ರಜೆಗಾಗಿ ಸ್ನೇಹಿತನನ್ನೇ ಬಲಿಪಡೆದನೇ
ರಜೆಗಾಗಿ ಸ್ನೇಹಿತನನ್ನೇ ಬಲಿಪಡೆದನೇ
* ಗುರುಕುಲ ವಸತಿ ನಿಲಯದಲ್ಲಿ ರಕ್ತಪಾತ
* ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕ ಪತ್ತೆ
ವಿಜಯವಾಣಿ ಸುದ್ದಿಜಾಲ ಬಳ್ಳಾರಿ
ನಗರದ ಹೊರವಲಯದ ಖಾಸಗಿ ಗುರುಕುಲ ಶಾಲೆಯ ವಸತಿ ನಿಲಯದಲ್ಲಿ ಶನಿವಾರ ತಡರಾತ್ರಿ ಭೀಕರ ಕೃತ್ಯ ಎಸಗಿ ಪರಾರಿಯಾಗಿದ್ದ ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕನನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ.
ವಸತಿ ನಿಲಯದಲ್ಲಿ ನಿದ್ರೆಯಲ್ಲಿದ್ದ ತನ್ನ ಸಹಪಾಠಿಗಳ ಮೇಲೆಯೇ ಮೃಗೀಯ ದಾಳಿ ನಡೆಸಿದ ಪರಿಣಾಮ ಒಬ್ಬ ಬಾಲಕ ದಾರುಣವಾಗಿ ಮೃತಪಟ್ಟರೆ, ಹಲವರು ಗಂಭೀರ ಗಾಯಗೊಂಡಿದ್ದರು. ಭೀಕರ ದಾಳಿಗೆ ಆಂಧ್ರಪ್ರದೇಶದ ಅದೋನಿ ಮೂಲದ 9ನೇ ತರಗತಿಯ ಹೇಮಂತ್ ಬಲಿಯಾಗಿದ್ದ. ಜತೆಗೆ ವಿಜಯಕುಮಾರ್‌ರೆಡ್ಡಿ ( 15), ಮನೋಜ್ ಪ್ರಸಾದ್ (10), ಇಸ್ಮಾಯಿಲ್ (10), ವಿಷ್ಣು (10), ರಕ್ಷಿತ (10) ಹಾಗೂ ಮೊದಲ ಮಹಡಿಯಲ್ಲಿದ್ದ ವಿದ್ಯಾರ್ಥಿನಿ ಶಶಿಕಳಾ(12), ವಸತಿ ನಿಲಯದ ಪಾಲಕಿ ಬ್ಲೆಸ್ಸಿ ಸೇರಿದಂತೆ ಒಟ್ಟು ಏಳು ಜನರು ಗಾಯಗೊಂಡಿದ್ದರು. ಕೃತ್ಯದ ಬಳಿಕ ಸ್ಥಳದಿಂದ ಪರಾರಿಯಾಗಿದ್ದ ಆರೋಪಿತ ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕನಿಗಾಗಿ ಪೊಲೀಸರು ಬಲೆ ಬೀಸಿದ್ದರು. ಇಬ್ಬರು ಸಿಪಿಐ ಹಾಗೂ ಐವರು ಪಿಎಸ್‌ಐ ನೇತೃತ್ವದ ವಿಶೇಷ ತಂಡಗಳು ರೈಲು ನಿಲ್ದಾಣ, ಆಸ್ಪತ್ರೆ ಹಾಗೂ ನಗರದ ಹೊರವಲಯಗಳಲ್ಲಿ ತೀವ್ರ ಶೋಧ ನಡೆಸುವ ಜತೆಗೆ ನೆರೆಯ ಆಂಧ್ರದ ಶ್ರೀಶೈಲಂ, ಮಂತ್ರಾಲಯ ಸೇರಿದಂತೆ ಸುತ್ತಲಿನ ಧಾರ್ಮಿಕ ಕ್ಷೇತ್ರಗಳದಲ್ಲಿಯೂ ಶೋಧ ನಡೆಸಿದ್ದರು. ಬಾಲಕನ ಸ್ವಗ್ರಾಮವಾದ ಬಿ.ಗೋನಾಳ್‌ನ ಗ್ರಾಮಕ್ಕೆ ತೆರಳುವ ರಸ್ತೆಯ ಗಂಗಪ್ಪ ಜಿನ್ನದ ಬಳಿ ಪತ್ತೆಯಾಗಿದ್ದಾನೆ.
