ಬಳ್ಳಾರಿಯ ವಿಎಸ್‌ಕೆ ವಿವಿಯಲ್ಲಿ ಆಯೋಜಿಸಿದ್ದ ವಿಜ್ಞಾನ ಪ್ರದರ್ಶನ ಮೇಳದ ಕಾರ್ಯಕ್ರಮವನ್ನು ಡಿಸಿ ನಾಗೇಂದ್ರ ಪ್ರಸಾದ್ ಕೆ., ಉದ್ಘಾಟಿಸಿದರು. ಜಿಪಂ ಸಿಇಒ ಮಹಮ್ಮದ್ ಹ್ಯಾರಿಸ್ ಸುಮೈರ್, ಕುಲಪತಿ ಪ್ರೊ.ಎಂ.ಮುನಿರಾಜು, ಕುಲಸಚಿವರಾದ ವಿ.ಲೋಕೇಶ್, ಪ್ರೊ.ಎನ್.ಎಂ.ಸಾಲಿ, ಹಣಕಾಸು ಅಧಿಕಾರಿ ಸ್ಪೂರ್ತಿ ಕೆ.ಜಿ., ಪ್ರೊ. ಹನುಮೇಶ್ ವೈದ್ಯ, ಪ್ರೊ.ಉದಯ್‌ಕುಮಾರ ಖಡ್ಕೆ, ಪ್ರೊ.ತಿಪ್ಪೇರುದ್ರಪ್ಪ ಇದ್ದರು. 
ಬಳ್ಳಾರಿ

