ದೇವರಾಜ್ 
ಬಳ್ಳಾರಿ

ಹಣ ಸುಲಿಗೆ ಎಸ್ಪಿ ಗನ್‌ಮ್ಯಾನ್ ಸೆರೆ

ಎಸ್.ಎರ್ರಿಸ್ವಾಮಿ

ಪ್ರಮುಖ ಮುಖ್ಯಾಂಶಗಳು

  • ಆರೋಪ
ಬಳ್ಳಾರಿ : ಪಡಿತರ ಅಕ್ಕಿ ಅಕ್ರಮ ಸಾಗಣೆದಾರರೊಬ್ಬರ ಬಳಿ ಮೂರು ಲಕ್ಷ ರೂ. ಹಣ ಸುಲಿಗೆ ಮಾಡಿದ ಆರೋಪದಡಿ ಎಸ್ಪಿ ಇಲಾಖೆಯ ಅಂಗರಕ್ಷಕ ದೇವರಾಜ್‌ನನ್ನು ಬಂಧಿಸಿ, ಹುದ್ದೆಯಿಂದ ಅಮಾನತುಗೊಳಿಸಲಾಗಿದೆ. ಈ ಪ್ರಕರಣದಡಿ ದೇವರಾಜ್ ಸೇರಿ ಮೂವರ ವಿರುದ್ಧ ದೂರು ದಾಖಲಾಗಿದೆ.
ಏ.28ರಂದು ಬೆಳಗಿನ ಜಾವ ಅಕ್ಕಿ ವರ್ತಕ ಶರಭಯ್ಯ ಎಂಬುವವರ ಇಬ್ಬರು ಚಾಲಕರು, ಎರಡು ಸರಕು ಸಾಗಣೆ ವಾಹನಗಳಲ್ಲಿ ಪಡಿತರ ಅಕ್ಕಿಯನ್ನು ತುಂಬಿಕೊಂಡು ಮೋಕಾ ಅರಣ್ಯ ರಸ್ತೆ ಮಾರ್ಗವಾಗಿ ಆಂಧ್ರಪ್ರದೇಶಕ್ಕೆ ಸಾಗಿಸುತ್ತಿದ್ದರು.
ಈ ವೇಳೆ ಮೋಕಾ ಅರಣ್ಯ ಪ್ರದೇಶದ ಬಳಿ ಕಾರಿನಲ್ಲಿ ಬಂದ ಅಂಗರಕ್ಷಕ ದೇವರಾಜ್, ವಕೀಲ ಗಾದಿಲಿಂಗಪ್ಪ ಹಾಗೂ ಸಾಯಿರಾಮ್ ಸೇರಿ ಅಕ್ಕಿಯ ವಾಹನಗಳನ್ನು ಅಡ್ಡಗಟ್ಟಿದ್ದಾರೆ. ವಿಷಯ ತಿಳಿದು ಶರಭಯ್ಯ ಸ್ಥಳಕ್ಕೆ ಧಾವಿಸಿದಾಗ ಕಾರಿನಿಂದ ಇಳಿದ ಇಬ್ಬರು ಆರೋಪಿಗಳು ತಾವು ಎಸ್ಪಿ ಸ್ಕ್ವಾಡ್ ಅಧಿಕಾರಿಗಳೆಂದು ಹೇಳಿಕೊಂಡಿದ್ದಾರೆ. ನೀವು ಅಕ್ರಮವಾಗಿ ಅಕ್ಕಿ ಸಾಗಿಸುತ್ತಿದ್ದೀರಿ, ನಿಮ್ಮ ಮೇಲೆ ಕೇಸ್ ಹಾಕುತ್ತವೇ ಎಂಬುದಾಗಿ ಲಾಠಿ ತೋರಿಸಿ ಬೆದರಿಸಿದ ಆರೋಪಿಗಳು ಪ್ರಕರಣ ದಾಖಲಿಸಬಾರದೆಂದರೆ ಐದು ಲಕ್ಷ ರೂ. ನೀಡುವಂತೆ ಬೇಡಿಕೆಯಿಟ್ಟಿದ್ದಾರೆ. ವರ್ತಕ ಶರಭಯ್ಯ ಅವರು ಮೊದಲು 50 ಸಾವಿರ ರೂ. ನೀಡುವುದಾಗಿ ಹೇಳಿದ್ದಾರೆ. ಆ ಬಳಿಕ ಎರಡು ಲಕ್ಷ ರೂ. ನೀಡುವುದಾಗಿ ಕೇಳಿಕೊಂಡರೂ ಒಪ್ಪದ ಆರೋಪಿಗಳು, ಅಂತಿಮವಾಗಿ ಮೂರು ಲಕ್ಷ ರೂ. ಗೆ ಪಟ್ಟು ಹಿಡಿದಿದ್ದಾರೆ. ಹಣ ನೀಡದಿದ್ದರೆ ವಾಹನ ಜಪ್ತಿ ಮಾಡಿ ಕಳುಹಿಸುವುದಾಗಿ ಬೆದರಿಕೆ ಹಾಕಿದ ಹಿನ್ನೆಲೆಯಲ್ಲಿ ಭಯಗೊಂಡ ಶರಭಯ್ಯ ಮೂರು ಲಕ್ಷ ರೂ. ನಗದು ನೀಡಿದ್ದಾನೆ. ಏ.28ರಂದು ಘಟನೆ ನಡೆದಿದ್ದರೂ, ಶರಭಯ್ಯ ಅವರು ಮೇ.6ರಂದು ಮೋಕಾ ಪೊಲೀಸ್ ಠಾಣೆಯಲ್ಲಿ ಮೂವರ ವಿರುದ್ಧ ದೂರು ದಾಖಲಿಸಿದ್ದಾರೆ. ಸದ್ಯ ಪ್ರಕರಣದಲ್ಲಿ ಇಬ್ಬರನ್ನು ಬಂಧಿಸಿ ಕೃತ್ಯಕ್ಕೆ ಬಳಸಿದ ವಾಹನ, ಮೊಬೈಲ್ ಹಾಗೂ ಜಪ್ತಿಪಡಿಸಿಕೊಳ್ಳಲಾಗಿದೆ ಎಂದು ಎಸ್ಪಿ ಡಾ.ಸುಮನ್ ಡಿ.ಪನ್ನೇಕರ್ ವಿವರಿಸಿದರು.
ಕೋಟ್.. ಅಂಗರಕ್ಷಕ ದೇವರಾಜ ಹುದ್ದೆಯಿಂದ ಅಮಾನತುಗೊಳಿಸಲಾಗಿದೆ. ಈ ಪ್ರಕರಣದಲ್ಲಿ ಸಹಕರಿಸಿದ ಸಾಯಿರಾಮ್ ಬಂಧಿಸಲಾಗಿದ್ದು, ಇನ್ನೊಬ್ಬ ಆರೋಪಿ ಗಾದಿಲಿಂಗಪ್ಪ ನಾಪತ್ತೆಯಾಗಿದ್ದಾನೆ. ಜಿಲ್ಲೆಯಲ್ಲಿ ಯಾವುದೇ ತರಹದ ಐಜಿಪಿ, ಎಸ್ಪಿ, ಡಿಎಸ್ಪಿ ಸ್ಕಾೃಡ್‌ಗಳಲ್ಲಿ ಸಾರ್ವಜನಿಕರು ಮೋಸ ಹೋಗಬಾರದು.
- ಡಾ.ಸುಮನ್ ಡಿ.ಪನ್ನೇಕರ್, ಎಸ್ಪಿ. ಬಳ್ಳಾರಿ.