ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಮಂಗಳವಾರ ವಿದ್ಯಾರ್ಥಿಗಳು, ಶಾಲೆಯ ಸಿಬ್ಬಂದಿ ಮತ್ತು ಪಾಲಕರ ಸಭೆ ನಡೆಸುತ್ತಿರುವ ಪೊಲೀಸರು. 
ಬಳ್ಳಾರಿ

ವಸತಿ ಶಾಲೆಯಲ್ಲಿ ವಿದ್ಯಾರ್ಥಿಗಳ ಮಾರಾಮಾರಿ

ಶಾಮಸುಂದರ್ ಕೊಪ್ಪಳಕರ್

ಪ್ರಮುಖ ಮುಖ್ಯಾಂಶಗಳು

  • ಹಿರಿಯ ಸ್ಟೂಡೆಂಟ್‌ಗಳಿಂದ ಕಿರಿಯರ ಮೇಲೆ ದೌರ್ಜನ್ಯ
  • ಸಿಬ್ಬಂದಿ ನಿರ್ಲಕ್ಷೃಕ್ಕೆ ಪಾಲಕರ ಆಕ್ರೋಶ
ಹೂವಿನಹಡಗಲಿ: ಗಿರಿಯಾಪುರಮಠದ ಮುರಾರ್ಜಿ ದೇಸಾಯಿ ವಸತಿ ಶಾಲೆ ಯಲ್ಲಿ ವಿದ್ಯಾರ್ಥಿಗಳ ನಡುವೆ ಮಾರಾಮಾರಿ ನಡೆದಿದೆ.
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ಎಂಟು ಮತ್ತು ಒಂಬತ್ತನೇ ತರಗತಿ ವಿದ್ಯಾರ್ಥಿಗಳ ಮೇಲೆ ದೌರ್ಜನ್ಯ ಎಸಗುತ್ತಿದ್ದಾರೆ ಎಂದು ಆರೋಪಿಸಿ ಸೋಮವಾರ ರಾತ್ರಿ ವಿದ್ಯಾರ್ಥಿಗಳ ನಡುವೆ ಗಲಾಟೆ ಶುರುವಾಗಿತ್ತು. ವಿದ್ಯಾರ್ಥಿಗಳು ಶಾಲೆಯಿಂದ ಹೊರಬಂದು ಹಿರೇಹಡಗಲಿ ಠಾಣೆಗೆ ತೆರಳಿ ದೂರು ನೀಡಿದ್ದರು. ಸ್ಥಳಕ್ಕೆ ಬಂದ ಪೊಲೀಸರು ಬುದ್ಧಿಹೇಳಿ ತೆರಳಿದ್ದರು. ಆದರೆ, ಮಂಗಳವಾರ ಬೆಳಗ್ಗೆ ಪ್ರಾರ್ಥನೆ ಮುಗಿಯುತ್ತಿದ್ದಂತೆ ಮತ್ತೆ ವಿದ್ಯಾರ್ಥಿಗಳು ಬಡಿದಾಡಿಕೊಂಡಿದ್ದಾರೆ. ಸಿಬ್ಬಂದಿ ಪರಿಸ್ಥಿತಿ ನಿಯಂತ್ರಿಸಲು ಯತ್ನಿಸಿದರೂ ಸಾಧ್ಯವಾಗಿಲ್ಲ. ತುರ್ತಾಗಿ ಕರೆದ ಪಾಲಕರ ಸಭೆಗೂ ಯಾರೂ ಬರಲಿಲ್ಲ.
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ರಾತ್ರಿ ವೇಳೆ ವಸತಿ ಶಾಲೆಯಲ್ಲೇ ಮಾಂಸದ ಅಡುಗೆ ಮಾಡುವುದು, ಇತರರ ತಿಂಡಿ ಕಸಿದು ತಿನ್ನುವುದು ಹಾಗೂ ದಬ್ಬಾಳಿಕೆ ನಡೆಸುವುದು ಮಾಡುತ್ತಿದ್ದರು. ಈ ಕಿರುಕುಳಕ್ಕೆ ಹೆದರಿ ಕೆಲ ವಿದ್ಯಾರ್ಥಿಗಳು ಮನೆಗೆ ತೆರಳಿದ್ದಾರೆ. ಶಾಲಾ ಸಿಬ್ಬಂದಿಯ ಬೇಜವಾಬ್ದಾರಿಯೇ ಇದಕ್ಕೆ ಕಾರಣ ಎಂದು ಆರೋಪಿಸಿ ಪಾಲಕರು ಶಾಲೆ ಎದುರು ಪ್ರತಿಭಟನೆ ನಡೆಸಿದರು.
ನಂತರ ಸ್ಥಳಕ್ಕೆ ಆಗಮಿಸಿದ ಹಿರೇಹಡಗಲಿ ಪೊಲೀಸರು, ಪಾಲಕರು-ಸಿಬ್ಬಂದಿ ಮತ್ತು ವಿದ್ಯಾರ್ಥಿಗಳ ಜಂಟಿ ಸಭೆ ನಡೆಸಿ ವಾತಾವರಣ ತಿಳಿಗೊಳಿಸಿದರು. ಸಭೆಯಲ್ಲಿ ಪ್ರಾಚಾರ್ಯ ಮುರುಗೇಂದ್ರ ಗೌಡ ಎಸ್. ಪಾಟೀಲ್, ಪ್ರಭಾರ ನಿಲಯಪಾಲಕ ಆನಂದನಾಯ್ಕ, ಪಾಲಕರಾದ ಹಾಲೇಶ್, ಚಾಂದ್‌ಬಾಷಾ, ಗಂಗಪ್ಪ, ಮಲ್ಲೇಶ್‌ನಾಯ್ಕ, ಅಶೋಕ ಉಪಸ್ಥಿತರಿದ್ದರು.