ಬಳ್ಳಾರಿಯ ವಿಎಸ್‌ಕೆ ವಿವಿಯಲ್ಲಿ ಆಯೋಜಿಸಿದ್ದ ಉದ್ಯೋಗ ಮಹತ್ವ ಮತ್ತು ಉದ್ಯೋಗ ಕೋಶದ ಅನುಷ್ಠಾನ ಕಾರ್ಯಕ್ರಮವನ್ನು ವಿವಿ ಕುಲಪತಿ ಪ್ರೊ.ಎಂ.ಮುನಿರಾಜು ಉದ್ಘಾಟಿಸಿದರು. ಇಂಡಿಯಾ ಐಎಎಸ್ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಪಿ.ಸಿ.ಶ್ರೀನಿವಾಸ, ಪ್ಲೇಸ್‌ಮೆಂಟ್ ಸೆಲ್‌ನ ರಾಜ್ಯ ನೋಡಲ್ ಅಧಿಕಾರಿ ಪ್ರೊ.ಎ.ನಾರಾಯಣ ಪ್ರಸಾದ್, ಸಿಬ್ಬಂದಿ ನಾಗರಾಜು, ಸಂಯೋಜಕ ಡಾ.ಸುನಿಲ್ ಇದ್ದರು. ===
- ಸ್ಫರ್ಧಾತ್ಮಕ
- ಪರೀಕ್ಷೆ
- ಉದ್ಯೋಗ
ಬಳ್ಳಾರಿ : ರಾಜ್ಯದಲ್ಲಿ ಕನ್ನಡಿಗರೇ ಸ್ಥಾಪಿಸಿರುವ ಸಂಸ್ಥೆಯಲ್ಲಿ ನೂರಾರು ವಿದ್ಯಾರ್ಥಿಗಳು ಸ್ಫರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸಿ ಯಶಸ್ವಿಯಾಗುತ್ತಿದ್ದಾರೆ ಎಂದು ಇಂಡಿಯಾ ಐಎಎಸ್ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಪಿ.ಸಿ.ಶ್ರೀನಿವಾಸ ಹೇಳಿದರು.
ನಗರದ ವಿಎಸ್‌ಕೆ ವಿವಿ ಸಭಾಂಗಣದಲ್ಲಿ ವಿವಿ ಅಧೀನದ ಕಾಲೇಜುಗಳ ಪ್ಲೇಸ್‌ಮೆಂಟ್ ಸೆಲ್ ಅಧಿಕಾರಿಗಳು ಹಾಗೂ ವಿದ್ಯಾರ್ಥಿಗಳಿಗೆ ಗುರುವಾರ ಆಯೋಜಿಸಿದ್ದ ಎರಡು ದಿನಗಳ ಉದ್ಯೋಗ ಮಹತ್ವ ಮತ್ತು ಉದ್ಯೋಗ ಕೋಶದ ಅನುಷ್ಠಾನ ಕಾರ್ಯಕ್ರಮದಲ್ಲಿ ಮಾತನಾಡಿದರು. ವೇಗವಾಗಿ ಬೆಳೆಯುತ್ತಿರುವ ತಂತ್ರಜ್ಞಾನ ಯುಗದಲ್ಲಿ ಕೋಟ್ಯಾಂತರ ಉದ್ಯೋಗ ಆಕಾಂಕ್ಷಿಗಳು ಉದ್ಯೋಗಕ್ಕಾಗಿ ಹಾತೊರಿಯುತ್ತಿದ್ದಾರೆ. ಹೀಗಾಗಿ ವಿದ್ಯಾರ್ಥಿಗಳು ತಂತ್ರಜ್ಞಾನದ ಸರಿಯಾದ ಬಳಕೆಯಿಂದ ಜೀವನ ರೂಪಿಸಿಕೊಳ್ಳುವ ಶಿಲ್ಪಿಯಾಗಬಹುದು ಎಂದು ಸಲಹೆ ನೀಡಿದರು.
ಪ್ಲೇಸ್‌ಮೆಂಟ್ ಸೆಲ್‌ನ ರಾಜ್ಯ ನೋಡಲ್ ಅಧಿಕಾರಿ ಪ್ರೊ.ಎ.ನಾರಾಯಣ ಪ್ರಸಾದ್ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸದ ಕೊರತೆಯು ಹೆಚ್ಚಾಗುತ್ತಿದೆ. ಅನ್ಯ ರಾಜ್ಯಗಳಿಗೆ ಹೋಲಿಸಿದರೆ ನಮ್ಮ ರಾಜ್ಯದ ವಿದ್ಯಾರ್ಥಿಗಳು ಸ್ಫರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಗಳಿಸುವುದು ತೀರಾ ಕಡಿಮೆ ಎಂದರು.
ತಾತ್ಸಾರ, ಕೀಳರಿಮೆ ತೆಗೆದು ಹಾಕುವ ಮೂಲಕ ನಿಮ್ಮಲ್ಲಿರುವ ನೈಪುಣ್ಯತೆ ಬಳಸಿಕೊಳ್ಳಬೇಕು. ಉದ್ಯಮಶೀಲತೆ, ನಾವೀನ್ಯತೆ ಚಿಂತನೆ ಮೂಡಿಸುವ ಉದ್ದೇಶದಿಂದ ಕಾರ್ಯಾಗಾರವನ್ನು ವಿವಿಯಲ್ಲಿ ಆಯೋಜಿಸಿದ್ದೇವೆ. ಮುಂಬರುವ ದಿನಗಳಲ್ಲಿ ಉದ್ಯೋಗ ಭರವಸೆ ಕೋಶದ ಮೂಲಕ ವಿದ್ಯಾರ್ಥಿಗಳಿಗೆ ಪ್ಲೇಸ್‌ಮೆಂಟ್ ದೊರಕಿಸುವ ಕಾರ್ಯ ಆಗಲಿದೆ ಎಂದು ಹೇಳಿದರು.
ವಿವಿ ಕುಲಪತಿ ಪ್ರೊ.ಎಂ.ಮುನಿರಾಜು ಮಾತನಾಡಿ, ವಿದ್ಯಾರ್ಥಿಗಳಿಗೆ ಐಎಎಸ್, ಕೆಎಎಸ್, ಬ್ಯಾಂಕಿಂಗ್ ಪರೀಕ್ಷೆಗಳಿಗೆ ತಯಾರಿ ಹಾಗೂ ಉದ್ಯೋಗ ಕುರಿತು ಮಾರ್ಗದರ್ಶನದ ಅವಶ್ಯಕತೆಯಿದೆ. ವಿದ್ಯಾರ್ಥಿಗಳು ಉದ್ಯೋಗಾವಕಾಶಗಳನ್ನು ಪಡೆಯಲು ವಿಷಯ ತಜ್ಞರ ಜತೆ ಸಂವಾದ, ಉಪನ್ಯಾಸ, ವಿಚಾರಗೋಷ್ಠಿಗಳಲ್ಲಿ ಭಾಗವಹಿಸುವ ಮೂಲಕ ಪ್ರಯೋಜನ ಪಡೆಯಬೇಕು ಎಂದರು.
ಕಾರ್ಯಾಗಾರದಲ್ಲಿ ವಿವಿಯ ಪ್ರಾಧ್ಯಾಪಕರು, ಕಾಲೇಜುಗಳ ಉಪನ್ಯಾಸಕರು ಹಾಗೂ 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು.