ನಾನಾ ಕ್ಷೇತ್ರಗಳ ಸಾಧಕರಾದ ಪಿ. ಮೂಕಯ್ಯಸ್ವಾಮಿ, ಹುಚ್ಚಮ್ಮ ಬಸಪ್ಪ ಚೌದ್ರಿ, ಶರಣಪ್ಪ ಮಾಲಿಪಾಟೀಲರಿಗೆ ಬುಕ್ಕಸಾಗರ ಮಠದಲ್ಲಿ ಕರಿಸಿದ್ದೇಶ್ವರ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಪ್ರಮುಖರಾದ ವಿಶ್ವಾರಾಧ್ಯ ಶಿವಾಚಾರ್ಯರು, ಡಾ. ಮುರುಘರಾಜೇಂದ್ರ ಮಹಾಸ್ವಾಮಿಗಳು, ವಾಮದೇವ ಶಿವಾಚಾರ್ಯರು, ಜೆ.ಎನ್. ಗಣೇಶ್, ಸಾಲಿ ಸಿದ್ದಯ್ಯ ಇತರರು ಇದ್ದರು.
ಸದ್ಭಕ್ತರನ್ನು ಉದ್ಧರಿಸಿದ ಶ್ರೀ ಕರಿಸಿದ್ದೇಶ್ವರ
ಕಂಪ್ಲಿ: ಮಠ ಮತ್ತು ಸದ್ಭಕ್ತರನ್ನು ಉದ್ಧರಿಸಲು ಬುಕ್ಕಸಾಗರದ ಲಿಂ. ಕರಿಸಿದ್ದೇಶ್ವರ ಶಿವಾಚಾರ್ಯರು ತಮ್ಮ ಜೀವನವನ್ನೇ ಸವೆಸಿದ್ದಾರೆ ಎಂದು ಮುಗಳಕೋಡದ ಜಿಡಗಾ ಸುಕ್ಷೇತ್ರದ ಪೀಠಾಧಿಪತಿ ಡಾ. ಮುರುಘರಾಜೇಂದ್ರ ಮಹಾಸ್ವಾಮಿಗಳು ಹೇಳಿದರು.
ಬುಕ್ಕಸಾಗರ ಕರಿಸಿದ್ದೇಶ್ವರ ಮಠದಲ್ಲಿ ಲಿಂ. ಕರಿಸಿದ್ದೇಶ್ವರರ 13ನೇ ಪುಣ್ಯಸ್ಮರಣೋತ್ಸವದ ಧರ್ಮಜಾಗೃತಿ ಸಮಾರಂಭದ ದಿವ್ಯಸಾನ್ನಿಧ್ಯ ವಹಿಸಿ ಶನಿವಾರ ಮಾತನಾಡಿದರು.
ಊರು, ನೀರು ಮತ್ತು ಏರಿ ಇದ್ದಲ್ಲಿ ಮಠ ನಿರ್ಮಿಸಬೇಕು ಎನ್ನುವಂತೆ ಬುಕ್ಕಸಾಗರ ಮಠವು ಸದ್ಭಕ್ತರಿಂದ ಆಧ್ಯಾತ್ಮ ಹಾಗೂ ಧಾರ್ಮಿಕ ಜಾಗೃತಿ ಕ್ಷೇತ್ರವಾಗಿ ಸಮೃದ್ಧವಾಗಿ ಬೆಳೆಯುತ್ತಿದೆ. ಕರಿಸಿದ್ದೇಶ್ವರರನ್ನು ನಂಬಿ ನಡೆದರೆ ಭಕ್ತರು ತಾವು ಬೇಡಿದ ಇಷ್ಟಾರ್ಥಗಳನ್ನು ಪಡೆದುಕೊಳ್ಳಬಹುದು ಎಂದು ತಿಳಿಸಿದರು.
ಕರಿಸಿದ್ದೇಶ್ವರರಿಗೆ ನುಡಿನಮನ ಸಲ್ಲಿಸಿ ಮಾತನಾಡಿದ ಎಮ್ಮಿಗನೂರಿನ ವಾಮದೇವ ಶಿವಾಚಾರ್ಯರು, ಕರಿಸಿದ್ದೇಶ್ವರರು ಸದಾ ಅಂತರ್ಮುಖಿಗಳಾಗಿ ಸಕಲರ ಕಲ್ಯಾಣಕ್ಕಾಗಿ ಸಂಕಲ್ಪಿಸುತ್ತಿದ್ದರು.
