ಕಂಪ್ಲಿಯಲ್ಲಿ ಆಯೋಜಿಸಿದ್ದ ನಶಮುಕ್ತ ಕರ್ನಾಟಕ ರೈಸ್ ಕಾರ್ಯಕ್ರಮಕ್ಕೆ ಎಸ್ಪಿ ಡಾ.ಸುಮನ್ ಡಿ.ಪನ್ನೇಕರ್ ಚಾಲನೆ ನೀಡಿದರು. ಅಧಿಕಾರಿಗಳಾದ ಪ್ರಸಾದ್ ಗೋಖಲೆ, ಕೆ.ಬಿ.ವಾಸುಕುಮಾರ್, ಡಾ.ರವೀಂದ್ರ ಕನಕೇರಿ, ಟಿ.ಎಂ.ಬಸವರಾಜ, ಪ್ರಾಚಾರ್ಯ ಸಿದ್ದಣ್ಣ ಪರಮೇಶ್ವರ ಇದ್ದರು.
- ಎಸ್ಪಿ ಡಾ.ಸುಮನ್ ಡಿ.ಪನ್ನೇಕರ್ ಸಲಹೆ
- ಕಂಪ್ಲಿ ನಶಮುಕ್ತ ಕರ್ನಾಟಕ ಆಪರೇಷನ್ ರೈಸ್
ಕಂಪ್ಲಿ: ವಿದ್ಯಾರ್ಥಿಗಳು ವಿವೇಚನೆಯಿಂದ ಜೀವನ ಸಾಗಿಸಿದಲ್ಲಿ ಉತ್ತಮ ನಾಡನ್ನು ಕಟ್ಟಲು ಸಾಧ್ಯವಿದೆ ಎಂದು ಎಸ್ಪಿ ಡಾ.ಸುಮನ್ ಡಿ.ಪನ್ನೇಕರ್ ಹೇಳಿದರು.
ಪೊಲೀಸ್ ಇಲಾಖೆಯಿಂದ ಆಯೋಜಿಸಿದ್ದ ನಶಮುಕ್ತ ಕರ್ನಾಟಕಕ್ಕಾಗಿ ಆಪರೇಷನ್ ರೈಸ್ (ರೆಫ್ಯೂಸ್, ಇನ್‌ಫಾರ್ಮ್, ಸಪೋರ್ಟ್, ಎಂಪವರ್) ಕಾರ್ಯಕ್ರಮಕ್ಕೆ ಚಾಲನೆ ನೀಡಿ ಸೋಮವಾರ ಮಾತನಾಡಿದರು. ಯುವಜನತೆ ಮಾದಕವಸ್ತುವಿಗೆ ಬಲಿಯಾಗುವ ಮುನ್ನ ಎಚ್ಚೆತ್ತುಕೊಳ್ಳಬೇಕು. ಮಾದಕ ವಸ್ತುಗಳಿಂದಾಗುವ ದುಷ್ಪಾರಿಣಾಮ ಕುರಿತು ವಿದ್ಯಾರ್ಥಿಗಳಿಗೆ ಉಪನ್ಯಾಸಕರು ತಿಳಿವಳಿಕೆ ನೀಡಬೇಕು. ವಿದ್ಯಾರ್ಥಿಗಳು ಚುರುಕುಗುಣದ ಬುದ್ಧಿವಂತರು, ತೀಕ್ಷ್ಣ ಗ್ರಹಿಕೆಯುಳ್ಳವರಿದ್ದು, ವಿವೇಚನಾ ಶಕ್ತಿ ಬಳಸಿಕೊಳ್ಳುವಲ್ಲಿ ಜಾಗೃತಿವಹಿಸಬೇಕಿದೆ. ಕರ್ನಾಟಕ, ಆಂಧ್ರಪ್ರದೇಶದಲ್ಲಿ ಪದವಿಗೆ ಪ್ರವೇಶ ಪಡೆಯುವ ವಿದ್ಯಾರ್ಥಿನಿಯರ ಸಂಖ್ಯೆ ಕಡಿಮೆಯಾಗಿದೆ. ಬಾಲ್ಯವಿವಾಹ ತಡೆಯಲು ಸಹಾಯವಾಣಿ ಬಳಸಬೇಕು ಎಂದರು.
ಸರ್ಕಾರಿ ಆಸ್ಪತ್ರೆ ವೈದ್ಯಾಧಿಕಾರಿ ರವೀಂದ್ರ ಕನಕೇರಿ ಮಾತನಾಡಿ, ವಿದ್ಯಾರ್ಥಿಗಳು ಉತ್ಸಾಹ, ಕುತೂಹಲ, ಸಹವಾಸ ದೋಷದಿಂದ ಮಾದಕ ವಸ್ತುವಿಗೆ ಬಲಿಯಾಗುತ್ತಿದ್ದು, ಇದರಿಂದ ಪಾರಾಗಲು ಜವಾಬ್ದಾರಿ ಅರಿತುಕೊಳ್ಳಬೇಕು ಎಂದು ಸಲಹೆ ನೀಡಿದರು. ಡಿವೈಎಸ್ಪಿ ಪ್ರಸಾದ್ ಗೋಖಲೆ ಪ್ರಾಸ್ತಾವಿಕ ಮಾತನಾಡಿದರು. ಪಿಐ ಕೆ.ಬಿ.ವಾಸುಕುಮಾರ್ ಪ್ರತಿಜ್ಞಾವಿಧಿ ಬೋಧಿಸಿದರು.ಹಗರಿಬೊಮ್ಮನಹಳ್ಳಿಯ ರಂಗ ಲೋಕ ತಂಡ, ಮರಿಯಮ್ಮನಹಳ್ಳಿಯ ಬಿ.ಎಂ.ಎಸ್.ಪ್ರಭು ನಿರ್ದೇಶನದಲ್ಲಿ ‘ಬೇಡ ಬ್ರೋ’ ನಾಟಕ ಪ್ರದರ್ಶಿಸಿತು. ಕುರುಗೋಡ್ ಪಿಎಸ್‌ಐ ಸುಪ್ರೀತ್ ವಿರೂಪಾಕ್ಷಪ್ಪ, ಇಸಿಒ ಟಿ.ಎಂ.ಬಸವರಾಜ, ಪ್ರಾಚಾರ್ಯ ಸಿದ್ದಣ್ಣ ಪರಮೇಶ್ವರ, ವಿದ್ಯಾರ್ಥಿಗಳು, ಉಪನ್ಯಾಸಕರು ಇದ್ದರು.