ವಿದ್ಯಾರ್ಥಿಗಳಿಗೆ ತಂತ್ರಜ್ಞಾನ ಅವಶ್ಯಕ

ಎಸ್.ಎರ್ರಿಸ್ವಾಮಿ

ಪ್ರಮುಖ ಮುಖ್ಯಾಂಶಗಳು

  • ವಿಜ್ಞಾನವು ವಿಶ್ವದಾದ್ಯಂತ ವ್ಯಾಪಕವಾಗಿ ಹರಡಿದೆ.
  • ವಿಜ್ಞಾನ ಬೆಳೆದಷ್ಟು ಸವಾಲುಗಳು ಸಾಕಷ್ಟು ಉದ್ಭವಿಸುತ್ತವೆ
  • ಎರಡು ದಿನಗಳ ವಿಜ್ಞಾನ ಪ್ರದರ್ಶನ
ಬಳ್ಳಾರಿ : ಇತ್ತೀಚಿನ ದಿನಗಳಲ್ಲಿ ಎಲ್ಲ ಕ್ಷೇತ್ರಗಳಲ್ಲೂ ತಂತ್ರಜ್ಞಾನ ಅವಶ್ಯಕವಾಗಿದ್ದು, ಸದ್ಬಳಕೆ ಮಾಡಿಕೊಳ್ಳಿ ಎಂದು ಡಿಸಿ ನಾಗೇಂದ್ರ ಪ್ರಸಾದ್ ಕೆ., ಹೇಳಿದರು. ನಗರದ ವಿಎಸ್‌ಕೆ ವಿವಿ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಎರಡು ದಿನಗಳ ವಿಜ್ಞಾನ ಪ್ರದರ್ಶನ ಮೇಳಕ್ಕೆ ಚಾಲನೆ ನೀಡಿ ಮಾತನಾಡಿದರು. ವಿಶ್ವವಿದ್ಯಾಲಯಗಳು ತಂತ್ರಜ್ಞಾನ ಆಧಾರಿತ ಶಿಕ್ಷಣ ಹಾಗೂ ವಿನೂತನ ಮಾದರಿಯ ಗ್ರಂಥಾಲಯಗಳನ್ನು ಹೊಂದಬೇಕು.
ಸಾಮಾನ್ಯ ವಿಜ್ಞಾನದ ಮಹತ್ವ ಕುರಿತು ಜನಸಾಮಾನ್ಯರು ಜ್ಞಾನ ಲಭಿಸಲು ದಾರಿದೀಪವಾಗಬೇಕು. ಇಂದಿನ ಎಐ ಯುಗದಲ್ಲಿ ವಿಜ್ಞಾನವನ್ನು ಸ್ಥಳೀಯ ಭಾಷೆಯಲ್ಲಿ ಜನಸಾಮಾನ್ಯರಿಗೆ ತಲುಪುವ ಹಾಗೆ ರೂಪಾಂತರಗೊಳಿಸುವುದು ಅಗತ್ಯವಿದೆ. ವಿಶ್ವವಿದ್ಯಾಲಯಕ್ಕೆ ಅವಶ್ಯವಿರುವ ಗ್ರಂಥಾಲಯ ಹಾಗೂ ಇನ್ನಿತರ ಮೂಲ ಸೌಲಭ್ಯಗಳನ್ನು ಒದಗಿಸಲು ವಿಶೇಷ ಆಸಕ್ತಿ ವಹಿಸಲಾಗುವುದು ಎಂದರು.
ಜಿಪಂ ಸಿಇಒ ಮಹಮ್ಮದ್ ಹ್ಯಾರಿಸ್ ಸುಮೈರ್ ಮಾತನಾಡಿ, ವಿಜ್ಞಾನವು ಶೋಧನೆ ಮತ್ತು ಕ್ರೀಯಾತ್ಮಕ ವಿಚಾರಗಳಿಗೆ ವೇದಿಕೆಯಾಗಿದೆ. ವಿಜ್ಞಾನ ಬೆಳೆದಷ್ಟು ಸವಾಲುಗಳು ಸಾಕಷ್ಟು ಉದ್ಭವಿಸುತ್ತವೆ. ರಾಮನ್ ಪರಿಣಾಮವನ್ನು ಹಲವಾರು ಕ್ಷೇತ್ರಗಳಲ್ಲಿ ಪರಿಣಾಮಕಾರಿಯಾಗಿ ಬಳಸುತ್ತಿದ್ದೇವೆ. ಈ ನಿಟ್ಟಿನಲ್ಲಿ ಸಂಶೋಧನಗಳಲ್ಲಿ ಎಲ್ಲರೂ ಹೆಚ್ಚಾಗಿ ಭಾಗಿಯಾಗಬೇಕು ಎಂದರು.
ಮೈಸೂರು ವಿವಿ ಕುಲಪತಿ ಪ್ರೊ.ಎನ್.ಕೆ. ಲೋಕನಾಥ್ ಮಾತನಾಡಿ, ಇಂದಿನ ದಿನಮಾನಗಳಲ್ಲಿ ಸ್ಮಾರ್ಟ್ ಫೋನ್‌ಗಳಿಗಿಂತ ಸ್ಮಾರ್ಟ್ ಆಗಿ ಕಾರ್ಯನಿರ್ವಹಿಸಿದಲ್ಲಿ ಎಲ್ಲ ಕ್ಷೇತ್ರದ ವಿದ್ಯಾರ್ಥಿಗಳ ಜ್ಞಾನಾಭಿವೃದ್ಧಿಯಾಗುತ್ತದೆ. ವಿಜ್ಞಾನವು ವಿಶ್ವದಾದ್ಯಂತ ವ್ಯಾಪಕವಾಗಿ ಹರಡಿದೆ. ವಿಜ್ಞಾನ ಆಧಾರಿತ ಪ್ರಯೋಗಗಳು ಮಾನವಿಯತೆಗೆ ಮಾರಕವಾಗಬಾರದು. ವಿದ್ಯಾರ್ಥಿಗಳು ತಮ್ಮಲ್ಲಿರುವ ನವೀನ ವಿಚಾರಧಾರೆಗಳನ್ನು ತಮ್ಮ ಸಂಶೋಧನೆಗಳಾಗಿ ಮಾರ್ಪಡಿಸಬೇಕು ಎಂದರು.
ವಿಎಸ್‌ಕೆ ವಿವಿ ಕುಲಪತಿ ಪ್ರೊ. ಎಂ. ಮುನಿರಾಜು ಮಾತನಾಡಿ, ವೈಜ್ಞಾನಿಕ ಮೇಳಗಳು ವಿದ್ಯಾರ್ಥಿಗಳಲ್ಲಿ ಕಲಿಕಾ ವಾತಾವರಣ
ಉತ್ತೇಜಿಸುತ್ತವೆ. ಸಂಶೋಧಕರುಗಳು ಹೊಸ ಅನ್ವೇಷಣೆ ಹಾಗೂ ಜನಪರ ಅಭಿವೃದ್ಧಿ ಚಿಂತನೆಯುಕ್ತ ವೈಜ್ಞಾನಿಕ ವಿಚಾರಗಳನ್ನು ಹೆಚ್ಚಾಗಿ ಹೊರತರಬೇಕು ಎಂದರು.
ಅನ್ವಯಿಕ ವಿಜ್ಞಾನ ನಿಕಾಯದ ಡೀನ ಪ್ರೊ. ಹನುಮೇಶ ವೈದ್ಯ ಮಾರ್ಗದರ್ಶನದಲ್ಲಿ ಕಂಪ್ಯೂಟರ್ ಸೈನ್ಸ್ ವಿಭಾಗದ ವಿದ್ಯಾರ್ಥಿಗಳಿಂದ ನಿರ್ಮಿತವಾದ ವೆಬ್‌ಸೈಟ್ ಮಾದರಿ (ಎಐ ಇಂಟಿಗ್ರೇಟೆಡ್ ಡೈನಾಮಿಕ ಮಾಡೆಲ್), ಬೆಸ್ಟ್ ಆಫ್ ಬಳ್ಳಾರಿ ಹಾಗೂ ಆಸ್ಕ ವಿಎಸ್‌ಕೆಯು (ವಿಎಸ್‌ಕೆಯು ಚಾಟ್ ಜಿಪಿಟಿ) ಗಳನ್ನು ಪ್ರದರ್ಶಿಸಲಾಯಿತು. ವಿವಿಯ ಎಲ್ಲ ವಿಜ್ಞಾನ ವಿಭಾಗಗಳ ಸಂಶೋಧನಾ, ಸ್ನಾತಕೋತ್ತರ ವಿದ್ಯಾರ್ಥಿಗಳು ಸಿದ್ಧಪಡಿಸಿರುವ 100ಕ್ಕೂ ಅಧಿಕ ವೈವಿಧ್ಯಮಯ ವಿಜ್ಞಾನ ಪ್ರಯೋಗಗಳ ಪ್ರದರ್ಶನದ ಸಂಭ್ರಮಕ್ಕೆ ಸಾಕ್ಷಿಯಾಯಿತು.
===