ಅವರ ತ್ರಿಕಾಲ ಪೂಜಾನಿಷ್ಠೆ, ಗುರುಸೇವೆ, ಭಕ್ತರ ಕಲ್ಯಾಣ, ಆಧ್ಯಾತ್ಮ ಹಾಗೂ ಧಾರ್ಮಿಕ ಚಿಂತನೆ ಮತ್ತು ಜ್ಞಾನಾನುಭವಕ್ಕಾಗಿ ಅವರು ಕೈಗೊಳ್ಳುತ್ತಿದ್ದ ಸಂಚಾರ ಮೊದಲಾದ ಗುಣಗಳು ಯುವಪೀಳಿಗೆಯ ಶಿವಾಚಾರ್ಯರಿಗೆ ಆದರ್ಶವಾಗಿವೆ ಎಂದರು.
ಕಾರ್ಯಕ್ರಮದಲ್ಲಿ ಅಪೆಕ್ಸೃ್ ಬ್ಯಾಂಕ್ ನಿರ್ದೇಶಕ ಪಿ. ಮೂಕಯ್ಯಸ್ವಾಮಿ, ಶಾಲಾ ಕಟ್ಟದ ಸ್ಥಳದಾನಿ ಹುಚ್ಚಮ್ಮ ಬಸಪ್ಪ ಚೌದ್ರಿ ಹಾಗೂ ಮಠದ ಸೇವೆಗಾಗಿ ಮರೇಗೌಡ ಮಾಲಿಪಾಟೀಲರ ಮರಣೋತ್ತರವಾಗಿ ಶರಣಪ್ಪ ಮಾಲಿಪಾಟೀಲರಿಗೆ ಕರಿಸಿದ್ದೇಶ್ವರ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಈ ಸಂದರ್ಭ ಸಾಮೂಹಿಕ ವಿವಾಹದಲ್ಲಿ ಎರಡು ಜೋಡಿ ಗೃಹಸ್ಥಾಶ್ರಮಕ್ಕೆ ಕಾಲಿಟ್ಟವು.
ವಿಶ್ವಾರಾಧ್ಯ ಶಿವಾಚಾರ್ಯರು ಅಧ್ಯಕ್ಷತೆ ವಹಿಸಿದ್ದರು. ಜಾನುಕೋಟಿ ಮಠದ ಸಿದ್ದಲಿಂಗ ಶಿವಾಚಾರ್ಯರು, ಹೂವಿನಹಡಗಲಿಯ ಹಿರಿಯ ಶಾಂತವೀರಸ್ವಾಮಿಗಳು, ಹೆಬ್ಬಾಳ ನಾಗಭೂಷಣ ಶಿವಾಚಾರ್ಯರು, ಅಚಲೇರಿ ಹಿರೇಮಠದ ಸುಪ್ರೀಶ್ವರ ಶಿವಾಚಾರ್ಯರು, ಬೀಳಗಿ ಹಿರೇಮಠದ ರಾಚೋಟೇಶ್ವರ ಶಿವಾಚಾರ್ಯರು, ಶಾಸಕ ಜೆ.ಎನ್. ಗಣೇಶ್, ವೀರಶೈವ ಮಹಾಸಭಾದ ಜಿಲ್ಲಾಧ್ಯಕ್ಷ ಐ. ಸಂಗನಬಸಪ್ಪ ಉಪಸ್ಥಿತರಿದ್ದರು. ಪ್ರಮುಖರಾದ ಬಿ.ಎಲ್. ಸಂಯುಕ್ತರಾಣಿ, ಸಾಲಿ ಸಿದ್ದಯ್ಯ, ಸಾಲಿ ಬಸವರಾಜಸ್ವಾಮಿ, ಕಿಚಡಿ ಕೊಟ್ರೇಶ್, ಎಂ.ಎಸ್. ಶಶಿಧರಸ್ವಾಮಿ, ಚಂದ್ರಯ್ಯ ವಲ್ಲಭಾಪುರ, ವಿಶ್ವನಾಥಸ್ವಾಮಿ, ವೀರಯ್ಯಸ್ವಾಮಿ, ಎಸ್.ಡಿ. ಬಸವರಾಜ, ಗಂಗಾಧರಸ್ವಾಮಿ, ರುದ್ರಯ್ಯ, ಗುರುಶಾಂತ ಸೇರಿದಂತೆ ಸದ್ಭಕ್ತರು ಭಾಗವಹಿಸಿದ್ದರು.