ಪಂಚಮಸಾಲಿ ತಾಲೂಕು ಘಟಕ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಮತ್ತು ನಿವೃತ್ತ ನೌಕರರ ಸನ್ಮಾನ ಕಾರ್ಯಕ್ರಮವನ್ನು ವೀರಶೈವ ಪತ್ತಿನ ಸಹಕಾರ ಬ್ಯಾಂಕ್ ಅಧ್ಯಕ್ಷ ಕೆ. ವಿವೇಕಾನಂದ ಉದ್ಘಾಟಿಸಿದರು. ಪಂಚಮಸಾಲಿ ತಾಲೂಕು ಅಧ್ಯಕ್ಷ ಚಾಪಿ ಚಂದ್ರಪ್ಪ, ಕಾರ್ಯದರ್ಶಿ ಅಶೋಕ ಹಳ್ಳಿ, ಉಪಾಧ್ಯಕ್ಷ ಶೆಟ್ಟಿ ರಾಜಶೇಖರ ಸೇರಿದಂತೆ ಇತರರಿದ್ದರು.
- ವ್ಯಕ್ತಿತ್ವ ವಿಕಸನ ತರಬೇತಿ ಸವಿತಾ ರಮೇಶ್ ಸಲಹೆ
- ಕೊಟ್ಟೂರಿನಲ್ಲಿ ಪಂಚಮಸಾಲಿ ಪ್ರತಿಭಾ ಪುರಸ್ಕಾರ
ಕೊಟ್ಟೂರು: ಪಟ್ಟಣದ ಮರುಳಸಿದ್ದೇಶ್ವರ ಸಭಾಂಗಣದಲ್ಲಿ ಕೊಟ್ಟೂರು ತಾಲೂಕು ಪಂಚಮಸಾಲಿ ಸಮಾಜದ ವತಿಯಿಂದ ಪ್ರತಿಭಾ ಪುರಸ್ಕಾರ ಮತ್ತು ನಿವೃತ್ತ ಸರ್ಕಾರಿ ನೌಕರರಿಗೆ ಸನ್ಮಾನ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಮಾತನಾಡಿದ ವ್ಯಕ್ತಿತ್ವ ವಿಕಾಸನ ತರಬೇತಿದಾರ ಸವಿತಾ ರಮೇಶ್, ಮಕ್ಕಳಿಗೆ ಒಳ್ಳೆಯ ಸಂಸ್ಕಾರ ಕೊಟ್ಟರೆ ಅವರು ಮನೆಯ ಜೊತೆಗೆ ಸಮಾಜಕ್ಕೆ ಬೆಳಕಾಗಬಲ್ಲರು. ಕಿತ್ತೂರು ರಾಣಿ ಚನ್ನಮ್ಮನ ವಂಶದಲ್ಲಿ ಹುಟ್ಟಿದ ಪ್ರತಿಯೊಬ್ಬರೂ ಹೆಮ್ಮೆ ಪಡಬೇಕು. ವಿದ್ಯಾರ್ಥಿಗಳು ಸಮಾಜದ ಮೇಲೆ ಕಾಳಜಿ ಇರಿಸಿಕೊಳ್ಳುವಂತೆ ಹಾಗೂ ತಮಗೆ ಸಿಕ್ಕ ಗೌರವವನ್ನು ಸಮಾಜಕ್ಕೆ ಮರಳಿ ಕೊಡುವಂತಹ ಗುಣಗಳನ್ನು ಬೆಳೆಸಿಕೊಂಡು ಸಮಾಜವನ್ನು ಮತ್ತಷ್ಟು ಸದೃಢಗೊಳಿಸಬೇಕು ಎಂದು ಅವರು ಕಿವಿಮಾತು ಹೇಳಿದರು.
ವೀರಶೈವ ಪತ್ತಿನ ಸಹಕಾರ ಬ್ಯಾಂಕ್ ಅಧ್ಯಕ್ಷ ಕೆ. ವಿವೇಕಾನಂದ ಮಾತನಾಡಿ, ಮಕ್ಕಳಿಗೆ ಪುಸ್ತಕ ಜ್ಞಾನದ ಜೊತೆಗೆ ಸಾಮಾಜಿಕ ಮತ್ತು ವ್ಯಾವಹಾರಿಕ ಜ್ಞಾನವನ್ನೂ ಬೆಳೆಸಿದರೆ ಅವರು ಮುಂದೆ ಸ್ವತಂತ್ರವಾಗಿ ಬದುಕು ಕಟ್ಟಿಕೊಳ್ಳಲು ಸಾಧ್ಯ ಎಂದರು. ಪಂಚಮಸಾಲಿ ಸಮಾಜದ ತಾಲೂಕು ಅಧ್ಯಕ್ಷ ಚಾಪಿ ಚಂದ್ರಪ್ಪ ಪ್ರಾಸ್ತಾವಿಕವಾಗಿ ಮಾತನಾಡಿ, ವಿದ್ಯಾರ್ಥಿಗಳು ಮೊಬೈಲ್ ಗೀಳಿಗೆ ಬಿದ್ದು ಹಾಳಾಗದೆ ಶ್ರಮಪಟ್ಟು ಓದಿದ್ದೇ ಆದಲ್ಲಿ ಅತ್ಯುತ್ತಮ ಸಾಧನೆ ಮಾಡಲು ಸಾಧ್ಯ ಎಂದರು.
ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಗಳಲ್ಲಿ ಶೇ.90ಕ್ಕಿಂತ ಹೆಚ್ಚು ಅಂಕ ಪಡೆದ ಸಮಾಜದ 68 ವಿದ್ಯಾರ್ಥಿಗಳನ್ನು ಹಾಗೂ ನಿವೃತ್ತ ಸರ್ಕಾರಿ ನೌಕರರನ್ನು ಸನ್ಮಾನಿಸಿ ಗೌರವಿಸಲಾಯಿತು.
ವೀರಶೈವ ಪತ್ತಿನ ಸಹಕಾರ ಬ್ಯಾಂಕ್ ನಿರ್ದೇಶಕ ಬಿ. ಪಂಪಾಪತಿ, ಮಾಜಿ ಅಧ್ಯಕ್ಷ ಎಂ. ಶಿವಣ್ಣ, ಪಂಚಮಸಾಲಿ ಸಮಾಜದ ನೌಕರರ ಸಂಘದ ತಾಲೂಕು ಅಧ್ಯಕ್ಷ ಮರುಳಸಿದ್ದಪ್ಪ, ಕಾಂಗ್ರೆಸ್ ಪದವೀಧರರ ಕ್ಷೇತ್ರದ ರಾಜ್ಯ ಕಾರ್ಯದರ್ಶಿ ಅಕ್ಷಯ ಸತ್ಯಪ್ಪನವರ್, ತಾಲೂಕು ಉಪಾಧ್ಯಕ್ಷ ಶೆಟ್ಟಿ ರಾಜಶೇಖರ, ತಾಲೂಕು ಕಾರ್ಯದರ್ಶಿ ಅಶೋಕ ಹಳ್ಳಿ, ವೀರಶೈವ ಪತ್ತಿನ ಸಹಕಾರ ಬ್ಯಾಂಕ್ ಉಪಾಧ್ಯಕ್ಷೆ ಗಾಯತ್ರಿ ಅಶೋಕ್, ಪಂಚಮಸಾಲಿ ನೌಕರರ ಸಂಘದ ತಾಲೂಕು ಉಪಾಧ್ಯಕ್ಷ ವೀರೇಶ ತುಪ್ಪದ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.