ಬಳ್ಳಾರಿ : ರಾಜ್ಯದಲ್ಲಿ ಸಿದ್ದರಾಮಯ್ಯ ಅವರು ಐದು ವರ್ಷ ಸಿಎಂಯಾಗಿ ಪೂರೈಸಲಿದ್ದಾರೆ. ಸದ್ಯಕ್ಕೆ ಸಿಎಂ ಸ್ಥಾನ ಖಾಲಿಯಿಲ್ಲ ಎಂದು ಸಚಿವ ಜಮೀರ್ ಅಹ್ಮದ್ ಖಾನ್ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಸಿಎಂ ಬದಲಾವಣೆ ವಿಚಾರ ಹೈಕಮಾಂಡ್‌ಗೆ ಬಿಟ್ಟಿದ್ದು, ನಮ್ಮಲ್ಲಿ ಚರ್ಚೆಯೇ ನಡೆದಿಲ್ಲ. ನವೆಂಬರ್ ಕ್ರಾಂತಿ, ಬಳಿಕ ಡಿಸೆಂಬರ್ ಕ್ರಾಂತಿ ಎಂಬುದಾಗಿ ಟೀಕಿಸಿದರು. ಈಗ ಬಿಜೆಪಿ ನಾಯಕರು ಸಂಕ್ರಾಂತಿ ಕ್ರಾಂತಿ ಎನ್ನುತ್ತಿದ್ದಾರೆ. ಸರ್ಕಾರದಲ್ಲಿ ಯಾವ ಕ್ರಾಂತಿ, ಭ್ರಾಂತಿಯೂ ಇಲ್ಲ ಎಂದು ವ್ಯಂಗ್ಯವಾಡಿದರು.
ನಗರದ ವಾಲ್ಮೀಕಿ ಪುತ್ಥಳಿ ಅನಾವರಣ ಕಾರ್ಯಕ್ರಮವನ್ನು ಕ್ಯಾಬಿನೆಟ್‌ನಲ್ಲಿ ಚರ್ಚಿಸಿ ಅದ್ಧೂರಿಯಾಗಿ ನೆರವೇರಿಸಲಾಗುವುದು. ಬ್ಯಾನರ್ ಗಲಾಟೆ ಖಂಡಿಸಿ ಬಿಜೆಪಿ ಪಾದಯಾತ್ರೆ ಮಾಡುವುದಕ್ಕೆ ನಮಗೆ ಅಭ್ಯಂತರವಿಲ್ಲ. ಪಾದಯಾತ್ರೆಗೆ ಅನುಮತಿ ನೀಡುವುದು ಪೊಲೀಸರ ನಿರ್ಣಯವಾಗಿದೆ. ಬ್ಯಾನರ್ ಗಲಭೆ ಏಕೆ, ಹೇಗೆ ನಡೆದಿದೆ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯವಾಗಿದೆ. ಯಾವ ಕಾರಣ ಇಟ್ಟುಕೊಂಡು ಪಾದಯಾತ್ರೆ ಮಾಡುತ್ತಾರೆ ಎಂಬುದು ಎಲ್ಲರ ಕಣ್ಮುಂದೆ ಇದೆ. ಸದ್ಯ, ಸಿಐಡಿ ತನಿಖೆ ನಡೆಯುತ್ತಿದ್ದು, ವರದಿ ಬಂದ ಮೇಲೆ ಚರ್ಚಿಸೋಣ. ಬಿಜೆಪಿಯವರಿಗೆ ರಾಜ್ಯದಲ್ಲಿ ಮಾಡುವುದಕ್ಕೆ ಕೆಲಸವಿಲ್ಲದ್ದರಿಂದ ಪಾದಯಾತ್ರೆ ಮಾಡುತ್ತಿದ್ದಾರೆ ಎಂದರು.
ಯುಪಿಎ ಆಡಳಿತವಧಿಯಲ್ಲಿ ಮನರೇಗಾ ಜಾರಿಗೊಳಿಸಲಾಗಿತ್ತು. ಈ ಯೋಜನೆಗೆ ಮಹಾತ್ಮ ಗಾಂಧಿ ಹೆಸರನ್ನು ಇಡಲಾಗಿತ್ತು. ಆದರೆ, ಬಿಜೆಪಿ ಬದಲಾವಣೆ ಮಾಡಲು ಹೊರಟಿದೆ. ಮನರೇಗಾ ಬದಲಾಗಿ ಜಿ ರಾಮ್ ಜೀ ಮಾಡಲು ಉದ್ದೇಶಿಸಿದ್ದು ಖಂಡನೀಯ. ಮುಂದಿನ ದಿನಗಳಲ್ಲಿ ನೋಟಿನಲ್ಲಿರುವ ಮಹಾತ್ಮ ಗಾಂಧಿ ಅವರ ಫೋಟೊ ಸಹ ಬದಲಿಸಬಹುದು. ಹೆಸರು ಬದಲಾವಣೆ ಖಂಡಿಸಿ ವಿಶೇಷ ಕ್ಯಾಬಿನೆಟ್ ಕರೆಯಲಾಗಿದೆ. ರಾಜ್ಯ, ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ಹೋರಾಟ ನಡೆಸಲಾಗುವುದು ಎಂದರು.
ಜ.24 ರಂದು ಹುಬ್ಬಳಿಯಲ್ಲಿ ಮನೆಗಳ ವಿತರಣೆಯ ಬೃಹತ್ ಸಮಾವೇಶ ಹಮ್ಮಿಕೊಂಡಿದ್ದು, ಇದರಲ್ಲಿ 42345 ಮನೆಗಳನ್ನು ಅರ್ಹ ಫಲಾನುಭವಿಗಳಿಗೆ ವಿತರಿಸಲಾಗುವುದು. ಬಿಜೆಪಿ ಸರ್ಕಾರದಲ್ಲಿ ಬಡವರಿಗೆ ಒಂದು ಮನೆ ಕೊಟ್ಟಿರುವ ದಾಖಲೆ ನೀಡಿದರೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವೆ ಎಂದು ಸವಾಲು ಹಾಕಿದರು. ಶಾಸಕರಾದ ಜೆ.ಎನ್.ಗಣೇಶ್, ಭರತ್‌ರೆಡ್ಡಿ, ಸಂಸದ ಈ.ತುಕಾರಾಮ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಲ್ಲಂ ಪ್ರಶಾಂತ, ಮುಖಂಡ ಮಾನಯ್ಯ, ಬೋಯಪಾಟಿ ವಿಷ್ಣು ಇದ್ದರು.