ದೇವದುರ್ಗ ತಹಸಿಲ್ ಕಚೇರಿ ಕೇಂದ್ರ ಸ್ಥಾನಿಕ ಅಧಿಕಾರಿ ಪ್ರವೀಣ್‌ಗೆ ಜನವಾದಿ ಮಹಿಳಾ ಸಂಘಟನೆ ಮನವಿ ಸಲ್ಲಿಸಿತು. ತಾಲೂಕು ಅಧ್ಯಕ್ಷೆ ಶಕುಂತಲಾ ದೇಸಾಯಿ, ಕಾರ್ಯದರ್ಶಿ ಸುನಂದಾ, ಖಜಾಂಚಿ ಜೈಯಿರ್ ಸುಲ್ತಾನ್ , ಸಹನಾ ಬೇಗಂ ಇತರರಿದ್ದರು.
ದೇವದುರ್ಗ: ಜೂ.30ರಿಂದ ಆರಂಭವಾಗಲಿರುವ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯಲ್ಲಿ ಮಹಿಳಾ ಸ್ನೇಹಿ ಕ್ರಮಗಳನ್ನು ಅನುಸರಿಸಬೇಕು ಎಂದು ಒತ್ತಾಯಿಸಿ ತಹಸೀಲ್ದಾರ್ ನಾಗಮ್ಮ ಕಟ್ಟಿಮನಿಗೆ ಜನವಾದಿ ಮಹಿಳಾ ಸಂಘಟನೆ ಪದಾಧಿಕಾರಿಗಳು ಮಂಗಳವಾರ ಮನವಿ ಸಲ್ಲಿಸಿದರು.
ದೇಶದಾದ್ಯಂತ ನಡೆಯುತ್ತಿರುವ ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ಮಹಿಳೆಯರನ್ನು ಹೆಚ್ಚಾಗಿ ಬಳಸುತ್ತಿದ್ದು ಇದರಿಂದ ಆರೋಗ್ಯ ಸಮಸ್ಯೆ ತೀವ್ರವಾಗಿ ಕಾಡುತ್ತಿದೆ. ಅಲ್ಲದೆ ಪಟ್ಟಿ ಪರಿಷ್ಕರಣೆ ವೇಳೆ ಮಹಿಳಾ ಮತದಾರರ ಹೆಸರು ಕೈಬಿಟ್ಟು ಹೋಗುತ್ತಿವೆ. ಅಕ್ಷರದೋಷ, ತಾಯಿಮನೆ, ಗಂಡನ ಮನೆ ವಿಳಾಸದ ನೆಪದಲ್ಲಿ ಎರಡೂ ಕಡೆ ಹೆಸರು ಕೈಬಿಡುವ ಸಾಧ್ಯತೆಯಿದೆ. ಇದರಿಂದ ಮಹಿಳೆಯರಿಗೆ ಅನ್ಯಾಯವಾಗಲಿದೆ ಎಂದು ದೂರಿದರು.
ತಾರ್ಕಿಕ ವ್ಯತ್ಯಾಸಗಳ ಹೆಸರಿನಲ್ಲಿ ಮತದಾರರನ್ನು ಹೊರಗಿಡಬಾರದು. ಮಹಿಳೆಯರಿಗೆ ದಾಖಲೆಗಳನ್ನು ಒದಗಿಸಲು ವಿಶೇಷ ವ್ಯವಸ್ಥೆ ಮಾಡಬೇಕು. ಬಾಲ್ಯ ವಿವಾಹ ಆಗಿರುವ ಸಂದರ್ಭದಲ್ಲಿ ವಯೋಮಿತಿ ಮಾನದಂಡಗಳನ್ನು ಅನ್ವಯಿಸಬಾರದು.
ವಾಸಸ್ಥಳ ದೃಢೀಕರಣ ಪತ್ರ, ಜಾತಿ ಪ್ರಮಾಣ ಪತ್ರ, ಕುಟುಂಬ ರಿಜಿಸ್ಟರ್ ಪತ್ರ ಸೇರಿ ಅಗತ್ಯ ದಾಖಲೆಗಳನ್ನು ಪಡೆಯಲು ಜಿಲ್ಲಾಡಳಿತ ನೆರವು ನೀಡಬೇಕು. ಧರ್ಮ, ಜಾತಿ ಆಧಾರಿತ ಯಾವುದೇ ಪಕ್ಷಪಾತಕ್ಕೆ ಅವಕಾಶ ನೀಡದಂತೆ ಕ್ರಮಕೈಗೊಳ್ಳಬೇಕು. ಅಂತರ್ಜಾತಿ, ಅಂತರ್ಧರ್ಮೀಯ ವಿವಾಹಿತರು ಹಾಗೂ ಟ್ರಾನ್ಸ್‌ಜೆಂಡರ್ ಸಮುದಾಯದವರಿಗೆ ದಾಖಲೆಗಳ ವಿಚಾರದಲ್ಲಿ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು ಎಂದು ಒತ್ತಾಯಿಸಿದರು.
ತಾಲೂಕು ಅಧ್ಯಕ್ಷೆ ಶಕುಂತಲಾ ದೇಸಾಯಿ, ಕಾರ್ಯದರ್ಶಿ ಸುನಂದಾ, ಖಜಾಂಚಿ ಜೈಯಿರ್ ಸುಲ್ತಾನ್ , ಸಹನಾ ಬೇಗಂ ಇತರರಿದ್ದರು.