ಇಂದಿನಿಂದ ದ್ವಿತೀಯ ಪಿಯು ಪರೀಕ್ಷೆ
ಬಳ್ಳಾರಿ : ಜಿಲ್ಲಾದ್ಯಂತ ಇಂದಿನಿಂದ ದ್ವಿತೀಯ ಪಿಯುಸಿ ಪರೀಕ್ಷೆ ಆರಂಭಗೊಂಡಿದ್ದು, ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಜಿಲ್ಲಾಡಳಿತ ಮತ್ತು ಶಿಕ್ಷಣ ಇಲಾಖೆ ಸಕಲ ಸಿದ್ಧತೆ ಪೂರ್ಣಗೊಳಿಸಿದೆ.
ಇದೇ ಫೆ.28ರಿಂದ ಮಾರ್ಚ್ 17ರವರೆಗೆ ದ್ವಿತೀಯ ಪಿಯು -1 ಪರೀಕ್ಷೆಗಳು ನಡೆಯಲಿವೆ. ಜಿಲ್ಲೆಯಲ್ಲಿ ಒಟ್ಟು 15,652 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಲಿದ್ದು, ಇವರಲ್ಲಿ 13,286 ಹೊಸ ಅಭ್ಯರ್ಥಿಗಳು, 1,899 ಮರು ಪರೀಕ್ಷಾರ್ಥಿಗಳು, 467 ಖಾಸಗಿ ಅಭ್ಯರ್ಥಿಗಳು ಒಳಗೊಂಡಿದ್ದಾರೆ. ಬಳ್ಳಾರಿ ನಗರ-12, ಸಿರಗುಪ್ಪ-03, ಕುರುಗೋಡು ಒಂದು ಹಾಗೂ ಸಂಡೂರು, ಕಂಪ್ಲಿ ತಲಾ ಎರಡು ಸೇರಿ ಒಟ್ಟು 20 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿವೆ. ಪರೀಕ್ಷಾ ಅಕ್ರಮಗಳಿಗೆ ಕಡಿವಾಣ ಹಾಕಲು ಮತ್ತು ವಿದ್ಯಾರ್ಥಿ ಸ್ನೇಹಿ ವಾತಾವರಣ ನಿರ್ಮಿಸಲು ಈ ಬಾರಿ ವಿಶೇಷ ಕ್ರಮಗಳನ್ನು ಕೈಗೊಳ್ಳಲಾಗಿದೆ. ಪ್ರತಿ ಪರೀಕ್ಷಾ ಕೇಂದ್ರದ ಸುತ್ತಮುತ್ತಲಿನ 200 ಮೀಟರ್ ವ್ಯಾಪ್ತಿಯನ್ನು ನಿಷೇಧಿತ ಪ್ರದೇಶವೆಂದು ಘೋಷಿಸಲಾಗಿದ್ದು, ಸಾರ್ವಜನಿಕ ಓಡಾಟಕ್ಕೆ ನಿರ್ಬಂಧ ಹೇರಲಾಗಿದೆ. ಪರೀಕ್ಷಾ ಕೊಠಡಿಗಳಲ್ಲಿ ನಡೆಯುವ ಪ್ರತಿಯೊಂದು ಚಟುವಟಿಕೆಯನ್ನು ಲೈವ್ ವೆಬ್‌ಕಾಸ್ಟಿಂಗ್ ಮೂಲಕ ವೀಕ್ಷಿಸಲಾಗುತ್ತದೆ. ಇದರ ಉಸ್ತುವಾರಿಗೆ ಜಿಪಂ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ಪ್ರಶ್ನೆ ಪತ್ರಿಕೆಗಳ ಸುರಕ್ಷಿತ ಸಾಗಾಣಿಕೆಗೆ ವಿಶೇಷ ಸಮಿತಿ ಹಾಗೂ ಪ್ರತಿ ಕೇಂದ್ರಕ್ಕೆ ಒಬ್ಬರು ವೀಕ್ಷಕರನ್ನು ನೇಮಿಸಲಾಗಿದೆ. ಜತೆಗೆ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ. ದೂರದ ಊರುಗಳಿಂದ ಬರುವ ವಿದ್ಯಾರ್ಥಿಗಳಿಗೆ ಅನುಕೂಲವಾಗಲು ಪರೀಕ್ಷಾ ಪ್ರವೇಶ ಪತ್ರ ತೋರಿಸಿ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣಿಸಲು ಅವಕಾಶ ನೀಡಲಾಗಿದೆ. ಪರೀಕ್ಷಾ ಕೇಂದ್ರಗಳಲ್ಲಿ ಕುಡಿವ ನೀರು, ಸ್ವಚ್ಛತೆ, ಗಾಳಿ ಮತ್ತು ಬೆಳಕಿನ ವ್ಯವಸ್ಥೆ ಇರುವಂತೆ ನೋಡಿಕೊಳ್ಳಲು ಪರೀಕ್ಷಾ ಕೇಂದ್ರ ಅಧೀಕ್ಷಕರಿಗೆ ಜವಾಬ್ದಾರಿ ವಹಿಸಲಾಗಿದೆ.
ಕೋಟ್... ಸಾಮಾಜಿಕ ಜಾಲತಾಣಗಳಲ್ಲಿ ಪ್ರಶ್ನೆಪತ್ರಿಕೆ ಸೋರಿಕೆಯ ಸುಳ್ಳು ಪ್ರಚಾರ ಮಾಡುವ ಖಾತೆಗಳನ್ನು ಗುರುತಿಸಿ ತಡೆದು ಕಾನೂನು ಕ್ರಮ ಕೈಗೊಳ್ಳಲಾಗುವುದು. ಪರೀಕ್ಷೆಗಳು ಸುರಕ್ಷಿತವಾಗಿ ನಡೆಯಲು ಎಲ್ಲರ ಸಹಕಾರ ಅಗತ್ಯವಾಗಿದೆ.
- ಡಾ. ಸುಮನ್ ಡಿ.ಪನ್ನೇಕರ್, ಎಸ್ಪಿ