ಬಳ್ಳಾರಿಯಲ್ಲಿ ಆಯೋಜಿಸಿದ್ದ ಸಂಕ್ರಾಂತಿ ಹಬ್ಬದ ಭೋಗಿ ಸಂಭ್ರಮಕ್ಕೆ ಪಾಲಿಕೆ ಸದಸ್ಯ ಎಂ.ಪ್ರಭಂಜನ್ ಕುಮಾರ್ ಆಗ್ನಿ ಸ್ಪರ್ಶ ಮಾಡುವ ಮೂಲಕ ಚಾಲನೆ ನೀಡಿದರು.
ಬಳ್ಳಾರಿ : ಇಲ್ಲಿನ ಬಾಲಾಂಜನೇಯ ದೇವಸ್ಥಾನ ಶಾಲೆ ಆವರಣದಲ್ಲಿ ರಂಗೋಲಿಗಳ ಹಬ್ಬ ಎಂದೇ ಖ್ಯಾತಿಯಾಗಿರುವ ಮಕರ ಸಂಕ್ರಾಂತಿ ಹಬ್ಬವನ್ನು ರಂಗೋಲಿ ಸ್ಪರ್ಧೆ ಹಮ್ಮಿಕೊಳ್ಳಲಾಗಿತ್ತು. ನೂರಾರು ಮಹಿಳೆಯರು ನಾನಾ ರೀತಿಯ ರಂಗೋಲಿಗಳನ್ನು ಬಿಡಿಸಿ, ಬಣ್ಣ ತುಂಬುವ ಮೂಲಕ ಸಂಭ್ರಮಿಸಿದರು.
ಸಂಜೀವಿನಿ ಬಳ್ಳಾರಿ ಚಾರಿಟಬಲ್ ಟ್ರಸ್ಟ್ ವತಿಯಿಂದ ಸಂಕ್ರಾಂತಿ ಹಬ್ಬದ ನಿಮಿತ್ತ ಆಯೋಜಿಸಲಾಗಿದ್ದ ರಂಗೋಲಿ ಸ್ಪರ್ಧೆಯಲ್ಲಿ ನಗರ ಸೇರಿದಂತೆ ಗ್ರಾಮೀಣ ಭಾಗದಿಂದ ಆಗಮಿಸಿದ್ದ ಯುವತಿಯರಿಂದ ಹಿಡಿದು ವೃದ್ಧರವವರೆಗೂ ಭಾಗವಹಿಸಿದ್ದರು. ಸುಮಾರು 200ಕ್ಕೂ ಹೆಚ್ಚು ಭಾಗವಹಿಸಿದ್ದ ಮಹಿಳೆಯರು, ತಮಗಿಷ್ಟವಾದ ಕೃಷ್ಣರಾಧೆ ಜೋಡಿ, ಭಗವಾನ್ ಈಶ್ವರ, ಗೋಮಾತೆ ಸೇರಿದಂತೆ ದೇಶದ ಸಂಸ್ಕೃತಿ, ಪರಂಪರೆ ಪ್ರತಿಬಿಂಬಿಸುವ ನಾನಾ ರೀತಿಯ ಚಿತ್ತಚಿತ್ತಾರದ ರಂಗೋಲಿಗಳನ್ನು ಬಿಡಿಸಿದರು. ಜತೆಗೆ ಬಿಡಿಸಿದ ರಂಗೋಲಿಗಳಿಗೆ ನಾನಾ ಬಣ್ಣಗಳನ್ನು ತುಂಬುವ ಮೂಲಕ ಜನಾಕರ್ಷಿಸುವಂತೆ ಅರಳಿಸಿದರು.
