ಕಂಪ್ಲಿ ಹೊಸ ಬಸ್ ನಿಲ್ದಾಣದ ಹೊರನೋಟ. 
ಬಳ್ಳಾರಿ

ಬಸ್ ಡಿಪೋಗೆ ಜಾಗದ್ದೇ ಸಮಸ್ಯೆ

ಅಶೋಕ್ ಕುಮಾರ್ ಎನ್
ಕಂಪ್ಲಿ: ಪಟ್ಟಣದಲ್ಲಿ ಬಸ್ ಡಿಪೋ ನಿರ್ಮಾಣಕ್ಕೆ ಅನುದಾನ ಮೀಸಲಿಟ್ಟಿದ್ದರೂ ಸೂಕ್ತ ಜಮೀನು ದೊರೆಯದೆ ಕಾಮಗಾರಿ ನನೆಗುದಿಗೆ ಬಿದ್ದಿದೆ. ಲಭ್ಯವಿರುವ ಜಮೀನು ದೂರವಾಗಲಿದೆ ಎಂಬ ಕಾರಣಕ್ಕೆ ಬಸ್ ಡಿಪೋ ನಿರ್ಮಾಣ ಸಾಧ್ಯವಾಗಿಲ್ಲ.
2025ರ ಜ.25ರಂದು ಬಸ್ ಡಿಪೋ ನಿರ್ಮಿಸಲು ಪಟ್ಟಣದಿಂದ 8ಕಿ.ಮೀ.ದೂರದಲ್ಲಿನ ದೇವಸಮುದ್ರ ಕ್ರಾಸ್ ಬಳಿ ಕಣವಿ ತಿಮ್ಮಲಾಪುರ ಗ್ರಾಮ ವ್ಯಾಪ್ತಿಯ ಸರ್ವೇ ನಂಬರ್ 254ರಲ್ಲಿ ಐದು ಎಕರೆ ಜಮೀನು ಗುರುತಿಸಲಾಗಿತ್ತು. ಶಾಸಕ ಜೆ.ಎನ್.ಗಣೇಶ್ ಈ ಸ್ಥಳ ವೀಕ್ಷಿಸಿದ್ದರು. ಕುರುಗೋಡು ಡಿಪೋ ಮ್ಯಾನೇಜರ್ ಚಂದ್ರಶೇಖರ್ ಮಾತನಾಡಿ, ಅಂದಾಜು 8 ಕೋಟಿ ರೂಪಾಯಿಯಲ್ಲಿ ಶೆಡ್, ಮೆಕ್ಯಾನಿಕಲ್, ವಾಷಿಂಗ್ ವಿಭಾಗ, ಕಚೇರಿ ಕಟ್ಟಡ, ಪೆಟ್ರೋಲ್ ಬಂಕ್ ಸೇರಿದಂತೆ ಅಗತ್ಯ ಸೌಲಭ್ಯ ಕಲ್ಪಿಸಲಾಗುವುದು ಎಂದಿದ್ದರು. ಆದರೆ, ಪಟ್ಟಣದ ಬಸ್ ನಿಲ್ದಾಣದಿಂದ ಡಿಪೋ ಸ್ಥಳ ದೂರವಿದೆ ಎನ್ನುವ ಅಪಸ್ವರ ಸಾರಿಗೆ ಇಲಾಖೆಯ ಹಿರಿಯ ಅಧಿಕಾರಿಗಳಿಂದ ಕೇಳಿ ಬಂತು. ಇದರಿಂದಾಗಿ ಕಾಮಗಾರಿ ನನೆಗುದಿಗೆ ಬಿದ್ದಿದೆ.
