ಕೂಡ್ಲಿಗಿ ತಾಪಂನಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಆಡಳಿತಾಧಿಕಾರಿ ಮಾರ್ಕಂಡೇಯ, ಇಒ ನರಸಪ್ಪ ಇದ್ದರು. 
ಬಳ್ಳಾರಿ

ಬರಗಾಲ ನಿರ್ವಹಣೆಗೆ ಕಟ್ಟುನಿಟ್ಟಿನ ಸೂಚನೆ

ಪ್ರಮುಖ ಮುಖ್ಯಾಂಶಗಳು

  • ಕೂಡ್ಲಿಗಿ ತಾಲೂಕು ಪಂಚಾಯಿತಿ ಸಾಮಾನ್ಯ ಸಭೆ
  • ಟಿಸಿ ಚಾರ್ಜ್ ವಿಳಂಬಕ್ಕೆ ತರಾಟೆ
  • ಕುಡಿಯುವ ನೀರು ಪೂರೈಕೆಗೆ ಕ್ರಮ

ಕೂಡ್ಲಿಗಿ: ಈ ಬಾರಿ ಮಳೆ ಇಲ್ಲದೆ ತೀವ್ರ ಬರ ಎದುರಾಗಲಿದ್ದು, ಅಧಿಕಾರಿಗಳು ಕುಡಿವ ನೀರಿನ ಸಮಸ್ಯೆ ತಲೆದೋರದಂತೆ ಕರ್ತವ್ಯ ನಿರ್ವಹಿಸಬೇಕು ಎಂದು ತಾಪಂ ಆಡಳಿತಾಧಿಕಾರಿ ಮಾರ್ಕಂಡೇಯ ಎಚ್ಚರಿಕೆ ನೀಡಿದರು.

