- ವಿಧಾನಮಂಡಲ
- ಅಧಿವೇಶನ
- ಏತ ನೀರಾವರಿ
ಬಳ್ಳಾರಿ : ಹಗರಿಬೊಮ್ಮನಹಳ್ಳಿ ತಾಲೂಕಿನ ತಂಬ್ರಹಳ್ಳಿಯ ಎರಡನೇ ಹಂತದ ಏತ ನೀರಾವರಿ ಯೋಜನೆಯನ್ನು ತ್ವರಿತವಾಗಿ ಕಾಮಗಾರಿ ಕೈಗೆತ್ತಿಕೊಳ್ಳಿ ಎಂದು ವಿಧಾನ ಪರಿಷತ್ ಸದಸ್ಯ ವೈ.ಎಂ.ಸತೀಶ್ ಆಗ್ರಹಿಸಿದರು.
ವಿಧಾನಮಂಡಲ ಅಧಿವೇಶನದಲ್ಲಿ ಮಾತನಾಡಿ, ಈ ಯೋಜನೆಯು 1976ರಲ್ಲಿ ಪ್ರಾರಂಭವಾಗಿದ್ದು , ಮೂರು ಸಾವಿರ ಎಕರೆಗೆ ಭೂಮಿಗೆ ನೀರುಣಿಸುವ ಯೋಜನೆಯಾಗಿದೆ. ಆದರೆ, ಈವರೆಗೆ 1400 ಎಕರೆ ಭೂಮಿಗೆ ನೀರುಣಿಸಲು ಕೆಲಸ ಆಗಿಲ್ಲ. ಆದ್ದರಿಂದ, ಸರ್ಕಾರ ತಕ್ಷಣವೇ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಸಣ್ಣ ನೀರಾವರಿ ಸಚಿವ ಎನ್.ಎಸ್.ಬೋಸರಾಜು ಮಾತನಾಡಿ, ಪ್ರಸ್ತುತ ಈ ಯೋಜನೆ ವ್ಯಾಪ್ತಿಯ 1400 ಎಕರೆ ಭೂಮಿಯಲ್ಲಿ ವಸತಿ, ಎಪಿಎಂಸಿ ಇತರೆ ಕಟ್ಟಡಗಳು ನಿರ್ಮಾಣಗೊಂಡು ನೀರಾವರಿ ಪ್ರದೇಶ ತಗ್ಗಿದೆ. ಆದ್ದರಿಂದ, ತಾಂತ್ರಿಕ ಹಾಗೂ ಇತರೆ ವಿಷಯ ಆಧರಿಸಿ ಯೋಜನೆ ಪುನರ್ ರೂಪಿಸಲಾಗುವುದು. ಅಲ್ಲದೇ, ಈ ಯೋಜನೆಯ ವ್ಯಾಪ್ತಿಯಲ್ಲಿ ಶಿಗೇನಹಳ್ಳಿ, ತಂಬ್ರಹಳ್ಳಿ, ಕೃಷ್ಣಾಪುರ, ಚಿಲಗೋಡು ಹಾಗೂ ಇತರೆ ಪ್ರದೇಶಗಳು ಸೇರಿವೆ. ಈ ಕಾಮಗಾರಿ ತ್ವರಿತಗತಿಯಲ್ಲಿ ಪೂರ್ಣಗೊಳಿಸಲು ಪ್ರಯತ್ನಿಸಲಾಗುವುದು ಎಂದು ಉತ್ತರಿಸಿದರು.