ಪಟ್ಟಣ ತಾಲೂಕು ಕೇಂದ್ರವಾಗಿ ಒಂಬತ್ತು ವರ್ಷವಾದರೂ ಬಸ್ ಡಿಪೋ ನಿರ್ಮಾಣ ಇನ್ನೂ ಸಾಧ್ಯವಾಗಿಲ್ಲ. ಕಲ್ಯಾಣ ಕರ್ನಾಟಕದ ವಿವಿಧ ಜಿಲ್ಲೆಗಳನ್ನು ರಾಜ್ಯದ ಇತರ ಭಾಗಕ್ಕೆ ಸಂಪರ್ಕ ಕಲ್ಪಿಸುವ ಪಟ್ಟಣ ಬಸ್ ಡಿಪೋ ನಿರ್ಮಾಣವಾದರೆ ಸಾರಿಗೆ ವ್ಯವಸ್ಥೆಯಲ್ಲಿ ಮತ್ತಷ್ಟು ಅನುಕೂಲವಾಗಲಿದೆ. ಕಳೆದ ನಾಲ್ಕು ದಶಕಗಳಿಂದ ಬಸ್ ಡಿಪೋಕ್ಕಾಗಿ ಹೋರಾಟ ನಡೆದಿದ್ದರೂ ಬಸ್ ಡಿಪೋ ನಿರ್ಮಾಣದ ಆಶಯ ಸಾಕಾರಗೊಂಡಿಲ್ಲ.
ಸೋಮಪ್ಪ ಕೆರೆಯ ಆರು ಎಕರೆ ವಿಸ್ತೀರ್ಣದಲ್ಲಿ ಬಸ್ ನಿಲ್ದಾಣದೊಂದಿಗೆ ಡಿಪೋ ನಿರ್ಮಾಣಕ್ಕಾಗಿ ಸಾರಿಗೆ ಸಚಿವರಾಗಿದ್ದ ಸಗೀರ್ ಅಹ್ಮದ್ ಪಟ್ಟಣಕ್ಕೆ ಆಗಮಿಸಿ ಸ್ಥಳ ವೀಕ್ಷಿಸಿದ್ದರು. ರಾಜಕೀಯ ಕಾರಣಗಳಿಂದಾಗಿ ಆಗ ಬಸ್ ಡಿಪೋ ಕೈತಪ್ಪಿತ್ತು. ಕುರುಗೋಡು ಕಡೆಗೆ ಸಾಗುವ 40, ಸಿರಗುಪ್ಪ ಕಡೆಗೆ ಸಾಗುವ 13, ಗಂಗಾವತಿಗೆ 105, ಹೊಸಪೇಟೆಗೆ 76, ಬಳ್ಳಾರಿ ಕಡೆಗೆ ತೆರಳುವ 62 ಬಸ್‌ಗಳು, ಯಲಬುರ್ಗ ಕಡೆಗೆ 10, ಸುತ್ತಲ ಗ್ರಾಮೀಣ ಪ್ರದೇಶಗಳಿಗೆ 15 ಬಸ್‌ಗಳು ಸೇರಿದಂತೆ 350ಕ್ಕೂ ಹೆಚ್ಚಿನ ರೂಟ್ ಬಸ್‌ಗಳು ನಿತ್ಯ ಪಟ್ಟಣಕ್ಕೆ ಬಂದು ಹೋಗುತ್ತವೆ. ಇವುಗಳಲ್ಲಿ ವಾಯವ್ಯ ಕರ್ನಾಟಕದ 4, ಈಶಾನ್ಯ ಕರ್ನಾಟಕದ 276, ಕೆಎಸ್‌ಆರ್‌ಟಿಸಿಯ 24 ಬಸ್‌ಗಳಿವೆ. ಕಂಪ್ಲಿ ಬಸ್ ನಿಲ್ದಾಣದಲ್ಲಿ ನೈಟ್ ಹಾಲ್ಟ್ ಆಗಿ ಸಿರಗುಪ್ಪ, ಹೊಸಪೇಟೆ, ಕುರುಗೋಡು ಕಡೆಗೆ ತೆರಳುವ ಬಸ್‌ಗಳು ಕೂಡ ಇದೆ.