ಹೂವಿನಹಡಗಲಿ ತಾಲೂಕಿನ ಚಿಕ್ಕಕೊಳಚಿ ಗ್ರಾಮದಲ್ಲಿ ಬುಧವಾರ ಪುರಾಣ ಕಾಲದ ಚಂಗಳಿಕವ್ವ-ಗುಡ್ಡಪ್ಪ ವಿವಾಹ ನೆರವೇರಿಸಲಾಯಿತು. ಪ್ರಮುಖರಾದ ಕೆ. ಹಾಲೇಶಪ್ಪ, ಶ್ರೀಧರ, ಬಸವರಾಜ ಮತ್ತಿತರರಿದ್ದರು.
- ಸಮೃದ್ಧ ಮಳೆ-ಬೆಳೆಗಾಗಿ ಶ್ರಾವಣ ಸಪ್ತಮಿ ಆಚರಣೆ
- ಫಲ-ತಾಂಬೂಲ, ವಸ್ತ್ರಗಳ ವಿನಿಮಯ
ಹೂವಿನಹಡಗಲಿ:
ತಾಲೂಕಿನ ಚಿಕ್ಕಕೊಳಚಿ ಗ್ರಾಮದಲ್ಲಿ ಶ್ರಾವಣ ಮಾಸದ ಸಪ್ತಮಿ (ಕರಿ) ದಿನವಾದ ಬುಧವಾರ ಪುರಾಣ ಕಾಲದ ಚಂಗಳಿಕವ್ವ-ಗುಡ್ಡಪ್ಪ (ರತಿ-ಮನ್ಮಥ) ಕಲ್ಯಾಣ ಶಾಸ್ತ್ರೋಕ್ತವಾಗಿ ನೆರವೇರಿತು.
ಕುರುವತ್ತೇರ ಮನೆತನದ ಗಂಡು-ಅಂಗಡೇರ ಮನೆತನದ ಹೆಣ್ಣು ಗೊಂಬೆಗಳಾದ ಚಂಗಳಿಕವ್ವ ಹಾಗೂ ಗುಡ್ಡಪ್ಪಗೆ ಫಲ-ತಾಂಬೂಲ, ವಸ್ತ್ರಗಳ ವಿನಿಮಯ ನಂತರ ಎರಡೂ ಗೊಂಬೆಗಳನ್ನು ಗಂಡಿನ ಮನೆ ಮುಂದೆ ಕೂರಿಸಿ ಗ್ರಾಮಸ್ಥರ ಸಮ್ಮುಖದಲ್ಲಿ ಶಾಸ್ತ್ರೋಕ್ತವಾಗಿ ವಿವಾಹ ನೆರವೇರಿಸಲಾಯಿತು.
ನಂತರ ಗಂಗಾಸ್ಥಳಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಲಾಯಿತು. ಆಷಾಢ ಮಾಸದಲ್ಲಿ ಕುಂಡಗಳಲ್ಲಿ ಹಾಕಿದ್ದ ತರಹೇವಾರಿ ಫಲಗಳನ್ನು ಹಿಡಿದು ತಂದಿದ್ದ ಹೆಣ್ಣುಮಕ್ಕಳು, ಅವುಗಳಿಗೆ ಪೂಜೆ ಸಲ್ಲಿಸಿ ಅದರಲ್ಲಿನ ಐದು ಫಲಗಳನ್ನು ಮುಡಿಗೇರಿಸಿಕೊಂಡು ಮಿಕ್ಕೆಲ್ಲವನ್ನು ಹಳ್ಳದ ನೀರಿನಲ್ಲಿ ವಿಸರ್ಜಿಸಿದರು. ಬಳಿಕ ನೆರೆದಿದ್ದ ಗ್ರಾಮಸ್ಥರಿಗೆ ಫಲಾಹಾರ ನೀಡಿ ಸತ್ಕರಿಸಲಾಯಿತು.
ಗ್ರಾಮದ ಮುಖಂಡ ಕೆ. ಹಾಲೇಶಪ್ಪ ಮಾತನಾಡಿ, ನಮ್ಮ ಹಿರಿಕರ ಕಾಲದಿಂದಲೂ ಈ ಆಚರಣೆ ಚಾಲ್ತಿಯಲ್ಲಿದೆ. ಹೀಗೆ ಮಾಡುವುದರಿಂದ ಸಮೃದ್ಧ ಮಳೆ-ಬೆಳೆ ಆಗಿ ಮನೋಕಾಮನೆಗಳು ಈಡೇರುವ ಜತೆಗೆ ಗ್ರಾಮಕ್ಕೆ ರೋಗರುಜನಗಳು ಬರುವುದಿಲ್ಲವೆಂಬ ನಂಬಿಕೆ ಇದೆ. ಹೀಗಾಗಿ ನಾವೂ ಸಹ ಶಾಸ್ತ್ರೋಕ್ತವಾಗಿ ರತಿ-ಮನ್ಮಥ ಕಲ್ಯಾಣ ನೆರವೇರಿಸಿಕೊಂಡು ಬರುತ್ತಿದ್ದೇವೆ ಎಂದು ತಿಳಿಸಿದರು.