ಸಂಡೂರು ತಾಲೂಕು ಕುರೇಕುಪ್ಪ ಪುರಸಭೆಗೆ ಸೂರ್ಯನಾರಾಯಣ ಅಧ್ಯಕ್ಷ, ಡಿ.ರೇಖಾ ಉಪಾಧ್ಯಕ್ಷರಾಗಿ ಅವಿರೋಧ ಆಯ್ಕೆಯಾದರು. ಸಂಸದ ಈ.ತುಕಾರಾಮ್, ಶಾಸಕಿ ಅನ್ನಪೂರ್ಣ ತುಕಾರಾಮ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಿ.ಏಕಾಂಭ್ರಪ್ಪ ಇತರರಿದ್ದರು.
ಸಂಡೂರು: ತಾಲೂಕಿನ ತೋರಣಗಲ್ ಹೊಬಳಿ ಕುರೇಕುಪ್ಪ ಪುರಸಭೆಯ 2ನೇ ಅವಧಿಗೆ ಶುಕ್ರವಾರ ಸೂರ್ಯನಾರಾಯಣ ಅಧ್ಯಕ್ಷ, ಡಿ.ರೇಖಾ ಉಪಾಧ್ಯಕ್ಷೆಯಾಗಿ ಅವಿರೋಧ ಆಯ್ಕೆಯಾದರು ಎಂದು ಚುನಾವಣೆ ಅಧಿಕಾರಿ ತಹಸೀಲ್ದಾರ್ ಅನಿಲ್ ಕುಮಾರ್ ಘೋಷಿಸಿದರು.
23 ಸದಸ್ಯ ಬಲದ ಪುರಸಭೆಯಲ್ಲಿ 8 ಕಾಂಗ್ರೆಸ್, 7 ಬಿಜೆಪಿ, 2 ಜೆಡಿಎಸ್, 6 ಪಕ್ಷೇತರ ಸದಸ್ಯರಿದ್ದಾರೆ. ಬಿಜೆಪಿಯ 7, ಜೆಡಿಎಸ್‌ನ 2, 5 ಪಕ್ಷೇತರ ಸದಸ್ಯರು ಚುನಾವಣೆ ಪ್ರಕ್ರಿಯೆಯಲ್ಲಿ ಗೈರಾಗಿದ್ದರು. ಕಾಂಗ್ರೆಸ್‌ನ 8, ಒಬ್ಬ ಪಕ್ಷೇತರ, ಶಾಸಕಿ ಅನ್ನಪೂರ್ಣ ತುಕಾರಾಮ್, ಸಂಸದ ಈ.ತುಕಾರಾಮ್ ಚುನಾವಣೆ ಪ್ರಕ್ರಿಯೆಯಲ್ಲಿ ಭಾಗಿಯಾಗಿದ್ದರು ಎಂದು ಮುಖ್ಯಾಧಿಕಾರಿ ಅರುಣಕುಮಾರ್ ತಿಳಿಸಿದರು.