ಎಮ್ಮಿಗನೂರಿನ ಹಂಪಿ ಸಾವಿರದೇವರ ಮಠದಲ್ಲಿ ಶ್ರೀ ವಾಮದೇವ ಶಿವಾಚಾರ್ಯರ ತುಲಾಭಾರ ನಡೆಯಿತು. ವರಸದ್ಯೋಜಾತ ಶಿವಾಚಾರ್ಯರು, ಬುಕ್ಕಸಾಗರದ ವಿಶ್ವಾರಾಧ್ಯ ಶಿವಾಚಾರ್ಯರು, ಹರಗಿನದೋಣಿಯ ಅಭಿನವ ಸಿದ್ಧಲಿಂಗ ಶಿವಾಚಾರ್ಯರು ಇತರರಿದ್ದರು.  
ಬಳ್ಳಾರಿ

ವಿಕೃತಿ ಸಂಸ್ಕೃತಿಯಾಗಲು ಅಧ್ಯಾತ್ಮ ಜ್ಞಾನ ಅಗತ್ಯ

ಶ್ರೀನಾಥ

ಪ್ರಮುಖ ಮುಖ್ಯಾಂಶಗಳು

  • ವಾಮದೇವ ಶಿವಾಚಾರ್ಯರ ಆಶೀರ್ವಚನ
  • ಕಂಪ್ಲಿ ಗುರುಪೂರ್ಣಿಮೆ, ಗುರುವಂದನೆ, ತುಲಾಭಾರ
ಕಂಪ್ಲಿ: ಜಗತ್ತಿನ ರಕ್ಷಣೆಗೆ ಅಧ್ಯಾತ್ಮ ಜ್ಞಾನ ಅವಶ್ಯವಿದ್ದು, ಸದ್ಗುರುವಿನಿಂದ ಅಧ್ಯಾತ್ಮ ಶಿಕ್ಷಣ ಗಳಿಸುವುದೇ ಗುರುಪೂರ್ಣಿಮೆಯ ಉದ್ದೇಶವಾಗಿದೆ ಎಂದು ಎಮ್ಮಿಗನೂರಿನ ಹಂಪಿ ಸಾವಿರದೇವರ ಮಠದ ಶ್ರೀ ವಾಮದೇವ ಶಿವಾಚಾರ್ಯರು ಹೇಳಿದರು.
ಹಂಪಿ ಸಾವಿರದೇವರ ಮಠದ ಶ್ರೀ ಗುರುಸಿದ್ಧಲಿಂಗ ಮಹಾಂತರ 25ನೇ ಸಂಸ್ಮರಣೋತ್ಸವ, ಗುರುಪೂರ್ಣಿಮೆ, ಗುರುವಂದನೆ, ತುಲಾಭಾರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಅಧ್ಯಾತ್ಮ ಜ್ಞಾನ ಹೊಂದಿದ ಕ್ಷತ್ರಿಯ ಬಲ, ದಿಗ್ಬಲದಿಂದ ಸಮಾಜದ ಉನ್ನತಿ ಸಾಧ್ಯ. ಮನುಷ್ಯನಲ್ಲಿನ ವಿಕೃತಿಯನ್ನು ಸಂಸ್ಕೃತಿಯನ್ನಾಗಿ ಪರಿವರ್ತಿಸಲು ಅಧ್ಯಾತ್ಮ ಜ್ಞಾನ ಅಗತ್ಯ ಎಂದರು.
ಹರಪನಹಳ್ಳಿಯ ಶ್ರೀ ವರಸದ್ಯೋಜಾತ ಶಿವಾಚಾರ್ಯರು ಸಾನ್ನಿಧ್ಯವಹಿಸಿ, ಸದ್ಭಕ್ತರಲ್ಲಿ ಅಧ್ಯಾತ್ಮ, ಧಾರ್ಮಿಕ ಪ್ರಜ್ಞೆಯನ್ನು ಮೂಡಿಸುವಲ್ಲಿ ಎಮ್ಮಿಗನೂರಿನ ಹಂಪಿ ಸಾವಿರದೇವರ ಮಠ ಅವಿರತವಾಗಿ ಶ್ರಮಿಸುತ್ತಿದೆ. ಗುರುವಿನ ತತ್ವಾದರ್ಶಗಳನ್ನು ಅರಿತು ಅಳವಡಿಸಿಕೊಳ್ಳಲು ಮುಂದಾಗಬೇಕು ಎಂದರು.
ಮಠದಿಂದ ವಿವಿಧ ಕ್ಷೇತ್ರಗಳ ಸಾಧಕರಾದ ಡಾ.ವೇದಮೂರ್ತಿ ಪಂಪಾಪತಿ ಶಾಸ್ತ್ರಿ, ಓಂಕಾರಿ, ಹೊನ್ನೂರಸಾಬ್, ಸರ್ದಾರ ಬಸವ, ಸಜ್ಜನರ ವೀರೇಶಪ್ಪ, ಮುದ್ದೆ ಸಕ್ರಪ್ಪ, ನಾಯಕರ ದೊಡ್ಡಜಡೆಪ್ಪ, ಆಂಧ್ರದ ಕರಿಬಸಪ್ಪ, ಬುಕ್ಕಸಾಗರದ ವಿಶ್ವಾರಾಧ್ಯ ಶಿವಾಚಾರ್ಯರು, ಹರಗಿನದೋಣಿಯ ಅಭಿನವ ಸಿದ್ಧಲಿಂಗ ಶಿವಾಚಾರ್ಯರು, ಕಮ್ಮರಚೇಡಿನ ಕಲ್ಯಾಣ ಸ್ವಾಮೀಜಿ, ಕರೆವಾಡಿಮಠದ ಮಲ್ಲಿಕಾರ್ಜುನ ಶಿವಾಚಾರ್ಯರು, ಮೈನಳ್ಳಿಯ ಸಿದ್ದೇಶ್ವರ ಶಿವಾಚಾರ್ಯರು, ಮಾಜಿ ಸೈನಿಕ ಹಿರೇಜಂತಕಲ್‌ನ ವೀರೇಶ ಅವರ ತುಲಾಭಾರ ನಡೆಯಿತು. ಮಾಜಿ ಸಚಿವ ಅಲ್ಲಂ ವೀರಭದ್ರಪ್ಪ, ಮಾಜಿ ಶಾಸಕ ಗಾಲಿ ಸೋಮಶೇಖರರೆಡ್ಡಿ, ನಾನಾ ಮಠಾಧೀಶರು, ಭಕ್ತರು ಪಾಲ್ಗೊಂಡಿದ್ದರು.