ಹೂವಿನಹಡಗಲಿ ತಾಲೂಕಿನ ಹೊಳಗುಂದಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಚೇರಿ ಮುಂದೆ ಗೊಬ್ಬರ ಖರೀದಿಗೆ ರೈತರು ಮುಗಿಬಿದ್ದಿರುವುದು.
- ಸರ್ವರ್ ಸಮಸ್ಯೆಯಿಂದ ವಿತರಣೆ ಸ್ಥಗಿತ
- ಹೂವಿನಹಡಗಲಿ ಹೊಳಗುಂದಿ ರಸಗೊಬ್ಬರ ಗಲಾಟೆ
ಹೂವಿನಹಡಗಲಿ: ಹೊಳಗುಂದಿ ಗ್ರಾಮದಲ್ಲಿ ಯೂರಿಯಾ ರಸಗೊಬ್ಬರ ಖರೀದಿಸಲು ರೈತರಲ್ಲಿ ಗಲಾಟೆ ಉಂಟಾದ ಕಾರಣ ರಸಗೊಬ್ಬರ ವಿತರಣೆಯನ್ನು ಸ್ಥಗಿತಗೊಳಿಸಲಾಯಿತು.
ತಾಲೂಕಿನಲ್ಲಿ ನಿರಂತರ ಮಳೆಯಾಗುತ್ತಿರುವುದರಿಂದ ಬಿತ್ತನೆಗೆ ರೈತರು ಅಣಿಯಾಗುತ್ತಿದ್ದಾರೆ. ಇದಕ್ಕಾಗಿ ಬಿತ್ತನೆ ಬೀಜ, ರಸಗೊಬ್ಬರ ಖರೀದಿ ಭರದಿಂದ ಸಾಗಿದೆ. ಹೊಳಗುಂದಿಯಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿಂದ ಯೂರಿಯಾ ಗೊಬ್ಬರ ವಿತರಿಸಲಾಗುತ್ತಿದ್ದು, ಸಂಘದಲ್ಲಿ ಒಟ್ಟು 650 ಚೀಲ ಯೂರಿಯಾ ಗೊಬ್ಬರ ಸಂಗ್ರಹವಿದೆ.
ಅಗತ್ಯಕ್ಕೆ ತಕ್ಕಂತೆ ರಸಗೊಬ್ಬರ ಸಿಗದಿರುವ ಭೀತಿಯಿಂದ ರೈತರು ರಸಗೊಬ್ಬರ ಪಡೆಯಲು ಮುಗಿಬಿದ್ದ ಕಾರಣ ನೂಕುನುಗ್ಗಲು ಆರಂಭವಾಯಿತು. ಇದರಿಂದ ಕೆಲಕಾಲ ವಿತರಣೆಯನ್ನು ಸ್ಥಗಿತಗೊಳಿಸಲಾಯಿತು. ಸರ್ವರ್ ಸಮಸ್ಯೆ ಕೂಡ ಕಾಣಿಸಿಕೊಂಡಿದ್ದರಿಂದ ವಿತರಣೆಗೆ ಸಮಸ್ಯೆ ಆಯಿತು.