ಕುರುಗೋಡಿನ ಕೋಳೂರು ಗಾಂಧಿತತ್ವ ಆಧಾರಿತ ಬಾಲಕಿಯರ ಶಾಲೆಯಲ್ಲಿ ಪೊಲೀಸ್ ಇಲಾಖೆಯಿಂದ ಹಮ್ಮಿಕೊಂಡಿದ್ದ ತೆರೆದ ಮನೆ ಕಾರ್ಯಕ್ರಮದಲ್ಲಿ ಎಎಸ್‌ಐ ಕರಿಯಮ್ಮ ಮಾತನಾಡಿದರು.  
ಬಳ್ಳಾರಿ

ಹದಿಹರೆಯದ ಮನಸ್ಸಿನ ಮೇಲೆ ಹಿಡಿತ ಸಾಧಿಸಿ

ಕುರುಗೋಡು: ಹದಿನೆಂಟು ವರ್ಷದೊಳಗಿನವರಿಗೆ ಲೈಂಗಿಕ ಕಿರುಕುಳ ನೀಡುವುದು, ಶೋಷಣೆಗೆ ಒಳಪಡಿಸಿದಲ್ಲಿ ಅಂಥವರ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗುವುದು ಎಂದು ಎಎಸ್‌ಐ ಕರಿಯಮ್ಮ ಹೇಳಿದರು.
ಕೋಳೂರು ಗಾಂಧಿತತ್ವ ಆಧಾರಿತ ಬಾಲಕಿಯರ ವಸತಿಶಾಲೆಯಲ್ಲಿ ಪೊಲೀಸ್ ಠಾಣೆಯಿಂದ ಆಯೋಜಿಸಿದ್ದ ತೆರೆದ ಮನೆ ಕಾರ್ಯಕ್ರಮದಲ್ಲಿ ಶನಿವಾರ ಮಾತನಾಡಿದರು. ಇತ್ತೀಚೆಗೆ ಅಪ್ರಾಪ್ತರ ಪ್ರೀತಿ, ಪ್ರೇಮ, ಮದುವೆ ಪ್ರಕರಣ ಹೆಚ್ಚುತ್ತಿವೆ. ಇದಕ್ಕೆ ಕಾನೂನಿನಲ್ಲಿ ಅವಕಾಶ ಇಲ್ಲ. ಜೀವನ ಹಾಳು ಮಾಡಿಕೊಳ್ಳುವ ಬದಲು ಉತ್ತಮ ಜೀವನ ನಡೆಸಿ. ದುಶ್ಚಟದಿಂದ ದೂರ ಉಳಿದು, ಉತ್ತಮ ಸಂಸ್ಕಾರ ಮೈಗೂಡಿಸಿಕೊಳ್ಳಬೇಕು. ಹದಿಹರೆಯದ ಮನಸ್ಸಿನ ಮೇಲೆ ಹಿಡಿತ ಸಾಧಿಸಿ ಆಸಕ್ತಿಯಿಂದ ವಿದ್ಯೆ ಕಲಿತು ಉತ್ತಮ ಜೀವನ ರೂಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಉಪಪ್ರಾಚಾರ್ಯೆ ವಿ.ಮಾಲತಿ ಮಾತನಾಡಿ, ಬದುಕಿನಲ್ಲಿ ಶಿಸ್ತು, ತಾಳ್ಮೆ, ಕಲಿಕೆ ಮುಖ್ಯ. ದೈಹಿಕ, ಮಾನಸಿಕ ಕಿರುಕುಳ ಹಾಗೂ ಇತರ ಯಾವುದೇ ದೂರುಗಳಿದ್ದಲ್ಲಿ ಮುಕ್ತವಾಗಿ ಬಂದು ಹೇಳಿಕೊಳ್ಳುವ ಗುಣ ಬೆಳಸಿಕೊಳ್ಳಬೇಕು. ಅದು ಬಿಟ್ಟು ದುಡುಕಿನ ನಿರ್ಧಾರ ತೆಗೆದುಕೊಳ್ಳಬಾರದು ಎಂದರು. ಶಿಕ್ಷಕರಾದ ಹೀನಾ ನಾಜ್, ವಿಶಾಲಾಕ್ಷಿ, ಮಲ್ಲಿಕಾರ್ಜುನ, ವೀರೇಶ್, ಉಮೇಶ್, ಪುನೀತ್ ಇದ್ದರು.