ಬಳ್ಳಾರಿಯ ತಾಪಂ ಕಚೇರಿಯಲ್ಲಿ ಆಯೋಜಿಸಿದ್ದ ಪಂಚ ಗ್ಯಾರಂಟಿ ಯೋಜನೆಯ ಪ್ರಗತಿ ಪರಿಶೀಲನೆ ಹಾಗೂ ಅರಿವು ಮೂಡಿಸುವ ಕಾರ್ಯಕ್ರಮವನ್ನು ತಾಲೂಕು ಗ್ಯಾರಂಟಿ ಯೋಜನೆ ಪ್ರಾಧಿಕಾರದ ಸದಸ್ಯೆ ನಾಗಲಕೆರೆ ಗೀತಾ ಉದ್ಘಾಟಿಸಿದರು. ಅಧ್ಯಕ್ಷ ಗೋನಾಳ್ ಎಂ.ನಾಗಭೂಷಣಗೌಡ, ಸದಸ್ಯರಾದ ಹುಂಡೇಕರ್ ಪ್ರದೀಪ್, ರಮೇಶ್ ಎನ್, ತಬ್ರೇಜ್, ಉಮೇಶ್ ಇತರರಿದ್ದರು.
ಬಳ್ಳಾರಿ : ಕುಟುಂಬ ನಿರ್ವಹಿಸುವಲ್ಲಿ ಮಹಿಳೆಯರ ಪಾತ್ರ ಬಹಳ ಮುಖ್ಯವಾಗಿದೆ ಎಂದು ತಾಪಂ ಇಒ ಡಾ.ಶ್ರೀಧರ್ ಐ ಬಾರಿಕರ್ ಹೇಳಿದರು.
ನಗರದ ತಾಪಂ ಕಚೇರಿಯಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ಆಯೋಜಿಸಿದ್ದ ಪಂಚ ಗ್ಯಾರಂಟಿ ಯೋಜನೆಯ ಪ್ರಗತಿ ಪರಿಶೀಲನೆ ಹಾಗೂ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಮಾತನಾಡಿದರು. ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಸೌಲಭ್ಯಗಳನ್ನು ಒದಗಿಸುವ ಸಮಯದಲ್ಲಿ ಎದುರಾಗುವ ತಾಂತ್ರಿಕ ತೊಂದರೆಗಳನ್ನು ಕೂಡಲೇ ಪರಿಹರಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ಗ್ಯಾರಂಟಿ ಯೋಜನೆ ಪ್ರಾಧಿಕಾರದ ತಾಲೂಕು ಅಧ್ಯಕ್ಷ ಗೋನಾಳ್ ಎಂ.ನಾಗಭೂಷಣಗೌಡ ಮಾತನಾಡಿ, ಗ್ಯಾರಂಟಿ ಯೋಜನೆಗಳಿಗೆ ಸಂಬಂಧಿಸಿದಂತೆ ಜಿಲ್ಲೆಯ ನಾನಾ ಕಚೇರಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಯೂ ತಮ್ಮ ಕಾರ್ಯ ವ್ಯಾಪ್ತಿಯ ಎಲ್ಲ ಮನೆ - ಮನೆಗಳಿಗೆ ಭೇಟಿ ನೀಡಬೇಕು. ಗ್ಯಾರಂಟಿ ಯೋಜನೆಗಳ ಸಫಲತೆ ಪಡೆಯುವ ಮೂಲಕ ಕುಟುಂಬ ಪ್ರಗತಿ ಹೊಂದಲಿದೆ ಎಂಬುದರ ಬಗ್ಗೆ ಅರಿವು ಮೂಡಿಸಬೇಕು ಎಂದರು.