ಹಗರಿಬೊಮ್ಮನಹಳ್ಳಿಯಲ್ಲಿ ಜಿಪಂ ಉಪ ಕಾರ್ಯದರ್ಶಿ ಕೆ.ತಿಮ್ಮಪ್ಪ ಅಧ್ಯಕ್ಷತೆಯಲ್ಲಿ ತಾಪಂ ಸಾಮಾನ್ಯ ಸಭೆ ನಡೆಯಿತು. ತಾಪಂ ಇಒ ಪಾಲಯ್ಯನಕೋಟೆ ವಿಶ್ವನಾಥ ಇತರರಿದ್ದರು. 
ಬಳ್ಳಾರಿ

ಇಲಾಖಾವಾರು ವೆಚ್ಚದ ಮಾಹಿತಿ ಸಲ್ಲಿಸಿ

ಪ್ರಮುಖ ಮುಖ್ಯಾಂಶಗಳು

  • ಆಪರೇಟರ್‌
  • ವೇತನ
  • ಗುತ್ತಿಗೆ
ಹಗರಿಬೊಮ್ಮನಹಳ್ಳಿ: ಸಮಾಜ ಕಲ್ಯಾಣ, ಹಿಂದುಳಿದ ವರ್ಗ, ಆರೋಗ್ಯ, ಶಿಕ್ಷಣ ಸೇರಿದಂತೆ ಇತರ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ವೇತನ, ಪ್ರಮುಖ ಖರ್ಚು ನಿರ್ವಹಣೆಗೆ 133.49 ಕೋಟಿ ರೂ. ಅನುಮೋದನೆ ನೀಡಲಾಗಿದೆ ಎಂದು ತಾಪಂ ಇಒ ಪಾಲಯ್ಯನಕೋಟೆ ವಿಶ್ವನಾಥ ತಿಳಿಸಿದರು.
ಪಟ್ಟಣದ ತಾಪಂ ಸಭಾಂಗಣದಲ್ಲಿ ಜಿಪಂ ಉಪ ಕಾರ್ಯದರ್ಶಿ ಕೆ.ತಿಮ್ಮಪ್ಪ ಅಧ್ಯಕ್ಷತೆಯಲ್ಲಿ ಮಂಗಳವಾರ ಆಯೋಜಿಸಿದ್ದ ಸಾಮಾನ್ಯ ಸಭೆಯಲ್ಲಿ ಮಾತನಾಡಿದರು. ತಾಲೂಕು ವೈದ್ಯಾಧಿಕಾರಿ ಪ್ರವೀಣ್ ಮಾತನಾಡಿ, ಗುತ್ತಿಗೆ ಆಧಾರದ ಮೇಲೆ ಕರ್ತವ್ಯ ನಿರ್ವಹಿಸುವವರ ವೇತನವಾಗಿಲ್ಲ ಎಂದರು. ಬಿಸಿಎಂ ಅಧಿಕಾರಿ ಕೊಟ್ರೇಶ ನಾಯ್ಕ ಮಾತನಾಡಿ, ಕಂಪ್ಯೂಟರ್, ಡೇಟಾ ಎಂಟ್ರಿ ಆಪರೇಟರ್‌ಗಳ ವೇತನವೂ ಆಗಿಲ್ಲ ಎಂದು ಮಾಹಿತಿ ನೀಡಿದರು.
ಪಿಡಬ್ಲುೃಡಿ ಅಧಿಕಾರಿ ಗೈರಾಗಿದ್ದು, ಅವರ ಬದಲಿಗೆ ಬಂದಿದ್ದ ಎಫ್‌ಡಿಸಿ ಸಮರ್ಪಕ ಮಾಹಿತಿ ನೀಡಲಿಲ್ಲ. ಇದರಿಂದಾಗಿ ಜಿಪಂ ಉಪ ಕಾರ್ಯದರ್ಶಿ ತಿಮ್ಮಪ್ಪ ಮತ್ತು ತಾಪಂ ಇಒ ಪಿ.ವಿಶ್ವನಾಥರನ್ನು ಕೆರಳಿಸಿತು. ಶಿಕ್ಷಣ, ಆರೋಗ್ಯ ಹಾಗೂ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ವೆಚ್ಚದ ವರದಿ ನೀಡಿಲ್ಲ. ಕೂಡಲೆ ಸಮಗ್ರ ವರದಿ ನೀಡಬೇಕು ಎಂದು ತಾಪಂ ಇಒ ತಾಕೀತು ಮಾಡಿದರು.
ಸಾಮಾಜಿಕ ಅರಣ್ಯ ಇಲಾಖೆ ಅಧಿಕಾರಿ ಸಿ.ಮಂಜುನಾಥ ಲಭ್ಯವಿರುವ ಸಸಿಗಳ ಬಗ್ಗೆ ಮಾಹಿತಿ ನೀಡಿದರು. ತಾಪಂ ಇಒ ಪ್ರತಿಕ್ರಿಯಿಸಿ ಪರಿಸರ ದಿನವನ್ನು ಅದ್ದೂರಿಯಾಗಿ ಆಚರಿಸಲು ಸಿದ್ಧತೆ ಮಾಡಿಕೊಳ್ಳಿ ಎಂದು ತಿಳಿಸಿದರು. ಅಕ್ಷರ ದಾಸೋಹ ಯೋಜನೆ ಅಧಿಕಾರಿ ರಾಜಕುಮಾರ್ ನಾಯ್ಕ, ಬಿಇಒ ಜಗನ್ನಾಥ್, ಕ್ಷೇತ್ರ ಸಮನ್ವಯಾಧಿಕಾರಿ ಕೆ.ಪ್ರಭಾಕರ ಇತರರಿದ್ದರು.