ತಾಪಂ ಸಾಮಾನ್ಯ ಸಭೆಯಲ್ಲಿ ಶನಿವಾರ ಮಾತನಾಡಿದ ಅವರು, ಮುಂಗಾರು ಮಳೆ ಬಾರದೆ ಗ್ರಾಮೀಣ ಭಾಗಗಳಲ್ಲಿ ಈಗಾಗಲೇ ನೀರಿನ ಸಮಸ್ಯೆಯ ದೂರುಗಳು ಬಂದಿವೆ. ನೀರಿನ ಸಮಸ್ಯೆ ದಿನದಿಂದ ದಿನಕ್ಕೆ ಉಲ್ಬಣಗೊಳ್ಳುತ್ತಿದ್ದು, ಅಂತರ್ಜಲ ಮಟ್ಟ ಕುಸಿಯುತ್ತಿದೆ. ಈ ನಿಟ್ಟಿನಲ್ಲಿ ಅಧಿಕಾರಿಗಳು ಯಾವ ರೀತಿ ಯೋಜನೆ ರೂಪಿಸಿದ್ದಾರೆ ಎಂಬುದರ ಕುರಿತು ಸಂಕ್ಷಿಪ್ತ ಮಾಹಿತಿ ನೀಡಬೇಕು. 25 ಗ್ರಾಪಂಗಳಲ್ಲಿ ನೀರು ಸರಬರಾಜು ಮಾಡುವ ಮೋಟಾರು ಮತ್ತು ಪಂಪುಗಳನ್ನು ಸುಸ್ಥಿತಿಯಲ್ಲಿರುವಂತೆ ಜಾಗೃತಿ ವಹಿಸಿ, ಗ್ರಾಮಗಳಿಗೆ ನೀರು ಸರಬರಾಜು ಮಾಡುವ ಪೈಪ್‌ಲೈನ್ ಹಾಗೂ ವಿದ್ಯುತ್ ಸರಬರಾಜು ವ್ಯವಸ್ಥೆ ನೋಡಿಕೊಳ್ಳುವಂತೆ ಸೂಚನೆ ನೀಡಿದರು.
ರಾಮದುರ್ಗದಲ್ಲಿ ನೀರಿನ ಸಮಸ್ಯೆ ಎದುರಾಗಿದ್ದು, ಈಗಾಗಲೇ ಖಾಸಗಿ ಬೋರ್‌ವೆಲ್ ಮೂಲಕ ನೀರು ಸರಬರಾಜು ಮಾಡುತ್ತಿದ್ದೇವೆ. ಅದರಂತೆ ಕ್ಯಾಸನಕೆರೆ, ಮೊರಬ ಗೊಲ್ಲರಹಟ್ಟಿ ಮತ್ತು ಶಿವಪುರ ಗೊಲ್ಲರಹಟ್ಟಿಗಳಲ್ಲಿ ಕೊಳವೆಬಾವಿ ಕೊರೆಸಲು ಭೂಗರ್ಭ ಶಾಸ್ತ್ರಜ್ಞ ಅಧಿಕಾರಿಗಳು ಪಾಯಿಂಟ್ ಮಾಡಿದ್ದು, ಶೀಘ್ರದಲ್ಲೇ ಕೊಳವೆಬಾವಿ ಕೊರೆಸಲಾಗುವುದು ಎಂದು ತಾಪಂ ಇಒ ನರಸಪ್ಪ ತಿಳಿಸಿದರು.
ಚಿಲುಮೆಹಳ್ಳಿ ತಾಂಡಾದಲ್ಲಿ ನೀರಿನ ಸಮಸ್ಯೆ ಉಲ್ಬಣಗೊಂಡಿದ್ದು, ಯಾವ ಕ್ರಮ ಕೈಗೊಂಡಿದ್ದಿರಿ ಎಂದು ಮಾರ್ಕಂಡೇಯ ಅವರು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಎಇಇ ಪ್ರಸನ್ನ ಅವರನ್ನು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಪ್ರಸನ್ನ, ಕಳೆದ ನಾಲ್ಕು ತಿಂಗಳಿನಿಂದ ಕುಡಿವ ನೀರು ಸರಬರಾಜು ಮಾಡುವ ಟಿಸಿಯನ್ನು ಜೆಸ್ಕಾಂ ಅಧಿಕಾರಿಗಳು ಚಾರ್ಜ್ ಮಾಡುತ್ತಿಲ್ಲ, ಅನೇಕ ಬಾರಿ ಹೇಳಿದರೂ ಸ್ಪಂದಿಸುತ್ತಿಲ್ಲ ಎಂದು ತಿಳಿಸಿದರು.
ಇದಕ್ಕೆ ಅಪ್ಪಯ್ಯನಹಳ್ಳಿ ಗ್ರಾಪಂ ಪಿಡಿಒ ಹನುಮಂತಪ್ಪ ಕೂಡ ಧ್ವನಿಗೂಡಿಸಿದರು. ಗರಂ ಆದ ಮಾರ್ಕಂಡೇಯ, ನಿಮ್ಮ ಇಲಾಖೆಯ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮಕ್ಕೆ ಮುಂದಾಗುವುದಾಗಿ ಜೆಸ್ಕಾಂ ಎಇ ವೆಂಕಟೇಶ ಅವರನ್ನು ತರಾಟೆಗೆ ತೆಗೆದುಕೊಂಡರು. ಕೂಡಲೇ ಮೇಲಧಿಕಾರಿಗಳ ಗಮನಕ್ಕೆ ತಂದು ಚಾರ್ಜ್ ಮಾಡಿಕೊಡುವುದಾಗಿ ವೆಂಕಟೇಶ ತಿಳಿಸಿದರು. ಸಭೆಯಲ್ಲಿ ಸಿಡಿಪಿಒ, ವಿದ್ಯುತ್, ಕೃಷಿ, ರೇಷ್ಮೆ, ಆರೋಗ್ಯ, ಪಶುಸಂಗೋಪನೆ ಇಲಾಖೆ ಸೇರಿದಂತೆ ಇತರೆ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಯಿತು.