- ಪ್ರತಿಭಾ ಪುರಸ್ಕಾರ ಪ್ರದಾನ
- ನೌಕರರ ಸಂಘದ ಉದ್ಘಾಟನೆ
ಬಳ್ಳಾರಿ : ಛಲವಾದಿ ಸಮುದಾಯದ ಸರ್ಕಾರಿ ಹಾಗೂ ಅರೆ ಸರ್ಕಾರಿ ನೌಕರರ ಒಕ್ಕೂಟದಿಂದ ಮೇ31ರಂದು ಛಲವಾದಿ ನೌಕರರ ಸಂಘದ ಉದ್ಘಾಟನೆ ಹಾಗೂ ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧ್ಯಕ್ಷ ಗೂಳಪ್ಪ ಬೆಳ್ಳೇಕಟ್ಟೆ ಹೇಳಿದರು. ನಗರದ ಪತ್ರಿಕಾಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಇಲ್ಲಿನ ಡಾ.ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಕಾರ್ಯಕ್ರಮ ನಡೆಯಲಿದೆ.
ಕಳೆದ ಹಲವು ತಿಂಗಳಿಂದ ನಾನಾ ಕಾರಣಗಳಿಂದ ವಿಳಂಬವಾಗಿದ್ದ ಸಂಘದ ಉದ್ಘಾಟನಾ ಕಾರ್ಯಕ್ರಮವನ್ನು ಅದ್ಧೂರಿಯಾಗಿ ಆಯೋಜಿಸಲಾಗುತ್ತಿದೆ ಎಂದರು. ಕಾರ್ಯಕ್ರಮದಲ್ಲಿ ಮೈಸೂರು ಉರಿಲಿಂಗ ಪೆದ್ದಿ ಮಠದ ಶ್ರೀಜ್ಞಾನಪ್ರಕಾಶ ಸ್ವಾಮೀಜಿ, ಚಿತ್ರದುರ್ಗದ ಛಲವಾದಿ ಮಹಾಮಠದ ಶ್ರೀಬಸವನಾಗಿದೇವ ಸ್ವಾಮೀಜಿ ಹಾಗೂ ಭಾರತೀಯ ಬೌದ್ಧ ಮಹಾಸಭಾದ ಕಮಲರತ್ನ ಭಂತೇಜಿ ದಿವ್ಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಲಿದ್ದಾರೆ ಎಂದರು.
ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಪ್ರದಾನ ಕಾರ್ಯಕ್ರಮವನ್ನು ಕರ್ನಾಟಕ ಛಲವಾದಿ ಮಹಾಸಭಾ ರಾಜ್ಯಾಧ್ಯಕ್ಷ ಎಚ್.ಸಿದ್ದಯ್ಯ, ಡಿಸಿ ನಾಗೇಂದ್ರ ಪ್ರಸಾದ್, ರಾಜ್ಯಾಧ್ಯಕ್ಷೆ ವಾಣಿ ಕೆ. ಶಿವರಾಮು, ರಾಜ್ಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಆಯೋಗದ ಅಧ್ಯಕ್ಷ ಡಾ. ಮೂರ್ತಿ ಎಲ್. ಸೇರಿದಂತೆ ವಿವಿಧ ಗಣ್ಯರು ನೆರವೇರಿಸಲಿದ್ದಾರೆ. ಇದೇ ವೇಳೆ ಸಮುದಾಯದ ನಿವೃತ್ತ ನೌಕರರಿಗೆ ಗೌರವ ಪುರಸ್ಕಾರ ನೀಡಿ ಸನ್ಮಾನಿಸಲಾಗುವುದು ಎಂದರು.
ಲಿಡ್ಕರ್ ಅಧ್ಯಕ್ಷ ಮುಂಡರಗಿ ನಾಗರಾಜ್, ಜಿಪಂ ಮಾಜಿ ಸದಸ್ಯ ಮಾನಯ್ಯ, ಸಂಘಟನೆಯ ಮಾಜಿ ರಾಜ್ಯಾಧ್ಯಕ್ಷ ಎಚ್.ಕೆ.ಬಸವರಾಜು, ಮುಖಂಡರಾದ ಡಾ.ಸಿ.ಎಚ್.ಸೋಮನಾಥ್, ಡಾ.ಸಿ.ಭರತ್ ಹಾಗೂ ಹನುಮಂತಪ್ಪ ಗೌರವ ಉಪಸ್ಥಿತಿ ವಹಿಸಲಿದ್ದು, ಕಾರ್ಯಕ್ರಮದ ಅಧ್ಯಕ್ಷತೆ ಜಿಲ್ಲಾಧ್ಯಕ್ಷ ಗೂಳಪ್ಪ ಬೆಳ್ಳೇಕಟ್ಟೆ ವಹಿಸಲಿದ್ದಾರೆ ಎಂದರು. ಸಂಘದ ಪದಾಧಿಕಾರಿಗಳಾದ ಸಿ. ನರಸಪ್ಪ, ಹನುಮಪ್ಪ, ಸೋಮನಾಥ್, ಸಿ.ಮಂಜುನಾಥ್, ಜೆ.ಎಸ್.ಶ್ರೀನಿವಾಸಲು, ಹನುಮೇಶ್ ಕಟ್ಟೆಮಾನಿ, ಶಂಕರ್ ಇದ್ದರು.