ಬೋರ್ಡ್ ರಚನೆ : ಆರೋಪಿಯೂ ಅಪ್ರಾಪ್ತ ವಯಸ್ಕರಾಗಿರುವುದರಿಂದ, ಸಾಮಾನ್ಯ ಅಪರಾಧ ಪ್ರಕರಣಗಳಂತೆ ತನಿಖೆ ನಡೆಸಲು ಸಾಧ್ಯವಿಲ್ಲ. ಹೀಗಾಗಿ, ಅತ್ಯಂತ ಸೂಕ್ಷ್ಮ ರೀತಿಯಲ್ಲಿ ತನಿಖೆ ನಡೆಸುವ ಉದ್ದೇಶದಿಂದ ಇಲ್ಲಿನ ಬಿಮ್ಸ್‌ನಲ್ಲಿ ವಿಶೇಷ ಮೆಡಿಕಲ್ ಬೋರ್ಡ್ ರಚಿಸಲಾಗಿದೆ. ಬಾಲಾಪರಾಧ ನ್ಯಾಯ ಕಾಯ್ದೆಯನ್ವಯ ಪೊಲೀಸ್‌ರು ಕಾನೂನು ಪ್ರಕ್ರಿಯೆಯ ಉಸ್ತುವಾರಿಗಾಗಿ, ಜನರಲ್ ಫಿಜಿಷಿಯನ್ ದೈಹಿಕ ತಪಾಸಣೆ ಮತ್ತು ಆರೋಗ್ಯ ಸ್ಥಿತಿ, ಮನೋರೋಗ ತಜ್ಞರು ಬಾಲಕನ ಮಾನಸಿಕ ಸ್ಥಿತಿ ಮತ್ತು ಹಲ್ಲೆಗೆ ಪ್ರಚೋದಿಸಿದ ಅಂಶಗಳ ವಿಶ್ಲೇಷಣೆ, ಸಿಡಿಪಿಒ ಕೌನ್ಸಿಲಿಂಗ್ ಅಧಿಕಾರಿ ಮಗುವಿನ ಹಕ್ಕುಗಳ ರಕ್ಷಣೆ ಮತ್ತು ಆಪ್ತಸಮಾಲೋಚನೆಗಾಗಿ ಹಾಗೂ ಅಪರಾಧಶಾಸ್ತ್ರಜ್ಞ ಒಬ್ಬರನ್ನು ನೇಮಿಸಲಾಗಿದೆ. ಮೆಡಿಕಲ್ ಬೋರ್ಡ್ ನೀಡುವ ವರದಿಯ ಆಧಾರದ ಮೇಲೆ ಬಾಲ ನ್ಯಾಯ ಮಂಡಳಿಯ ಮುಂದೆ ಬಾಲಕನನ್ನು ಹಾಜರುಪಡಿಸಲಾಗುವುದು.
