ಸಂಡೂರಿನ ತಾಪಂ ಸಭಾಂಗಣದಲ್ಲಿ ಜಿಪಂ ಉಪ ಕಾರ್ಯದರ್ಶಿ ಶಶಿಕಾಂತ್ ಶಿವಪುರೆ ಅಧ್ಯಕ್ಷತೆಯಲ್ಲಿ ಸಾಮಾನ್ಯ ಸಭೆ ನಡೆಯಿತು. ತಹಸೀಲ್ದಾರ್ ಅನಿಲ್ ಕುಮಾರ್, ತಾಪಂ ಇಒ ಮಡಗಿನ ಬಸಪ್ಪ ಇದ್ದರು.
- ಜಿಪಂ ಉಪ ಕಾರ್ಯದರ್ಶಿ ಶಶಿಕಾಂತ್ ಸೂಚನೆ
- ಸಂಡೂರು ತಾಪಂ ಸಾಮಾನ್ಯ ಸಭೆ
ಸಂಡೂರು: ತಾಲೂಕಿನ ಹಲವೆಡೆ ಕುಡಿವ ನೀರಿನ ಸಮಸ್ಯೆಯಿದ್ದು, ಪೂರೈಕೆಗೆ ಕ್ರಮವಹಿಸಬೇಕೆಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಅಧಿಕಾರಿಗಳಿಗೆ ಜಿಪಂ ಉಪಕಾರ್ಯದರ್ಶಿ ಶಶಿಕಾಂತ್ ಶಿವಪುರೆ ಸೂಚಿಸಿದರು.
ಪಟ್ಟಣದ ತಾಪಂ ಸಭಾಂಗಣದಲ್ಲಿ ಆಯೋಜಿಸಿದ್ದ ಸಾಮಾನ್ಯ ಸಭೆಯಲ್ಲಿ ಮಾತನಾಡಿದರು. ನೀರು ಪೂರೈಕೆ ಇಲಾಖೆ ಎಇಇ ವಿನಾಯಕ ಪ್ರತಿಕ್ರಿಯಿಸಿ, ತಾಲೂಕಿನ ಐದು ಗ್ರಾಮಗಳಲ್ಲಿ ಕೊಳವೆಬಾವಿ ನೀರು ಬತ್ತಿದ್ದು, ಆರು ಕೊಳವೆಬಾವಿ ಬಾಡಿಗೆ ಪಡೆಯಲಾಗಿದೆ. ಇಲಾಖೆ ಟ್ಯಾಂಕರ್ ಜತೆಗೆ ಖಾಸಗಿ ಟ್ಯಾಂಕರ್‌ಗಳನ್ನು ಬಾಡಿಗೆ ಪಡೆದು ನೀರು ಪೂರೈಸಲಾಗುವುದು.
ಕೊಳವೆ ಬಾವಿಗಳನ್ನು ರೀಬೋರ್ ಮಾಡಿಸಲು ಅವಕಾಶವಿದ್ದು, ಹೊಸ ಕೊಳವೆಬಾವಿ ಕೊರೆಸಲು ಡಿಸಿ ಅನುಮತಿ ಬೇಕಿದೆ. 8 ಕೊಳವೆ ಬಾವಿಗಳು ದುರಸ್ತಿ ಮಾಡಬೇಕಿದೆ. ತಾಲೂಕಿನಾದ್ಯಂತ 152 ಶುದ್ಧ ಕುಡಿವ ನೀರಿನ ಘಟಕಗಳಿವೆ. ಈ ಪೈಕಿ ಇಲಾಖೆ ನಿರ್ವಹಣೆಯ 92 ಘಟಕಗಳನ್ನು ಗ್ರಾಪಂಗೆ ಹಸ್ತಾಂತರಿಸಲಾಗುವುದು ಎಂದರು.
ತಾಪಂ ಇಒ ಮಡಗಿನ ಬಸಪ್ಪ ಮಾತನಾಡಿ, ಶುದ್ಧ ಕುಡಿವ ನೀರಿನ ಘಟಕಗಳನ್ನು ಗ್ರಾಪಂಗೆ ಹಸ್ತಾಂತರಿಸುವಾಗ ಸುಸ್ಥಿತಿಯಲ್ಲಿರುವುದನ್ನು ಪಿಡಿಒಗಳು ಖಾತ್ರಿಪಡಿಸಿಕೊಳ್ಳಬೇಕು ಎಂದು ಸೂಚಿಸಿದರು.
