ಬಳ್ಳಾರಿಯ ಜಿಪಂ ಸಭಾಂಗಣದಲ್ಲಿ ಆಯೋಜಿಸಿದ್ದ ಸ್ಪರ್ಧಾತ್ಮಕ ಪರೀಕ್ಷೆ ಹಾಗೂ ವೃತ್ತಿ ಮಾರ್ಗದರ್ಶನ ಕುರಿತು ತರಬೇತಿ ಕಾರ್ಯಾಗಾರವನ್ನು ನ್ಯಾ. ರಾಜೇಶ್ ಎನ್.ಹೊಸಮನೆ ಉದ್ಘಾಟಿಸಿದರು. ಜಿಪಂ ಕಾರ್ಯದರ್ಶಿ ಶಶಿಕಾಂತ ಶಿವಪುರೆ, ಜಿಪಂ ಮುಖ್ಯ ಲೆಕ್ಕಾಧಿಕಾರಿ ವಿನೋದ್, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಎ.ಕೆ.ಜಲಾಲಪ್ಪ , ತಾಲೂಕು ಅಧಿಕಾರಿ ಲೋಕೇಶ್ ಇದ್ದರು
ಬಳ್ಳಾರಿ : ಸಾಧಕರ ಜೀವನ ಶೈಲಿಗಳ ಮೂಲಕ ಪ್ರೇರಿತರಾಗಿ, ಸಿಗುವ ಅವಕಾಶ ಬಳಸಿಕೊಂಡು ಸಾಧಕರಾಗಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ರಾಜೇಶ್ ಎನ್.ಹೊಸಮನೆ ಕಿವಿಮಾತು ಹೇಳಿದರು.
ನಗರದ ಜಿಪಂ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಪಂ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಹಯೋಗದೊಂದಿಗೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ಪೂರ್ವ ಮತ್ತು ಮೆಟ್ರಿಕ್ ನಂತರದ ವಿದ್ಯಾರ್ಥಿನಿಲಯಗಳ ನಿಲಯಾರ್ಥಿಗಳಿಗೆ ಶನಿವಾರ ಆಯೋಜಿಸಿದ್ದ ಸ್ಪರ್ಧಾತ್ಮಕ ಪರೀಕ್ಷೆ ಹಾಗೂ ವೃತ್ತಿ ಮಾರ್ಗದರ್ಶನ ಕುರಿತು ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು. ನಿಲಯ ವಿದ್ಯಾರ್ಥಿಗಳಿಗೆ ಸಾಕಷ್ಟು ಸಮಯಾವಕಾಶ ಸಿಗಲಿದೆ. ಪಠ್ಯದ ಜತೆಗೆ ಸರ್ಕಾರಿ ಹುದ್ದೆಗಳ ನಿರ್ದಿಷ್ಟ ಪಠ್ಯಕ್ರಮಗಳ ಅಧ್ಯಯನ, ಗುಂಪು ಚರ್ಚೆ ಹಾಗೂ ಇತರೆ ಅಧ್ಯಯನ ನಡೆಸಬೇಕು ಎಂದರು.
ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಶೇ. 99 ರಷ್ಟು ಕಠಿಣ ಪರಿಶ್ರಮ, ಕೇವಲ ಶೇ. 1ರಷ್ಟು ಅದೃಷ್ಟದಿಂದ ಮಾತ್ರ ಏನನ್ನಾದರೂ ಸಾಧಿಸಲು ಸಾಧ್ಯ. ಸ್ಪರ್ಧಾತ್ಮಕ ಯುಗದಲ್ಲಿ ಶಾರೀರಿಕ, ಮಾನಸಿಕವಾಗಿ ಸದೃಢರಾಗುವ ಮೂಲಕ ಸತತ ಪರಿಶ್ರಮದಿಂದ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಧೈರ್ಯದಿಂದ ಎದುರಿಸಬೇಕು. ವಿದ್ಯಾರ್ಥಿ ಜೀವನದಲ್ಲಿ ಸಮಯ ಅಮೂಲ್ಯವಾಗಿದ್ದು, ಶಾಲಾ-ಕಾಲೇಜು ಮುಗಿದ ನಂತರವೇ ನಿಜವಾದ ಜೀವನ ಆರಂಭಗೊಳ್ಳುತ್ತದೆ ಎಂದರು.
ಜಿಪಂ ಕಾರ್ಯದರ್ಶಿ ಶಶಿಕಾಂತ್ ಶಿವಪುರೆ ಮಾತನಾಡಿ, ಜೀವನದಲ್ಲಿ ನಾವು ಏನಾಗಬೇಕು ಎಂಬುದು ನಮ್ಮ ಸಾಮರ್ಥ್ಯದ ಮೂಲಕ ದೃಢ ನಿರ್ಧಾರದೊಂದಿಗೆ ಶ್ರದ್ಧೆಯಿಂದ ಅಭ್ಯಾಸ ಮಾಡಿದಾಗ ಮಾತ್ರ ಏನಾದರೂ ಸಾಧನೆ ಮಾಡಲು ಸಾಧ್ಯ. ವಿದ್ಯಾರ್ಥಿ ಜೀವನದಲ್ಲಿ ಕಠಿಣ ಪರಿಶ್ರಮದ ಮೂಲಕ ಕಷ್ಟದ ದಿನಗಳನ್ನು ಎದುರಿಸಿದಾಗ ಮಾತ್ರ ಮುಂದೆ ಒಳ್ಳೆಯ ಸುಖದ ದಿನಗಳನ್ನು ಪಡೆಯಲು ಸಾಧ್ಯವಾಗಲಿದೆ ಎಂದು ತಿಳಿಸಿದರು.
ಶ್ರೀಮೇಧಾ ಡಿಗ್ರಿ ಕಾಲೇಜಿನ ಬಿಸಿಎ ವಿಭಾಗದ ಮುಖ್ಯಸ್ಥ ಜೆ.ಸಿ.ಮಂಜುನಾಥ ಬಳ್ಳೂಳ್ಳಿ, ಬಳ್ಳಾರಿಯ ಭೀಮರಾವ್ ಐಎಎಸ್ ಮತ್ತು ಕೆಎಎಸ್ ಸ್ಟಡಿ ಸರ್ಕಲ್ ನ ನಿರ್ದೇಶಕ ಶೇಖರಪ್ಪ ಮತ್ತು ಎಸ್‌ಇಎಸ್ ಶಿಕ್ಷಣ ಸಂಸ್ಥೆಯ ಡಾ.ಜಗದೀಶ್ ಬಸಾಪುರ ಅವರು ಸ್ಪರ್ಧಾತ್ಮಕ ಪರೀಕ್ಷೆ ಕುರಿತು ವಿಶೇಷ ಉಪನ್ಯಾಸ ನೀಡಿದರು.