ಹಗರಿಬೊಮ್ಮನಹಳ್ಳಿಯಲ್ಲಿ ಶುಕ್ರವಾರ ಪ್ರಶಿಕ್ಷಣ ಕಾರ್ಯಾಗಾರವನ್ನು ಬಿಜೆಪಿ ಜಿಲ್ಲಾಧ್ಯಕ್ಷ ಸಂಜೀವರೆಡ್ಡಿ ಉದ್ಘಾಟಿಸಿದರು. ಜಿಲ್ಲಾ ಉಪಾಧ್ಯಕ್ಷರಾದ ಸಂದೀಪ್ ಸಿಂಗ್, ಬಲ್ಲಾಹುಣಸಿ ರಾಮಣ್ಣ, ಪ್ರಧಾನ ಕಾರ್ಯದರ್ಶಿ ಕೃಷ್ಣ ನಾಯ್ಕ, ಮಂಡಲ ಅಧ್ಯಕ್ಷ ಬೆಣ್ಣಿಕಲ್ಲು ಪ್ರಕಾಶ್ ಮತ್ತಿತರರು ಇದ್ದರು.
ಹಗರಿಬೊಮ್ಮನಹಳ್ಳಿ: ದೇಶದ ಆಡಳಿತ ಚುಕ್ಕಾಣಿ ಹಿಡಿದಿರುವ ಬಿಜೆಪಿ ಸರ್ಕಾರ ದೇಶದ ರಕ್ಷಣೆ ಮಾಡುವಲ್ಲಿ ಯಶಸ್ವಿಯಾಗಿದೆ ಎಂದು ಪಕ್ಷದ ಜಿಲ್ಲಾಧ್ಯಕ್ಷ ಸಂಜೀವರೆಡ್ಡಿ ಬಣ್ಣಿಸಿದರು.
ಪಟ್ಟಣದ ಕನ್ಯಕಾ ಪರಮೇಶ್ವರಿ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ಬಿಜೆಪಿ ಮಂಡಲ ಪದಾಧಿಕಾರಿಗಳಿಗಾಗಿ ಹಮ್ಮಿಕೊಳ್ಳಲಾಗಿದ್ದ ಎರಡು ದಿನಗಳ ಪ್ರಶಿಕ್ಷಣ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು. ಸರ್ಕಾರ ಜಾರಿಗೆ ತಂದಿರುವ ಜನಪರ ಯೋಜನೆಗಳನ್ನು ಸಾಮಾನ್ಯ ಜನರಿಗೆ ತಲುಪಿಸುವುದು ಪದಾಧಿಕಾರಿಗಳು ಹಾಗೂ ಕಾರ್ಯಕರ್ತರ ಪ್ರಮುಖ ಜವಾಬ್ದಾರಿಯಾಗಿದೆ ಎಂದರು.
ಜಿಲ್ಲಾ ಉಪಾಧ್ಯಕ್ಷ ಬಲ್ಲಾಹುಣಸಿ ರಾಮಣ್ಣ ಮಾತನಾಡಿ, ಬಿಜೆಪಿಯು ತಳಮಟ್ಟದಿಂದ ಸಂಘಟಿತವಾಗಿ ಬೆಳೆದಿದೆ. ಪಕ್ಷದ ಗುರಿ ಹಾಗೂ ಉದ್ದೇಶಗಳನ್ನು ಜನರಿಗೆ ತಲುಪಿಸುವುದು ಪ್ರತಿಯೊಬ್ಬರ ಕರ್ತವ್ಯ ಎಂದರು. ಮತ್ತೊಬ್ಬ ಜಿಲ್ಲಾ ಉಪಾಧ್ಯಕ್ಷ ಸಂದೀಪ್ ಸಿಂಗ್ ಮಾತನಾಡಿ, ಕಾಂಗ್ರೆಸ್ ಸರ್ಕಾರದ ಆಡಳಿತ ವೈಖರಿಯಿಂದ ಜನತೆ ಬೇಸತ್ತಿದ್ದಾರೆ. ಅಭಿವೃದ್ಧಿ ಕೆಲಸಗಳು ಕುಂಠಿತವಾಗಿದ್ದು, ಆಡಳಿತವು ನಿಂತ ನೀರಂತಾಗಿದೆ. ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಕಾರ್ಯಕರ್ತರು ಸೈನಿಕರಂತೆ ಕೆಲಸ ಮಾಡಬೇಕು ಎಂದು ತಿಳಿಸಿದರು.
ಮಂಡಲ ಅಧ್ಯಕ್ಷ ಬೆಣ್ಣಿಕಲ್ಲು ಪ್ರಕಾಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೃಷ್ಣ ನಾಯ್ಕ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಪೂಜ್ಯಪ್ಪ, ಜಿಲ್ಲಾ ಯುವಮೋರ್ಚಾ ಘಟಕದ ಅಧ್ಯಕ್ಷ ಕಿಚಡಿ ಕೊಟ್ರೇಶ್, ತಾಲೂಕು ಕಾರ್ಯದರ್ಶಿ ಕೋಗಳಿ ಹನುಮಂತ, ನಗರ ಘಟಕದ ಅಧ್ಯಕ್ಷ ಮಂಜುನಾಥ ಹಿರೇಮಠ, ಪುರಸಭೆ ಮಾಜಿ ಸದಸ್ಯ ವಿ. ಕನಕಪ್ಪ, ಪ್ರಮುಖರಾದ ಅಜ್ಜಯ್ಯ, ರೊಟ್ಟಿ ಕೊಟ್ರಪ್ಪ, ಟಿ. ಮಹೇಂದ್ರ ಮತ್ತಿತರರು ಉಪಸ್ಥಿತರಿದ್ದರು.