ಸಮಾಜ ಕಲ್ಯಾಣ ಇಲಾಖೆ ಎಡಿ ಎನ್.ಕೆ.ವೆಂಕಟೇಶ್ ಮಾತನಾಡಿ, ಕಳೆದ ಸಾಲಿನಲ್ಲಿ ಇಲಾಖೆಯ ವಸತಿ ನಿಲಯದಲ್ಲಿದ್ದ ಎಸ್ಸೆಸ್ಸೆಲ್ಸಿಯ ಎಲ್ಲ 118, ಪಿಯುಸಿಯ ಎಂಟು ವಿದ್ಯಾರ್ಥಿಗಳು ಪಾಸಾಗಿದ್ದಾರೆ ಎಂದರು.
ಎಸ್ಟಿ ಕಲ್ಯಾಣಾಧಿಕಾರಿ ರಂಗನಾಥ ದೇಸಾಯಿ ಮಾತನಾಡಿ, ಇಲಾಖೆ ವಸತಿ ನಿಲಯಗಳಲ್ಲಿ ಎಸ್ಸೆಸ್ಸೆಲ್ಸಿಯ 51 ಹಾಗೂ ದ್ವಿತೀಯ ಪಿಯುಸಿಯಲ್ಲಿ ಶೇ.93 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ ಎಂದು ತಿಳಿಸಿದರು.
ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧಿಕಾರಿಗಳು ತಾಲೂಕು ಕೇಂದ್ರಕ್ಕೆ ಬರುವುದಿಲ್ಲ ಎಂಬ ದೂರುಗಳು ಕೇಳಿ ಬರುತ್ತಿವೆ. ವಾರದಲ್ಲಿ ಒಂದು ದಿನವಾದರೂ ಕೇಂದ್ರ ಸ್ಥಾನದಲ್ಲಿರಬೇಕು ಎಂದು ಜಿಪಂ ಉಪ ಕಾರ್ಯದರ್ಶಿ ಶಶಿಕಾಂತ್ ಶಿವಪುರೆ ತಾಕೀತು ಮಾಡಿದರು. ನಿಗಮದ ಅಧಿಕಾರಿ ರಮೇಶ್ ನಾಯ್ಕ ಪ್ರತಿಕ್ರಿಯಿಸಿ, ನನಗೆ ಮೂರು ತಾಲೂಕುಗಳ ಹೊಣೆಯಿದೆ. ನಿಗಮದ ಯೋಜನೆಯ ಎಲ್ಲ ಮಾಹಿತಿ ವೆಬ್‌ಸೈಟ್‌ನಲ್ಲಿ ಲಭ್ಯವಿದೆ. ಅರ್ಜಿಗಳನ್ನು ಆನ್‌ಲೈನ್ ಮೂಲಕವೇ ಹಾಕಬಹುದು ಎಂದರು.
ರಾಬಕೊವಿ ಹಾಲು ಉತ್ಪಾದಕರ ಒಕ್ಕೂಟದ ವಿಸ್ತರಣಾಧಿಕಾರಿ ಮಾತನಾಡಿ, ತಾಲೂಕಿನಲ್ಲಿ 25 ಹಾಲು ಉತ್ಪಾದಕರ ಸಹಕಾರ ಸಂಘಗಳ ಕಚೇರಿ ನಿರ್ಮಾಣಕ್ಕಾಗಿ ಐದು ಕೋಟಿ ರೂ. ಅನುದಾನವಿದೆ. ಗ್ರಾಪಂ ಪಿಡಿಒಗಳು ನಿವೇಶನ ಗುರುತಿಸಿ ನೀಡಬೇಕು ಎಂದು ಕೋರಿದರು. ನಿವೇಶನ ಗುರುತಿಸಿ ನೀಡುವಂತೆ ಪಿಡಿಒಗಳಿಗೆ ಜಿಪಂ ಉಪ ಕಾರ್ಯದರ್ಶಿ ಸೂಚಿಸಿದರು.
ನಿರ್ಮಿತಿ ಕೇಂದ್ರ ಸೇರಿದಂತೆ ಸಭೆಗೆ ಗೈರಾದ ಅಧಿಕಾರಿಗಳಿಗೆ ನೋಟಿಸ್ ನೀಡಲು ಜಿಪಂ ಉಪ ಕಾರ್ಯದರ್ಶಿ ನಿರ್ದೇಶಿಸಿದರು. ತಹಸೀಲ್ದಾರ್ ಅನಿಲ್ ಕುಮಾರ್, ತಾಪಂ ಎಡಿ ಮಹೇಶ್ ಕುಮಾರ್, ವಿವಿಧ ಇಲಾಖೆ ಅಧಿಕಾರಿಗಳಿದ್ದರು.