ಬಳ್ಳಾರಿಯ ವಿಎಸ್‌ಕೆ ವಿವಿ ಆವರಣದಲ್ಲಿ ಪರೀಕ್ಷಾ ಫಲಿತಾಂಶದಲ್ಲಿ ಹಗರಣ ನಡೆದಿದೆ ಎಂಬುದಾಗಿ ಆರೋಪಿಸಿ ಎಬಿವಿಪಿ ಸಂಘಟನೆಯ ಪದಾಧಿಕಾರಿಗಳು ಪ್ರತಿಭಟಿಸಿದರು. ಸಂಘಟನೆ ಪದಾಧಿಕಾರಿಗಳಾದ ಕೆ.ದಿಲೀಪ್, ಧನುಷ್ ಕುಮಾರ್, ಹಮ್ಮಿಗೇಶ, ದರ್ಶನ್ ಮಾರುತಿ, ಶ್ರೀಕಾಂತ್, ಕೃಷ್ಣ, ಶರತ್ ಇದ್ದರು. 
ಬಳ್ಳಾರಿ

ಪರೀಕ್ಷಾ ಫಲಿತಾಂಶದಲ್ಲಿ ಹಗರಣ

ಎಸ್.ಎರ್ರಿಸ್ವಾಮಿ

ಪ್ರಮುಖ ಮುಖ್ಯಾಂಶಗಳು

  • ಪರೀಕ್ಷಾ ಫಲಿತಾಂಶದಲ್ಲಿ ಹಗರಣ
  • ಭ್ರಷ್ಟಾಚಾರಿಗಳನ್ನು ಕೂಡಲೇ ಅಮಾನತುಗೊಳಿಸಿ
ಬಳ್ಳಾರಿ : ಇಲ್ಲಿನ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಪರೀಕ್ಷಾ ಫಲಿತಾಂಶದಲ್ಲಿ ಹಗರಣ ನಡೆದಿದೆ ಎಂಬುದಾಗಿ ಆರೋಪಿಸಿ, ವಿವಿ ಆವರಣದಲ್ಲಿ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಸಂಘಟನೆಯೂ ಬುಧವಾರ ಪ್ರತಿಭಟಿಸಿತು.
ಜಿಲ್ಲಾ ಸಂಘಟನಾ ಕಾರ್ಯದರ್ಶಿ ಟಿ.ಭರತ್ ಮಾತನಾಡಿ, ವಿಎಸ್‌ಕೆ ವಿವಿಯೂ ಭ್ರಷ್ಟಾಚಾರಿಗಳ ತವರು ಮನೆಯಾಗಿದೆ. ಪರೀಕ್ಷಾ ಫಲಿತಾಂಶವನ್ನು ಪ್ರಕಟಿಸಿದ ನಂತರವೂ ಪರೀಕ್ಷೆಯಲ್ಲಿ ಅನುತ್ತೀರ್ಣಗೊಂಡ ವಿದ್ಯಾರ್ಥಿಗಳಿಂದ ಹಣ ಪಡೆದು, ಅವರನ್ನು ಉತ್ತೀರ್ಣಗೊಳಿಸುತ್ತಿರುವುದು ಕಂಡುಬಂದಿದೆ ಎಂದು ಆರೋಪಿಸಿದರು.
ಈ ಹಗರಣದಲ್ಲಿ ವಿವಿ ಸಿಬ್ಬಂದಿ ರಿಯಾಜ್, ವೆಂಕಟೇಶ್ ವನದುರ್ಗ, ಯಲ್ಲಾಲಿಂಗ, ಚಂದ್ರಮೋಹನ್, ಉಮೇಶ್ ಹಾಗೂ ಇತರರು ಒಳಗೊಂಡಂತೆ ಪರೀಕ್ಷೆ ಫಲಿತಾಂಶ ಬಿಡುಗಡೆ ಮಾಡುವ ಸಮಯದಲ್ಲಿ ಪಿಜಿ ಅಥವಾ ಡಿಗ್ರಿ ವಿದ್ಯಾರ್ಥಿಗಳ ಕೋಡಿಂಗ್-ಡಿಕೋಡಿಂಗ್ ಅಂಕಗಳನ್ನು ನಮೂದಿಸುವುದು ಇವರೇ ನೋಡಿಕೊಳ್ಳುತ್ತಾರೆ. ಈ ಅವ್ಯವಹಾರವು ತುಂಬಾ ದಿನಗಳಿಂದ ನಡೆಯುತ್ತಿದ್ದು, ಈಗ ಆಡಿಯೋ ಕ್ಲಿಪ್ ಮೂಲಕ ಸಾಕ್ಷಾಧಾರಗಳ ಸಮೇತ ಬೆಳಕಿಗೆ ಬಂದಿದೆ ಎಂದು ಕಿಡಿಕಾರಿದರು. ಹೀಗಾಗಿ ಈ ವ್ಯವಹಾರದಲ್ಲಿ ಭಾಗಿಗಳಾದ ಎಲ್ಲಾ ಭ್ರಷ್ಟಾಚಾರಿಗಳನ್ನು ಕೂಡಲೇ ಅಮಾನತುಗೊಳಿಸಿ, ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಎಂದು ಆಗ್ರಹಿಸಿದರು.
===