ಬಿ.ಸಿ. ಭಗವಾನ್ 
ಬಳ್ಳಾರಿ

ಶೈಕ್ಷಣಿಕ ಜತೆ ಸಾಮಾಜಿಕ ಕಳಕಳಿ

ಎಸ್.ಎರ್ರಿಸ್ವಾಮಿ

ಪ್ರಮುಖ ಮುಖ್ಯಾಂಶಗಳು

  • ವಿಶ್ವವಿದ್ಯಾಲಯ
ಬಳ್ಳಾರಿ : ದೇಶದ ಅತಿ ದೊಡ್ಡ ವಿಶ್ವವಿದ್ಯಾಲಯಗಳಲ್ಲಿ ಒಂದಾದ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯವು ವಿದ್ಯಾರ್ಥಿಗಳಲ್ಲಿ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸುವ ಜತೆಗೆ ಸಾಮಾಜಿಕ ಬದಲಾವಣೆ ತರಲು ಮುಂದಾಗಿದೆ ಎಂದು ವಿವಿ ಕುಲಪತಿ ಬಿ.ಸಿ. ಭಗವಾನ್ ತಿಳಿಸಿದರು.
ನಗರದಲ್ಲಿ ಬುಧವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು, ರಾಜ್ಯಾದ್ಯಂತ ಮಾದಕ ದ್ರವ್ಯಗಳ ಹಾವಳಿ ಹೆಚ್ಚುತ್ತಿದ್ದು, ಇದನ್ನು ತಡೆಗಟ್ಟಲು ‘ನಶಾ ಮುಕ್ತ ಯುವ ಅಭಿಯಾನ’ ಆಯೋಜಿಸಲಾಗಿದೆ. ಈಗಾಗಲೇ ರಾಜ್ಯದ 16ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಈ ಕಾರ್ಯಕ್ರಮ ಯಶಸ್ವಿಯಾಗಿ ನಡೆದಿದ್ದು, ಯುವಜನತೆಯಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಅಭಿಯಾನದ ಭಾಗವಾಗಿ ವಿದ್ಯಾರ್ಥಿಗಳಿಗೆ ಅಂಗಾಂಗ ದಾನದ ಪ್ರತಿಜ್ಞಾ ವಿಧಿ ಬೋಧಿಸಲಾಗುತ್ತಿದೆ. ಹಲವು ಯುವಕರು ಸ್ವಯಂ ಪ್ರೇರಿತರಾಗಿ ಅಂಗಾಂಗ ದಾನಕ್ಕೆ ನೋಂದಣಿ ಮಾಡಿಸಿಕೊಳ್ಳುತ್ತಿರುವುದು ಆಶಾದಾಯಕ ಬೆಳವಣಿಗೆಯಾಗಿದೆ. ಈವರೆಗೆ ನಡೆದ ವಾಕಥಾನ್‌ಗಳಲ್ಲಿ ರಾಜ್ಯಾದ್ಯಂತ ಸುಮಾರು 85 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಪಾಲ್ಗೊಂಡಿದ್ದಾರೆ. ನಗರದಲ್ಲಿ ನಡೆದ ವಾಕಥಾನ್‌ಗೆ 5 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಅಭಿಯಾನದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಿದ್ದಾರೆ. ರಾಜೀವ್ ಗಾಂಧಿ ವಿವಿಯು ತನ್ನ ಅಡಿಯಲ್ಲಿ ಮೆಡಿಕಲ್, ಹೋಮಿಯೋಪತಿ, ಯೋಗ ಸೇರಿದಂತೆ ವಿವಿಧ ವಿಭಾಗಗಳ 1500 ಕ್ಕೂ ಹೆಚ್ಚು ಕಾಲೇಜುಗಳನ್ನು ಹೊಂದಿದ್ದು, ದೇಶದಲ್ಲೇ ಬೃಹತ್ ಜಾಲ ಹೊಂದಿದೆ. ಈ ಕಾಲೇಜುಗಳಲ್ಲಿ ಕೇವಲ ಶಿಕ್ಷಣ ಮಾತ್ರವಲ್ಲದೆ, ಆರೋಗ್ಯ ಸುಧಾರಣೆ ಮತ್ತು ಶೈಕ್ಷಣಿಕ ಮಟ್ಟವನ್ನು ಉತ್ತೇಜಿಸುವುದು ವಿವಿಯ ಮುಖ್ಯ ಉದ್ದೇಶವಾಗಿದೆ ಎಂದು ವಿವರಿಸಿದರು.
ಮಾದಕ ದ್ರವ್ಯ ಮುಕ್ತ ಸಮಾಜ ನಿರ್ಮಾಣದ ನಿಟ್ಟಿನಲ್ಲಿ ಇದೊಂದು ಸಣ್ಣ ಆರಂಭದ ಹೆಜ್ಜೆಯಾಗಿದೆ. ಇದರೊಂದಿಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ಖಾಲಿ ಇರುವ ಸಿಬ್ಬಂದಿ ಹುದ್ದೆಗಳನ್ನು ಭರ್ತಿ ಮಾಡುವಂತೆ ಸರ್ಕಾರಕ್ಕೆ ಪತ್ರ ಬರೆಯಲಾಗುವುದು, ವಿಶ್ವವಿದ್ಯಾಲಯದಿಂದ ಹಮ್ಮಿಕೊಳ್ಳಲಾಗಿರುವ ವಿವಿಧ ಜನಪರ ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡಿದರು. ಡಾ. ಒಬಲರೆಡ್ಡಿ, ದಿಶಾಬೋಧ್ ನಿರ್ದೇಶಕ ಶಿವರಾಜ್‌ರೆಡ್ಡಿ, ತಾರಾನಾಥ ಸರ್ಕಾರಿ ಆರ್ಯವೇದ ಕಾಲೇಜಿನ ಪ್ರಾಂಶುಪಾಲ ರಾಜಶೇಖರ ಗಾಣಿಗೇರ ಇದ್ದರು.