ನಾಗೇಂದ್ರ ಪ್ರಸಾದ್ 
ಬಳ್ಳಾರಿ

ಎಸ್‌ಐಆರ್ ಪ್ರಕ್ರಿಯೆ ಆರಂಭ

ಎಸ್.ಎರ್ರಿಸ್ವಾಮಿ

ಪ್ರಮುಖ ಮುಖ್ಯಾಂಶಗಳು

  • ದೋಷರಹಿತ ಮತದಾರರ ಪಟ್ಟಿ
  • ಅತ್ಯಾಧುನಿಕ ತಂತ್ರಜ್ಞಾನ
ಬಳ್ಳಾರಿ : ಜಿಲ್ಲೆಯಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಪ್ರಕ್ರಿಯೆ ಹಮ್ಮಿಕೊಂಡಿದ್ದು, ಮತದಾರರು ಪಟ್ಟಿಯಲ್ಲಿ ಹೆಸರು ನೋಂದಾಯಿಸಿಕೊಳ್ಳುವುದು ಅಗತ್ಯವಾಗಿದೆ ಎಂದು ಡಿಸಿ ನಾಗೇಂದ್ರ ಪ್ರಸಾದ್ .ಕೆ ಹೇಳಿದರು.
ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಅರ್ಹ ಮತದಾರರು ಯಾರೂ ಪಟ್ಟಿಯಿಂದ ಹೊರಗುಳಿಯದಂತೆ ಮತ್ತು ದೋಷರಹಿತ ಮತದಾರರ ಪಟ್ಟಿ ಸಿದ್ಧಪಡಿಸುವ ಉದ್ದೇಶದಿಂದ ಪ್ರಕ್ರಿಯೆ ನಡೆಯಲಿದೆ ಎಂದರು. ಸಾಮಾನ್ಯ ಪರಿಷ್ಕರಣೆಯಲ್ಲಿ ಬಿಎಲ್‌ಒ ಗಳು ಮನೆ ಮನೆಗೆ ಹೋಗುವುದಿಲ್ಲ. ಈ ವಿಶೇಷ ಅಭಿಯಾನದಲ್ಲಿ ನಮ್ಮ ಬೂತ್ ಮಟ್ಟದ ಅಧಿಕಾರಿಗಳು 2025ರ ಜನವರಿ ಮತದಾರರ ಪಟ್ಟಿಯಲ್ಲಿರುವ ಪ್ರತಿಯೊಬ್ಬ ಮತದಾರರ ಮನೆಗೆ ಜೂ.30 ರಿಂದ ಜು. 21ರ ವರೆಗೆ ಖುದ್ದಾಗಿ ಭೇಟಿ ನೀಡಿ, ವಿವರಗಳನ್ನು ಪರಿಶೀಲಿಸಿ ದೃಢೀಕರಿಸಲಿದ್ದಾರೆ ಎಂದು ವಿವರಿಸಿದರು.
ಈ ಬಾರಿ ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಹಾಗೂ ವ್ಯವಸ್ಥಿತ ಮ್ಯಾಪಿಂಗ್ ಪ್ರಕ್ರಿಯೆಯನ್ನು ಅಳವಡಿಸಿಕೊಳ್ಳಲಾಗಿದ್ದು, ಜಿಲ್ಲೆಯಲ್ಲಿ ದಾಖಲೆಯ ಯಶಸ್ಸು ಸಿಕ್ಕಿದೆ. ಜಿಲ್ಲೆಯ 2025ರ ಪಟ್ಟಿಯ ಅನ್ವಯ ಒಟ್ಟು 12,28,958 ಮತದಾರರ ಪೈಕಿ ಬರೋಬ್ಬರಿ 12,00,463 (ಶೇ. 97.68 ರಷ್ಟು) ಜನರನ್ನು ಯಶಸ್ವಿಯಾಗಿ ಪತ್ತೆ ಹಚ್ಚಲಾಗಿದೆ. ಇನ್ನೂ ಮ್ಯಾಪ್ ಆಗದೇ ಉಳಿದಿರುವ 28,495 ಮತದಾರರನ್ನು ಪತ್ತೆ ಹಚ್ಚಲು ಮುಂದಿನ ದಿನಗಳಲ್ಲಿ ವಿಶೇಷ ಕಾರ್ಯಾಚರಣೆ ಹಮ್ಮಿಕೊಳ್ಳಲಾಗುವುದು ಎಂದರು.
ಮತದಾರರಲ್ಲಿ ಜಾಗೃತಿ ಮೂಡಿಸಲು ಜಿಪಂ ಸಿಇಒ ನೇತೃತ್ವದಲ್ಲಿ ವ್ಯಾಪಕ ಸ್ವೀಪ್ ಕಾರ್ಯಕ್ರಮದ ಪ್ರಚಾರ ಹಮ್ಮಿಕೊಳ್ಳಲಾಗುವುದು. ಕರಡು ಪಟ್ಟಿ ಪ್ರಕಟವಾದ ನಂತರ ಪಟ್ಟಿಯನ್ನು ಗ್ರಾಪಂ, ತಾಪಂ ಹಾಗೂ ನಗರಾಡಳಿತ ಸಂಸ್ಥೆಗಳ ಮುಖ್ಯಸ್ಥರ ಕಚೇರಿಗಳಲ್ಲಿ ಸಾರ್ವಜನಿಕರ ಮಾಹಿತಿಗಾಗಿ ಪ್ರಚುರಪಡಿಸಲಾಗುವುದು ಎಂದರು. ಎಡಿಸಿ ಮಹಮ್ಮದ್ ಎನ್.ಜುಬೇರ್, ಎಸಿ ಎಚ್.ಡಿ.ರಾಜೇಶ್ ಇದ್ದರು.
===