ರೊದ್ದಂ ಅಭರಣ ಮಳಿಗೆಯಲ್ಲಿ ಎಸ್‌ಐಟಿ ಶೋಧ
ರೊದ್ದಂ ಅಭರಣ ಮಳಿಗೆಯಲ್ಲಿ ಎಸ್‌ಐಟಿ ಶೋಧ
ಬಳ್ಳಾರಿ : ಶಬರಿಮಲೆ ದೇವಸ್ಥಾನದಿಂದ ಚಿನ್ನ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಕೇರಳ ಎಸ್‌ಐಟಿ ಅಧಿಕಾರಿಗಳ ತಂಡ ನಗರದ ರೊದ್ದಂ ಅಭರಣದ ಮಳಿಗೆಯಲ್ಲಿ ಶೋಧ ನಡೆಸಿತು.
ಕೇರಳದಿಂದ ಆಗಮಿಸಿದ್ದ ಎಸ್‌ಐಟಿಯ ಐದು ಅಧಿಕಾರಿಗಳ ತಂಡ ಮಳಿಗೆಯಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಂದಿಯನ್ನು ವಿಚಾರಣೆ ನಡೆಸಿತು. ಈಗಾಗಲೇ ಬಂಧನವಾಗಿರುವ ರೊದ್ದಂ ಅಭರಣದ ಮಾಲೀಕ ಗೋವರ್ದನ ಹಾಗೂ ಸಿಬ್ಬಂದಿಯ ಹೇಳಿಕೆಗಳನ್ನು ತಾಳೆ ಹಾಕಿದರು ಎಂಬುದಾಗಿ ಮೂಲಗಳು ತಿಳಿಸಿದವು.
ಏನಿದು ಘಟನೆ : ಕೇರಳದ ಶಬರಿಮಲೆ ದೇವಸ್ಥಾನದ ಬಾಗಿಲಿನ ದ್ವಾರಪಾಲಕ ಮೂರ್ತಿಗಳ ಕವಚಗಳನ್ನು ಚಿನ್ನಲೇಪನ ಮಾಡಿಸುವ ಸಲುವಾಗಿ ಪ್ರಕರಣದ ಪ್ರಮುಖ ಆರೋಪಿ ಉನ್ನಿಕೃಷ್ಣನ್ ಪೋಟಿ ಅವರಿಗೆ ಹಸ್ತಾಂತರಿಸಲಾಗಿತ್ತು. ಉನ್ನಿಕೃಷ್ಣನ್ ಸೂಚನೆ ಮೇರೆಗೆ ನಗರದ ರೊದ್ದಂ ಅಭರಣದ ಮಾಲೀಕ ಗೋವರ್ಧನ ದ್ವಾರದ ಬಾಗಿಲು ನಿರ್ಮಾಣ ಮಾಡಿದ್ದರು. ಆದರೆ, ದ್ವಾರದ ಬಾಗಿಲು ನಿರ್ಮಾಣ ಮಾಡುವುದಕ್ಕಿಂತ ಮೊದಲಿದ್ದ ದ್ವಾರಪಾಲಕ ಮೂರ್ತಿಗಳ ನಾಲ್ಕುವರೆ ಕೆ.ಜಿ. ಚಿನ್ನ ನಾಪತ್ತೆಯಾಗಿತ್ತು. ಇದರ ಸಂಬಂಧ ಕಳೆದ ತಿಂಗಳು ಎಸ್‌ಐಟಿ ಸಂಸ್ಥೆಗೆ ವಿಚಾರಣೆಗೆ ಹಾಜರಾದ ವೇಳೆ ಗೋವರ್ದನ ಅವರನ್ನು ಡಿ.16 ರಂದು ಬಂಧಿಸಿದ್ದರು.