ಹಗರಿಬೊಮ್ಮನಹಳ್ಳಿಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಆಯೋಜಿಸಿದ್ದ, ಮಹಿಳಾ ಜ್ಞಾನ ವಿಕಾಸ ವಿಚಾರ ಗೋಷ್ಠಿಯನ್ನು ಮಾಜಿ ಶಾಸಕ ಎಸ್.ಭೀಮಾನಾಯ್ಕ ಉದ್ಘಾಟಿಸಿದರು. ಪುರಸಭೆ ಅಧ್ಯಕ್ಷ ಎಂ.ಮರಿರಾಮಣ್ಣ, ಉಪಾಧ್ಯಕ್ಷೆ ಅಂಬಿಕಾ ದೇವೇಂದ್ರಪ್ಪ, ಯಡಿಯೂರು ಸಿದ್ದಲಿಂಗೇಶ್ವರ ವಿದ್ಯಾಸಂಸ್ಥೆ ಅಧ್ಯಕ್ಷೆ ಕೆ.ಎಂ.ಇಂದುಮತಿ ತಿಪ್ಪೇಸ್ವಾಮಿ, ಯೋಜನೆಯ ಪ್ರಾದೇಶಿಕ ನಿರ್ದೇಶಕ ಚಂದ್ರಶೇಖರ್ ಇತರರಿದ್ದರು.
- ಮಾಜಿ ಶಾಸಕ ಎಸ್.ಭೀಮಾನಾಯ್ಕ ಅಭಿಪ್ರಾಯ
- ಹಗರಿಬೊಮ್ಮನಹಳ್ಳಿ ಜ್ಞಾನವಿಕಾಸ ವಿಚಾರ ಗೋಷ್ಠಿ
ಹಗರಿಬೊಮ್ಮನಹಳ್ಳಿ: ಮಹಿಳೆಯರು ಸ್ವಯಂ ಉದ್ಯೋಗದಿಂದ ಸ್ವಾವಲಂಬಿಗಳಾಗಲು ಧರ್ಮಸ್ಥಳದ ವೀರೇಂದ್ರ ಹೆಗ್ಗಡೆ, ಹೇಮಾವತಿ ಅಮ್ಮ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಯೋಜನಾಭಿವೃದ್ಧಿ ಸಂಘ ಸಹಕಾರಿಯಾಗಿದೆ ಎಂದು ಮಾಜಿ ಶಾಸಕ ಎಸ್.ಭೀಮಾನಾಯ್ಕ ಅಭಿಪ್ರಾಯಪಟ್ಟರು.
ಪಟ್ಟಣದ ಬೈಪಾಸ್ ರಸ್ತೆಯಲ್ಲಿರುವ ಶಾದಿ ಮಹಲ್‌ನಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಇತ್ತೀಚೆಗೆ ಆಯೋಜಿಸಿದ್ದ ಮಹಿಳಾ ಜ್ಞಾನವಿಕಾಸ ತಾಲೂಕು ಮಟ್ಟದ ವಿಚಾರ ಗೋಷ್ಠಿಯನ್ನು ಉದ್ಘಾಟಿಸಿ ಮಾತನಾಡಿದರು. ಮಹಿಳೆಯರು ಸ್ವಯಂ ಉದ್ಯೋಗಗಳನ್ನು ಮಾಡಿದರೆ ಆರ್ಥಿಕವಾಗಿ ಸಬಲರಾಗಬಹುದು. ಇದರಿಂದ ಕುಟುಂಬ ನಿರ್ವಹಣೆಗೆ, ಮಕ್ಕಳ ವಿದ್ಯಾಭ್ಯಾಸಕ್ಕೆ ಸಹಕಾರಿಯಾಗಲಿದೆ ಎಂದರು.
ಯೋಜನೆಯ ಪ್ರಾದೇಶಿಕ ನಿರ್ದೇಶಕ ಚಂದ್ರಶೇಖರ್ ಮಾತನಾಡಿ, ಕುಟುಂಬದಲ್ಲಿ ಮಹಿಳೆಯರ ಜವಾಬ್ದಾರಿ ಮಹತ್ವದ್ದಾಗಿದೆ. ಈ ಹಿನ್ನೆಲೆಯಲ್ಲಿ ನಮ್ಮ ಯೋಜನೆಯ ಸಹಕಾರ ಕೂಡ ಇದೆ ಎಂದರು.
ಯಡಿಯೂರು ಸಿದ್ಧಲಿಂಗೇಶ್ವರ ವಿದ್ಯಾಸಂಸ್ಥೆ ಅಧ್ಯಕ್ಷೆ ಕೆ.ಎಂ.ಇಂದುಮತಿ ತಿಪ್ಪೇಸ್ವಾಮಿ, ಸಮಾಜದಲ್ಲಿ ಮಹಿಳೆಯರು ಸ್ವಾವಲಂಬಿಗಳಾಗಲು ಅನುಸರಿಸಬೇಕಾದ ಜಾಗೃತಿ ಬಗ್ಗೆ ಉಪನ್ಯಾಸ ನೀಡಿದರು. ಪುರಸಭೆ ಅಧ್ಯಕ್ಷ ಎಂ.ಮರಿರಾಮಣ್ಣ, ಉಪಾಧ್ಯಕ್ಷೆ ಅಂಬಿಕಾ ದೇವೇಂದ್ರಪ್ಪ, ಸದಸ್ಯರಾದ ಮಂಜುಳಾ ಕೃಷ್ಣನಾಯ್ಕ, ಇಸ್ಮಾಯಿಲ್ ಸಾಬ್, ಗಣೇಶ್, ಅಜೀಜ್‌ವುಲ್ಲಾ, ರಾಜೇಶ ಬ್ಯಾಡ್ಗಿ, ಜನಜಾಗೃತಿ ವೇದಿಕೆ ಜಿಲ್ಲಾ ಉಪಾಧ್ಯಕ್ಷೆ ಎಸ್.ಶಿಲ್ಪಕಲಾ, ರಾಜ್ಯ ಸಂಘಟಕ ಅಧ್ಯಕ್ಷ ನಟರಾಜ ಬಾದಾಮಿ, ಜಿಲ್ಲಾ ನಿರ್ದೇಶಕ ಸತೀಶ್ ಶೆಟ್ಟಿ, ಅಮ್ಮ ಸಂಸ್ಥೆಯ ಸಾಯಿರಾಬಾನು, ತಾಲೂಕ ಯೋಜನಾಧಿಕಾರಿ ಚಂದ್ರಶೇಖರ್, ಸಮನ್ವಯಾಧಿಕಾರಿ ಸರಸ್ವತಿ ಇತರರಿದ್ದರು.