ಬಳ್ಳಾರಿಯ ಜಿಪಂ ಸಭಾಂಗಣದಲ್ಲಿ ಆಯೋಜಿಸಿದ್ದ ರಾಜ್ಯ ಹವಾಮಾನ ಬದಲಾವಣೆಯ ಕುರಿತು ಕ್ರಿಯಾ ಯೋಜನೆ ತರಬೇತಿ ಕಾರ್ಯಾಗಾರವನ್ನು ಜಿಪಂ ಮುಖ್ಯಯೋಜನಾಧಿಕಾರಿ ವಾಗೀಶ್ ಶಿವಾಚಾರ್ಯ ಉದ್ಘಾಟಿಸಿದರು. ಸಂಶೋಧನಾ ವಿಜ್ಞಾನಿಗಳಾದ ಡಾ.ಬಿ.ವಿ.ಶೃತಿ, ದೀಪಾ ರಾಣಿ, ರುಚಿತಾ, ಎನ್ ಆರ್‌ಡಿಎಂಎಸ್ ಅಧಿಕಾರಿ ರಾಮಚಂದ್ರ ರೆಡ್ಡಿ ಇದ್ದರು. 
ಬಳ್ಳಾರಿ

ರೈತರ ಮೇಲೆ ಗಂಭೀರ ಪರಿಣಾಮ

ಎಸ್.ಎರ್ರಿಸ್ವಾಮಿ

ಪ್ರಮುಖ ಮುಖ್ಯಾಂಶಗಳು

  • ಹವಾಮಾನ ಬದಲಾವಣೆಯ ಸವಾಲು
  • ಕೃಷಿ ಚಟುವಟಿಕೆಗಳು ತೀವ್ರ ಸಂಕಷ್ಟ
ಬಳ್ಳಾರಿ : ಹವಾಮಾನ ಬದಲಾವಣೆಯಿಂದ ರೈತರ ಜೀವನೋಪಾಯ ಹಾಗೂ ಆಹಾರ ಭದ್ರತೆಯ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ ಎಂದು ಜಿಪಂ ಮುಖ್ಯಯೋಜನಾಧಿಕಾರಿ ವಾಗೀಶ್ ಶಿವಾಚಾರ್ಯ ಹೇಳಿದರು.
ನಗರದ ಜಿಪಂ ಸಭಾಂಗಣದಲ್ಲಿ ಹವಾಮಾನ ಬದಲಾವಣೆಯ ಸವಾಲುಗಳನ್ನು ಸಮರ್ಥವಾಗಿ ಎದುರಿಸಲು ಮತ್ತು ಸರ್ಕಾರಿ ಯೋಜನೆಗಳ ಯಶಸ್ವಿ ಅನುಷ್ಠಾನಕ್ಕಾಗಿ, ಪರಿಸರ ನಿರ್ವಹಣೆ ಮತ್ತು ನೀತಿ ಸಂಶೋಧನಾ ಸಂಸ್ಥೆ (ಎಂಪ್ರಿ) ಹಾಗೂ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿಯ ಜಂಟಿ ಸಹಯೋಗದೊಂದಿಗೆ ಬುಧವಾರ ಆಯೋಜಿಸಿದ್ದ ರಾಜ್ಯ ಹವಾಮಾನ ಬದಲಾವಣೆಯ ಕುರಿತು ಕ್ರಿಯಾ ಯೋಜನೆ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಕೆಲವೆಡೆ ಅತಿವೃಷ್ಟಿ ಉಂಟಾಗುತ್ತಿದ್ದರೆ, ಇನ್ನು ಕೆಲವು ಕಡೆ ಮಳೆಯ ಕೊರತೆಯಿಂದಾಗಿ ಕೃಷಿ ಚಟುವಟಿಕೆಗಳು ತೀವ್ರ ಸಂಕಷ್ಟಕ್ಕೆ ಸಿಲುಕುತ್ತಿವೆ. ನಿರಂತರವಾಗಿ ಬದಲಾಗುತ್ತಿರುವ ಹವಾಮಾನ ವೈಪರೀತ್ಯವು ಜನರ ಜೀವನಕ್ಕೆ ಬಹುದೊಡ್ಡ ಕಂಟಕವಾಗಿ ಪರಿಣಮಿಸಲಿದೆ. ಹವಾಮಾನ ಬದಲಾವಣೆಯ ವಲಯವಾರು ನೀತಿಗಳು ಮತ್ತು ಅದರ ಅನುಷ್ಠಾನದ ಕುರಿತು ನಾನಾ ಇಲಾಖೆಗಳ ಅಧಿಕಾರಿಗಳಿಗೆ ಜಾಗೃತಿ ಮೂಡಿಸುವುದು ಈ ಕಾರ್ಯಾಗಾರದ ಮುಖ್ಯ ಉದ್ದೇಶವಾಗಿದೆ ಎಂದರು.
ಎಂಪ್ರಿ ಸಂಸ್ಥೆಯ ಸಂಶೋಧನಾ ವಿಜ್ಞಾನಿ ಡಾ.ಬಿ.ವಿ.ಶೃತಿ ಮಾತನಾಡಿ, ಜಿಲ್ಲಾಮಟ್ಟದ ಅಧಿಕಾರಿಗಳ ಸಾಮರ್ಥ್ಯ ವೃದ್ಧಿಸುವ ನಿಟ್ಟಿನಲ್ಲಿ ಕಳೆದ ವರ್ಷ 22 ಜಿಲ್ಲೆಗಳಲ್ಲಿ ತರಬೇತಿ ನೀಡಲಾಗಿತ್ತು. ಈ ಬಾರಿ ರಾಜ್ಯದ ಎಲ್ಲ ಜಿಲ್ಲೆಗಳಿಗೂ ಈ ಕಾರ್ಯಕ್ರಮ ವಿಸ್ತರಿಸಲಾಗಿದೆ ಎಂದರು. ಹವಾಮಾನ ಬದಲಾವಣೆಯ ಕ್ರಿಯಾ ಯೋಜನೆಯ ಕಾರ್ಯನೀತಿ, ಕಾರ್ಯತಂತ್ರಗಳು, ವಿವಿಧ ಇಲಾಖೆಗಳ ಪಾತ್ರ, ಅಲ್ಪಾವಧಿಯ ಹವಾಮಾನ ಮಾಲಿನ್ಯಕಾರಕಗಳ ಪರಿಣಾಮಗಳು ಹಾಗೂ ಜಿಲ್ಲಾಮಟ್ಟದ ದತ್ತಾಂಶಗಳ ಕುರಿತು ಸಮಗ್ರ ಉಪನ್ಯಾಸ ನೀಡಿದರು.