ಬಳ್ಳಾರಿಯ ಬಾಲಕಿಯರ ಪ್ರೌಢಶಾಲೆಯಲ್ಲಿ ಶಿಕ್ಷಕಿಯರಾದ ಪರಿಮಳ, ಜಯಲಕ್ಷ್ಮೀ, ಸೌಮ್ಯ ವಿದ್ಯಾರ್ಥಿನಿಯರಿಗೆ ಹೂ ನೀಡಿ ಸ್ವಾಗತಿಸಿದರು.  
ಬಳ್ಳಾರಿ

ಸಂಭ್ರಮದಿಂದ ಆರಂಭವಾದ ಶಾಲೆಗಳು

ಎಸ್.ಎರ್ರಿಸ್ವಾಮಿ

ಪ್ರಮುಖ ಮುಖ್ಯಾಂಶಗಳು

  • ವಿದ್ಯಾರ್ಥಿಗಳಿಗೆ ಉಚಿತ ಪಠ್ಯಪುಸ್ತಕ
  • ಶೈಕ್ಷಣಿಕ ವರ್ಷ ಯಶಸ್ವಿಯಾಗಿ ಆರಂಭ
ಬಳ್ಳಾರಿ : ಜಿಲ್ಲೆಯಲ್ಲಿಯೂ ಪ್ರಸ್ತಕ ಸಾಲಿನ ಶಾಲಾ ಆರಂಭದ ಮೊದಲ ದಿನ ವಿದ್ಯಾರ್ಥಿಗಳಲ್ಲಿ ಹೊಸ ಉತ್ಸಾಹ ಹಾಗೂ ಸಂಭ್ರಮ ಮನೆಮಾಡಿತ್ತು. ಬೇಸಿಗೆ ರಜೆಯ ಸುದೀರ್ಘ ಬಿಡುವಿನ ನಂತರ ಶಾಲೆಗಳತ್ತ ಹೆಜ್ಜೆ ಇಟ್ಟ ಮಕ್ಕಳನ್ನು ಜಿಲ್ಲೆಯ ಬಹುತೇಕ ಶಾಲೆಗಳಲ್ಲಿ ಸಡಗರದಿಂದ ಬರಮಾಡಿಕೊಳ್ಳಲಾಯಿತು. ಕೆಲವಡೆ ಪ್ರವೇಶ ದ್ವಾರಗಳನ್ನು ತಳಿರು-ತೋರಣಗಳಿಂದ ಅಲಂಕರಿಸಲಾಗಿತ್ತು. ಶಿಕ್ಷಕರು ವಿದ್ಯಾರ್ಥಿಗಳಿಗೆ ಗುಲಾಬಿ ಹೂವು ನೀಡಿ, ಸಿಹಿ ಹಂಚಿ ಸ್ವಾಗತಿಸಿದರು.
ಹೊಸ ತರಗತಿ, ಹೊಸ ಪುಸ್ತಕಗಳು ಹಾಗೂ ಹೊಸ ಸಮವಸ್ತ್ರ ಧರಿಸಿದ ಮಕ್ಕಳು ಸಡಗರದಿಂದ ಶಾಲೆಗೆ ಹಾಜರಾಗಿದ್ದರು. ಮೊದಲ ದಿನವೇ ಸ್ನೇಹಿತರನ್ನು ಭೇಟಿಯಾದ ಖುಷಿ ಮಕ್ಕಳ ಮುಖದಲ್ಲಿ ಎದ್ದು ಕಾಣುತ್ತಿತ್ತು. ಸರ್ಕಾರದ ನಿರ್ದೇಶನದಂತೆ ಶಾಲಾ ಆರಂಭದ ಮೊದಲ ದಿನವೇ ವಿದ್ಯಾರ್ಥಿಗಳಿಗೆ ಉಚಿತ ಪಠ್ಯಪುಸ್ತಕ ಹಾಗೂ ಸಮವಸ್ತ್ರಗಳನ್ನು ವಿತರಿಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಕೆಲ ಶಾಲೆಗಳಲ್ಲಿ ವಿತರಣಾ ಕಾರ್ಯಕ್ಕೂ ಚಾಲನೆ ನೀಡಲಾಗಿದೆ.
ಮೊದಲ ದಿನವೇ ವಿದ್ಯಾರ್ಥಿಗಳಿಗೆ ಶಾಲೆಗಳಲ್ಲಿ ಬಿಸಿಯೂಟದ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು. ಹೊಸದಾಗಿ ಶಾಲೆಗೆ ಸೇರ್ಪಡೆಯಾಗುವ ಮಕ್ಕಳ ದಾಖಲಾತಿ ಪ್ರಕ್ರಿಯೆಯೂ ನಡೆಯಿತು. ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧಿಕಾರಿಗಳು ಹಾಗೂ ಬಿಇಒಗಳು ಜಿಲ್ಲೆಯ ವಿವಿಧ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಿಗೆ ಭೇಟಿ ನೀಡಿ, ಮೂಲಸೌಕರ್ಯಗಳು ಮತ್ತು ಶಾಲಾ ಆರಂಭದ ಸಿದ್ಧತೆಗಳನ್ನು ಪರಿಶೀಲಿಸಿದರು. ಯಾವುದೇ ಲೋಪದೋಷಗಳಿಲ್ಲದೆ ಶೈಕ್ಷಣಿಕ ವರ್ಷ ಯಶಸ್ವಿಯಾಗಿ ಆರಂಭಗೊಳ್ಳಲು ಅಗತ್ಯ ಕ್ರಮ ವಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು. ಶಾಲಾ ಆರಂಭಕ್ಕೂ ಮುನ್ನವೇ ಶಿಕ್ಷಕರು ಹಾಗೂ ಸಿಬ್ಬಂದಿ ಶಾಲಾ ಕೊಠಡಿಗಳು, ಶೌಚಾಲಯ, ಅಡುಗೆ ಮನೆ, ಶಾಲಾ ಆವರಣವನ್ನು ಸ್ವಚ್ಛಗೊಳಿಸಲಾಗಿತ್ತು. ಮೊದಲ ದಿನವಾದ ಕಾರಣ ಹೆಚ್ಚಿನ ಕಡೆ ತರಗತಿಗಳು ನಡೆಯಲಿಲ್ಲ. ಸಾಕಷ್ಟು ಶಾಲೆಗಳಲ್ಲಿ ಮಕ್ಕಳ ಹಾಜರಾತಿ ಕಡಿಮೆಯಿತ್ತು.
===