ಕೂಡ್ಲಿಗಿ ತಾಲೂಕು ಕಚೇರಿಯಲ್ಲಿ ವಿಮುಕ್ತ ದೇವದಾಸಿಯರ ಸಮೀಕ್ಷಾ ವರದಿಯ ಪರಿಶೀಲನಾ ಸಭೆಯಲ್ಲಿ ಸಿಡಿಪಿಒ ಮಾಲಾಂಬಿ ಮಾತನಾಡಿದರು. ತಾಪಂ ಇಒ ನರಸಪ್ಪ, ತಾಲೂಕು ಆರೋಗ್ಯಾಧಿಕಾರಿ ಡಾ.ಎಸ್.ಪಿ.ಪ್ರದೀಪ್, ಉಪ ತಹಸೀಲ್ದಾರ್ ರಾಘವೇಂದ್ರ ಇದ್ದರು. 
ಬಳ್ಳಾರಿ

ಕೂಡ್ಲಿಗಿಯಲ್ಲಿ ವಿಮುಕ್ತ ದೇವದಾಸಿಯರ ಸಮೀಕ್ಷೆ ಪೂರ್ಣ

ಕೂಡ್ಲಿಗಿ: ತಾಲೂಕಿನಲ್ಲಿ ವಿಮುಕ್ತ ದೇವದಾಸಿಯರ ಸಮೀಕ್ಷಾ ಕಾರ್ಯ ಪೂರ್ಣಗೊಂಡಿದ್ದು, ವರದಿಯನ್ನು ಜಿಲ್ಲಾಧಿಕಾರಿಗೆ ಸಲ್ಲಿಸಲಾಗುವುದು ಎಂದು ಸಿಡಿಪಿಒ ಮಾಲಾಂಬಿ ಹೇಳಿದರು.
ತಾಲೂಕು ಕಚೇರಿಯಲ್ಲಿ ತಾಲೂಕು ಮಟ್ಟದ ಸಮಿತಿ ಸಭೆಯಲ್ಲಿ ಮಾತನಾಡಿ, ಅಂಗನವಾಡಿ ಮೇಲ್ವಿಚಾರಕಿ, ಕಾರ್ಯಕರ್ತೆ, ಸ್ಥಳೀಯ ಗ್ರಾಮ ಆಡಳಿತಾಧಿಕಾರಿ ಅಥವಾ ಕಂದಾಯ ನಿರೀಕ್ಷಕ, ಸ್ಥಳೀಯ ಶಾಲೆಯ ಮುಖ್ಯ ಶಿಕ್ಷಕರು ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಒಳಗೊಂಡ ತಂಡ ಅರ್ಜಿ ಸಲ್ಲಿಸಿದ ಪ್ರತಿಯೊಬ್ಬರ ಮನೆಗೆ ಭೇಟಿ ನೀಡಿ ಮಹಜರು ಮಾಡಿ ವರದಿ ಸಿದ್ಧಪಡಿಸಿದೆ.
ಈ ಹಿಂದೆ ನಡೆದ ಸಮೀಕ್ಷೆಯಲ್ಲಿ ಬಿಟ್ಟು ಹೋದ 175 ವಿಮುಕ್ತ ದೇವದಾಸಿಯರನ್ನು ಗುರುತಿಸಲಾಗಿದೆ. ಇವರ ಜೊತೆಗೆ ಈ ಹಿಂದಿನ ಸಮೀಕ್ಷೆಯಲ್ಲಿ ಕೈಬಿಟ್ಟು ಹೋಗಿ ಮೃತಪಟ್ಟಿರುವ 17 ವಿಮುಕ್ತ ದೇವದಾಸಿಯರ ಕುಟುಂಬದ ಸದಸ್ಯರು ಅರ್ಜಿ ಸಲ್ಲಿಸಿದ್ದು, ಇವುಗಳನ್ನೂ ಜಿಲ್ಲಾಧಿಕಾರಿಗೆ ಕಳುಹಿಸಲಾಗುವುದು ಎಂದರು.
ತಾಪಂ ಇಒ ನರಸಪ್ಪ, ತಾಲೂಕು ಆರೋಗ್ಯಾಧಿಕಾರಿ ಡಾ. ಎಸ್.ಪಿ. ಪ್ರದೀಪ್, ಉಪ ತಹಸೀಲ್ದಾರ್ ರಾಘವೇಂದ್ರ, ಸಮಾಜ ಕಲ್ಯಾಣ ಇಲಾಖೆಯ ಅಜ್ಜಯ್ಯ, ಶಿಕ್ಷಣ ಸಂಯೋಜಕ ಎಂ.ಬಿ. ಗುರುಬಸವರಾಜ, ಸ್ನೇಹಾ ಸಂಸ್ಥೆಯ ಸಿಬ್ಬಂದಿ ಸರೋಜ ಹವಳದ ಹಾಗೂ ಮಾಜಿ ದೇವದಾಸಿಯರ ಸಂಘಟನೆಯ ಅಧ್ಯಕ್ಷೆ ವೆಂಕಮ್ಮ, ಅಂಗನವಾಡಿ ಮೇಲ್ವಿಚಾರಕಿಯರಾದ ಅನ್ನಪೂರ್ಣ, ವಿ. ಶೋಭಾ, ಹೃತಿಯಾ ಬೇಗಂ ಸಭೆಯಲ್ಲಿ ಪಾಲ್ಗೊಂಡಿದ್ದರು.