ಘಟನೆ ಕಾರಣ ಏನು ? : ತನ್ನದೇ ಸಹಪಾಠಿಯ ಮೇಲೆ ಬಾಲಕನೊಬ್ಬ ನಡೆಸಿದ ಮಾರಣಾಂತಿಕ ಹಲ್ಲೆಯ ಹಿಂದೆ ಆಳವಾದ ಮಾನಸಿಕ ಒತ್ತಡ ಮತ್ತು ಮಾದಕ ವ್ಯಸನದ ಶಂಕೆ ವ್ಯಕ್ತವಾಗಿದೆ. ಈ ಭೀಕರ ಘಟನೆಗೆ ಮುಖ್ಯ ಕಾರಣ ’ರಜೆಯ ಹಪಹಪಿ’ ಎನ್ನಲಾಗುತ್ತಿದೆ. ತನಿಖೆಯ ವೇಳೆ ಲಭ್ಯವಾಗಿರುವ ಮಾಹಿತಿಯಂತೆ, ಹಲ್ಲೆ ನಡೆಸಿದ ಬಾಲಕ ಕಳೆದ ಕೆಲವು ದಿನಗಳಿಂದ ತೀವ್ರ ಮಾನಸಿಕ ಒತ್ತಡದಲ್ಲಿದ್ದ ಎನ್ನಲಾಗಿದೆ. ಕಾನೂನು ಸಂಘರ್ಷಕ್ಕೆ ಒಳಗಾಗಿರುವ ಬಾಲಕನ ಸ್ವಗ್ರಾಮ ಬಿ.ಗೋನಾಳ್ ನಗರಕ್ಕೆ ಹೊಂದಿಕೊಂಡಿದ್ದರೂ, ಪಾಲಕರು ಆತನನ್ನು ವಸತಿ ನಿಲಯದಲ್ಲಿ ಇರಿಸಿದ್ದರು. ಶಾಲೆ ಮತ್ತು ವಸತಿ ನಿಲಯ ಆಡಳಿತ ಮಂಡಳಿ ರಜೆ ನೀಡದ ಕಾರಣ ಆತ ಹತಾಶನಾಗಿದ್ದ ಎನ್ನಲಾಗಿದೆ.
ನಿಮ್ಮನ್ನು ಕೊಲೆ ಮಾಡಿದರೆ ಮಾತ್ರ ನನಗೆ ಇಲ್ಲಿಂದ ಬಿಡುಗಡೆ ಸಿಗುತ್ತದೆ, ರಜೆ ಕೊಡುತ್ತಾರೆ ಎಂದು ಆತ ತನ್ನ ಸಹಪಾಠಿಗಳ ಬಳಿ ಪದೇ ಪದೇ ಹೇಳುತ್ತಿದ್ದ ಎಂಬುದಾಗಿ ಹಲ್ಲೆಗೊಳಗಾದ ಒಬ್ಬ ಬಾಲಕನನ್ನು ಕೌನ್ಸಿಲಿಂಗ್ ನಡೆಸಿದ ಮಕ್ಕಳ ಕಲ್ಯಾಣ ಸಮಿತಿಯ ಅಧಿಕಾರಿಯೊಬ್ಬರು ವಿವರಿಸಿದರು.
ಈ ಶಾಲೆಯಲ್ಲಿ ಒಂದರಿಂದ ಹತ್ತನೇ ತರಗತಿಯವರೆಗೆ 156 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಈ ಸಂಸ್ಥೆಯ ಮೂರು ಮಹಡಿಯ ಬೃಹತ್ ಕಟ್ಟಡದಲ್ಲಿ ಕೇವಲ ಒಂಬತ್ತು ವಿದ್ಯಾರ್ಥಿಗಳು ಮಾತ್ರ ವಸತಿ ನಿಲಯದಲ್ಲಿ ಉಳಿದುಕೊಂಡಿದ್ದರು. ಕೆಳ ಮಹಡಿಯಲ್ಲಿ ಇಬ್ಬರು ವಿದ್ಯಾರ್ಥಿನಿಯರು ಹಾಗೂ ಮೇಲಿನ ಮಹಡಿಯಲ್ಲಿ ಏಳು ವಿದ್ಯಾರ್ಥಿಗಳಿದ್ದರು. ಇಷ್ಟು ಭಯಾನಕವಾಗಿ ಹಲ್ಲೆ ನಡೆಸಲು ಸಾಮಾನ್ಯ ಮನಸ್ಥಿತಿಯಿಂದ ಸಾಧ್ಯವಿಲ್ಲ. ದಾಳಿಯ ತೀವ್ರತೆ ಗಮನಿಸಿದರೆ ಬಾಲಕ ಯಾವುದಾದರೂ ಬಲವಾದ ಮಾದಕ ದ್ರವ್ಯ ಅಥವಾ ಡ್ರಗ್ಸ್ ಸೇವಿಸಿರುವ ಸಾಧ್ಯತೆ ದಟ್ಟವಾಗಿದೆ ಎಂಬುದಾಗಿ ವೈದ್ಯರು ಅಭಿಪ್ರಾಯಪಟ್ಟಿದ್ದಾರೆ. ಪೊಲೀಸರು ಕೂಡ ಈ ಆಯಾಮದಲ್ಲಿ ತನಿಖೆ ಚುರುಕುಗೊಳಿಸಿದ್ದು, ಗಾಂಜಾ ಮಾದಕ ವ್ಯಸನದ ನಂಟಿನ ಬಗ್ಗೆ ಶೋಧ ನಡೆಸುತ್ತಿದ್ದಾರೆ. ಘಟನೆಯ ನಂತರ ಜಿಲ್ಲಾಡಳಿತ ಎಚ್ಚೆತ್ತುಕೊಂಡಿದ್ದು, ಜಿಲ್ಲಾದ್ಯಂತ ಇರುವ ಖಾಸಗಿ ವಸತಿ ನಿಲಯಗಳ ಮಾಹಿತಿ ಕಲೆಹಾಕಲು ಮುಂದಾಗಿದೆ. ಡಿಸಿ, ಸಿಇಒ ಮತ್ತು ಡಿಡಿಪಿಐ ಅವರು ಜಿಪಂ ನಲ್ಲಿ ತುರ್ತು ಸಭೆ ನಡೆಸಿ ವಸತಿ ನಿಲಯಗಳ ಸುರಕ್ಷತೆಯ ಬಗ್ಗೆ ಚರ್ಚಿಸಿದ್ದಾರೆ. ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಮಕ್ಕಳ ರಕ್ಷಣಾ ಆಯೋಗವು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದೆ. ಹಲ್ಲೆಗೊಳಗಾಗಿ ಬಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದ ಇತರ ಬಾಲಕರು ಚೇತರಿಸಿಕೊಂಡು ಡಿಸ್ಚಾರ್ಜ್ ಆಗಿದ್ದಾರೆ.
ಏನಿದು ಘಟನೆ : ಗುರುಕುಲ ಶಾಲೆಯ ವಸತಿ ನಿಲಯದಲ್ಲಿ ಶನಿವಾರ ರಾತ್ರಿ 10 ರಿಂದ 11ಗಂಟೆ ಸುಮಾರಿಗೆ 9ನೇ ತರಗತಿ ವಿದ್ಯಾರ್ಥಿ ವಾರ್ಡನ್ ಸೇರಿ ಮಲಗಿದ್ದ ಎಲ್ಲ ಎಂಟು ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದ್ದಾನೆ. ಕೈಗೆ ಸಿಕ್ಕ ಕಬ್ಬಿಣದ ರಾಡ್ ಮತ್ತು ಚೂಪಾದ ವಸ್ತುವಿನಿಂದ ವಿದ್ಯಾರ್ಥಿಗಳಿಗೆ ಮುಖ, ಪಕ್ಕೆ, ಹೊಟ್ಟೆ ಸೇರಿ ಸಿಕ್ಕ ಸಿಕ್ಕಲ್ಲಿ ಚುಚ್ಚಿ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ಚಿಕ್ಕ ಬಾಲಕ ಈ ಮಟ್ಟಕ್ಕೆ ಉನ್ಮಾದಕ್ಕೆ ಇಳಿಯುತ್ತಾನೆ ಎಂದರೆ ಗಾಂಜಾ ಅಥವಾ ಡ್ರಗ್ಸ್ ತೆಗೆದುಕೊಂಡಿದ್ದನೇನೋ ಎಂದು ಮೃತ ಬಾಲಕನ ಪೋಷಕರು ಆರೋಪಿಸಿದ್ದರು. ಈ ಕುರಿತು ಬ್ರೂಸ್‌ಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.