಕಟಿಸಿದ್ದನ್ನು ಇಲ್ಲಿ ಸ್ಮರಿಸಬಹುದು.