ಬಳಿಕ ಚಿತ್ತಚಿತ್ತಾರದ ರಂಗೋಲಿಗಳ ಮಧ್ಯೆ ಸಂಜೆ ಆರಂಭವಾದ ‘ಸಂಕ್ರಾಂತಿ ಹಬ್ಬದ ಭೋಗಿ ಸಂಭ್ರಮ’ ಕಾರ್ಯಕ್ರಮಕ್ಕೆ ಟ್ರಸ್ಟ್ ಅಧ್ಯಕ್ಷ, ಪಾಲಿಕೆ 3ನೇ ವಾರ್ಡ್ ಸದಸ್ಯ ಎಂ.ಪ್ರಭಂಜನ್ ಕುಮಾರ್ ಹಳೆಯ ವಸ್ತುಗಳನ್ನು ಸುಡುವ ಭೋಗಿ ಹಬ್ಬಕ್ಕೆ ಅಗ್ನಿ ಸ್ಪರ್ಶಿಸುವ ಮೂಲಕ ಚಾಲನೆ ನೀಡಿ ಮಾತನಾಡಿದರು. ಸನಾತನ ಧರ್ಮದ ಪ್ರಮುಖ ಹಬ್ಬಗಳಲ್ಲಿ ಸಂಕ್ರಾಂತಿ ಹಬ್ಬವೂ ಒಂದು. ವಿಶೇಷವಾಗಿ ಮಹಿಳೆಯರಿಗೆ ಸಂಕ್ರಾಂತಿ ಹಬ್ಬ ಎಂದರೆ ಅತ್ಯಂತ ಅಚ್ಚುಮೆಚ್ಚು. ಮಹಿಳೆಯರು ರಂಗೋಲಿ ಬಿಡಿಸಿ, ಬಣ್ಣ ತುಂಬುವ ಮೂಲಕ ತಮ್ಮಲ್ಲಿನ ಪ್ರತಿಭೆಯನ್ನು ಅನಾವರಣಗೊಳಿಸುತ್ತಾರೆ. ಯಾವುದೇ ಅಳತೆಗೋಲು ಇಲ್ಲದೇ ರಂಗೋಲಿ ಬಿಡಿಸುವುದು ಸಹ ಒಂದು ಅದ್ಭುತ ಕಲೆಯಾದರೂ, ಅಷ್ಟು ಸುಲಭವೂ ಅಲ್ಲ. ರಂಗೋಲಿ ಬಿಡಿಸುವುದರಲ್ಲಿ ಮಹಿಳೆಯರಿಗೆ ಮಹಿಳೆಯರೇ ಸಾಟಿಯಾಗಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಎಲ್ಲ ಮಹಿಳೆಯರು, ಯುವತಿಯರು ಭಿನ್ನ ಭಿನ್ನ ರೀತಿಯಲ್ಲಿ ರಂಗೋಲಿಗಳನ್ನು ಬಿಡಿಸಿ, ಗಮನ ಸೆಳೆದಿದ್ದಾರೆ. ವರ್ಷದ ಮೊದಲ ಹಬ್ಬವಾದ ಸಂಕ್ರಾಂತಿ ಹಬ್ಬದಲ್ಲಿ ಮಹಿಳೆಯರೆಲ್ಲರೂ ರಂಗೋಲಿ ಬಿಡಿಸಿ, ಬಣ್ಣ ತುಂಬಿಸಿದಂತೆ ತಮ್ಮ ಜೀವನವೂ ತುಂಬ ಕಲರ್‌ಫುಲ್ ಆಗಿ ಇರಲಿ ಎಂಬುದಾಗಿ ಶುಭ ಕೋರಿದರು.
ಇದೇ ವೇಳೆ ರಂಗೋಲಿ ಸ್ಪರ್ಧೆಯಲ್ಲಿ ವಿಜೇತರಾದ ಭಾರತಿಗೆ ಪ್ರಥಮ ಬಹುಮಾನ ಟ್ರಾಲಿಬ್ಯಾಗ್, ಹೆಲ್ಮೆಟ್, ಗಾಯತ್ರಿ ಅವರಿಗೆ ದ್ವಿತೀಯ ಬಹುಮಾನ ಅಡುಗೆ ಸೆಟ್, ಹೆಲ್ಮೆಟ್, ಪದ್ಮಶ್ರೀ ಅವರಿಗೆ ತೃತೀಯ ಬಹುಮಾನ ಕುಕ್ಕರ್, ಹೆಲ್ಮೆಟ್‌ನ್ನು ವಿತರಿಸಿ, ತಪ್ಪದೇ ಬಳಸುವಂತೆ ಮನವಿ ಮಾಡಲಾಯಿತು. ಉಳಿದವರಲ್ಲಿ ಅತ್ಯುತ್ತಮವಾಗಿ ರಂಗೋಲಿ ಬಿಡಿಸಿದ್ದ 8 ಜನ ಮಹಿಳೆಯರಿಗೆ ಹೆಲ್ಮೆಟ್‌ಗಳನ್ನು ವಿತರಿಸಿ ಸಂಚಾರ ಕುರಿತು ಮತ್ತು ಇನ್ನುಳಿದ ಎಲ್ಲರಿಗೂ ಸಮಾಧಾನಕರ ಬಹುಮಾನವಾಗಿ ಸ್ಟೀಲ್ ನೀರಿನ ಬಾಟಲ್‌ಗಳನ್ನು ವಿತರಿಸುವ ಮೂಲಕ ಪ್ಲಾಸ್ಟಿಕ್ ಬಳಸದಂತೆ ಎಂದು ಜಾಗೃತಿ ಮೂಡಿಸಲಾಯಿತು. ಎಂ.ನಿರುಪಮಾ, ಎಂ.ಸುಮಾ ಅವರು ನಿರ್ಣಾಯಕರಾಗಿ ಭಾಗವಹಿಸಿದ್ದರು.