ಬಣ್ಣ ಬಣ್ಣದ ರಂಗೋಲಿ  
ಬಳ್ಳಾರಿ

ಜಿಲ್ಲಾದ್ಯಂತ ಸಂಭ್ರಮದ ಸಂಕ್ರಾಂತಿ

ಎಸ್.ಎರ್ರಿಸ್ವಾಮಿ

ಪ್ರಮುಖ ಮುಖ್ಯಾಂಶಗಳು

  • ಶುಭಾಶಯ
ಬಳ್ಳಾರಿ : ಮಕರ ಸಂಕ್ರಾಂತಿ ಹಬ್ಬದ ಆಚರಣೆ ಜಿಲ್ಲಾದ್ಯಂತ ಕಳೆಗಟ್ಟಿತ್ತು. ವರ್ಷದ ಮೊದಲ ಹಬ್ಬವನ್ನು ಜನರು ಅತ್ಯಂತ ಸಡಗರ, ಸಂಭ್ರಮದಿಂದ ಆಚರಿಸಿದರು.
ಬೆಳಗಿನ ಜಾವದಿಂದಲೇ ದೇಗುಲಗಳಲ್ಲಿ ವಿಶೇಷ ಪೂಜೆ ನೆರವೇರಿಸಲಾಯಿತು. ನಗರದ ಕನಕ ದುರ್ಗಮ್ಮ, ಸಣ್ಣ ದುರ್ಗಮ್ಮ, ಆಂಜನೇಯ, ಅಮೃತೇಶ್ವರ, ಬಾಲಾಜಿ, ಸಾಯಿ ಬಾಬಾ ದೇವಸ್ಥಾನ ಸೇರಿದಂತೆ ಇತರೆ ದೇವಸ್ಥಾನಗಳಿಗೆ ಕುಟುಂಬದೊಂದಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿ ಭಕ್ತಿ ಭಾವ ಮೆರೆದರು.
ಎಳ್ಳು ಬೆಲ್ಲಕೊಟ್ಟು ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು. ಬಣ್ಣ ಬಣ್ಣದ ರಂಗೋಲಿಗಳು, ರಾಸುಗಳಿಗೆ ಕಿಚ್ಚಾಯಿಸುವುದು ಹಬ್ಬದ ಸಂಭ್ರಮ ಇಮ್ಮಡಿಗೊಳಿಸಿತು. ಎಳ್ಳು-ಬೆಲ್ಲ ವಿತರಣೆ, ಕಡ್ಲೆಕಾಯಿ, ಅವರೆಕಾಯಿ, ಗೆಣಸನ್ನು ಬೇಯಿಸಿ ಹುಗ್ಗಿಯೊಂದಿಗೆ ಮನೆ ಮಂದಿಯೆಲ್ಲಾ ಕುಳಿತು ಹಬ್ಬದೂಟ ಸವಿಯುವ ಮೂಲಕ ಸುಗ್ಗಿ ಹಬ್ಬವನ್ನು ಖುಷಿಯಿಂದ ಆಚರಿಸಿದರು.
ಮನೆಗಳ ಮುಂದೆ ಗೋ ಸಗಣಿಯಿಂದ ಮನೆಗಳ ಅಂಗಳ ಸಾರಿಸಿ ಬಣ್ಣ ಬಣ್ಣದ ರಂಗೋಲಿ ಹಾಕಿ, ರಂಗೋಲಿಯ ಮಧ್ಯ ಭಾಗ ಪಿಳ್ಳೆರಾಯನ ಇಟ್ಟು ಪೂಜಿಸುತ್ತಿದ್ದರು. ಅದೇ ರೀತಿ ಮನೆ ಮನೆಗಳಲ್ಲೂ ಹೊಸ ಮಡಿಕೆ ತಂದು ಶುಚಿಗೊಳಿಸಿ, ಅದರಲ್ಲಿ ಪೊಂಗಲ್ ಮಾಡಿ ದೇವರಿಗೆ ನೈವೇದ್ಯ ಇಟ್ಟು ಪ್ರಸಾದ ರೂಪದಲ್ಲಿ ಮನೆಯವರು ಸಹ ಸ್ವಿಕರಿಸಿದರು. ಒಣಕೊಬ್ಬರಿ, ಕಡಲೆಬೀಜ, ಕಡಲೆ ಪಪ್ಪು, ಬೆಲ್ಲದ ಚೂರು, ಬಿಳಿ ಎಳ್ಳು ಮಿಶ್ರಣ ಮಾಡಿದ ಪದಾರ್ಥವನ್ನು ದೇವರಿಗೆ ನೈವೇದ್ಯ ಇಟ್ಟು ನೆರೆಹೊರೆಯವರಿಗೆ ಹಂಚಿದರು. ಗ್ರಾಮೀಣ ಭಾಗದಲ್ಲಿ ಸಮೀಪದ ನದಿಗಳಲ್ಲಿ ಸ್ನಾನ ಮಾಡಿ ಕಣದ ಪೂಜೆ, ಗೋಪೂಜೆ ಹಾಗೂ ಗ್ರಾಮದ ದೇಗುಲಗಳಲ್ಲಿ ವಿಶೇಷ ಪೂಜೆ ಸಲ್ಲಿಸಿದರು.
====