ಸಿರಗುಪ್ಪದಲ್ಲಿ ಶಾಸಕ ಬಿ.ಎಂ.ನಾಗರಾಜ ನಿವಾಸದ ಮುಂದೆ ವಾಲ್ಮೀಕಿ ನಾಯಕ ಸಮುದಾಯದವರು ಧರಣಿ ನಡೆಸಿದರು.  
ಬಳ್ಳಾರಿ

ಹಳ್ಳ ಹಿಡಿದಿವೆ ಎಸ್ಟಿ ಕಲ್ಯಾಣ ಯೋಜನೆಗಳು

ಸಿರಗುಪ್ಪ: ಪರಿಶಿಷ್ಟ ಪಂಗಡದವರ ಸಾಂವಿಧಾನಿಕ ಹಕ್ಕು ಮೀಸಲಾತಿ ಕಬಳಿಸುವವರ ವಿರುದ್ಧ ಹೋರಾಡುವ ಅನಿವಾರ್ಯತೆ ಎದುರಾಗಿದೆ ಎಂದು ಉತ್ತರ ಕರ್ನಾಟಕ ಪ್ರದೇಶ ವಾಲ್ಮೀಕಿ ನಾಯಕ ಸಂಘದ ಯಾದಗಿರಿ ಜಿಲ್ಲಾಧ್ಯಕ್ಷ ಮಾರೆಪ್ಪ ನಾಯಕ ಮಗದಂಪೂರ ಹೇಳಿದರು.
ಕುವೆಂಪು ನಗರದಲ್ಲಿರುವ ಶಾಸಕ ಬಿ.ಎಂ.ನಾಗರಾಜ ನಿವಾಸದ ಮುಂದೆ ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ, ಮಹರ್ಷಿ ವಾಲ್ಮೀಕಿ ವಿದ್ಯಾಭಿವೃದ್ದಿ ಟ್ರಸ್ಟ್, ಉತ್ತರ ಕರ್ನಾಟಕ ಪ್ರದೇಶ ವಾಲ್ಮೀಕಿ ನಾಯಕ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಧರಣಿಯಲ್ಲಿ ಬುಧವಾರ ಮಾತನಾಡಿದರು.
ಪರಿಶಿಷ್ಟ ಪಂಗಡದ ಬೇಡ, ವಾಲ್ಮೀಕಿ ನಾಯಕ ಹಾಗೂ ಇತರ 51 ಬುಡಕಟ್ಟು ಜನಾಂಗದವರ ಮೇಲೆ ನಿರಂತರ ಶೋಷಣೆ, ದಬ್ಬಾಳಿಕೆ, ದೌರ್ಜನ್ಯ ಮತ್ತು ಮೀಸಲಾತಿ ಅನ್ಯಾಯ ನಿತ್ಯ ಹೆಚ್ಚಾಗುತ್ತಿರುವುದು ಖಂಡನೀಯ. ಬೆಳಗಾವಿ, ಬಾಗಲಕೋಟೆ, ವಿಜಯಪುರ, ಕಲಬುರಗಿ, ಯಾದಗಿರಿ, ರಾಯಚೂರು ಕೊಪ್ಪಳ, ವಿಜಯನಗರ, ಬಳ್ಳಾರಿ, ಹಾವೇರಿ ಮುಂತಾದ ಜಿಲ್ಲೆಗಳಲ್ಲಿ ಹಿಂದುಳಿದ ಪ್ರವರ್ಗ-1ರಲ್ಲಿ ಬರುವ ಬೆಸ್ತ, ಕೋಲಿ, ಕಬ್ಬಲಿಗ, ಅಂಬಿಗ ಜನಾಂಗದ ವೃತ್ತಿ ಸೂಚಕವಾದ ತಳವಾರರು ಪರಿಶಿಷ್ಟ ಪಂಗಡದ ಪಟ್ಟಿಗೆ ಸೇರದಿದ್ದರೂ ಪರಿಶಿಷ್ಟ ಪಂಗಡದ ಪಟ್ಟಿಗೆ ಸೇರಿರುವ ನಾಯಕ, ನಾಯ್ಕಡ ತಳವಾರ ಹೆಸರಿನಲ್ಲಿ 25 ಲಕ್ಷಕ್ಕಿಂತ ಹೆಚ್ಚಿನ ನಕಲಿ ಜಾತಿ ಪ್ರಮಾಣ ಪತ್ರ ಪಡೆದುಕೊಂಡಿದ್ದಾರೆ ಎಂದು ದೂರಿದರು.
ಪರಿಶಿಷ್ಟ ಪಂಗಡ ಜನಾಂಗದವರ ಅಭಿವೃದ್ಧಿಗೆ ಮೀಸಲಿಟ್ಟಿರುವ 11 ಸಾವಿರ ಕೋಟಿ ರೂಪಾಯಿಯನ್ನು ಗ್ಯಾರಂಟಿ ಯೋಜನೆಗೆ ಉಪಯೋಗಿಸಿಕೊಂಡಿರುವುದು ಹಾಗೂ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ 187 ಕೋಟಿ ರೂ.ಯನ್ನು ಭ್ರಷ್ಟಾಚಾರ ಮಾಡಿ ನುಂಗಿರುವುದು ಸರಿಯಲ್ಲ. ಪರಿಶಿಷ್ಟ ಪಂಗಡ ಕಲ್ಯಾಣ ಇಲಾಖೆ ಯೋಜನೆಗಳು ಹಳ್ಳ ಹಿಡಿದಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯ ಎಸ್ಸಿ, ಎಸ್ಟಿ ನಕಲಿ ಜಾತಿ ಪ್ರಮಾಣಪತ್ರಗಳ ತಡೆ ಸಮಿತಿ ಅಧ್ಯಕ್ಷ ಶ್ರವಣಕುಮಾರ್ ಡಿ.ನಾಯಕ, ಪ್ರಮುಖರಾದ ನರೇಂದ್ರ ಸಿಂಹ, ನರಸಿಂಹ ನಾಯಕ, ಧರಪ್ಪ ನಾಯಕ, ಯರ‌್ರೆಪ್ಪ, ಯಲ್ಲಪ್ಪ, ಹೊನ್ನಪ್ಪ, ಸಣ್ಣಯಲ್ಲಪ್ಪ, ಮಣಿಕಂಠ, ವೀರಣ್ಣ, ಶ್ರೀಧರ್ ಇತರರಿದ್ದರು.