ಹೂವಿನಹಡಗಲಿ ತಾಲೂಕಿನ ಶಿವಲಿಂಗನಹಳ್ಳಿ-ಮಿರಾಕೊರನಹಳ್ಳಿ ಮಾರ್ಗದ ಹದಗೆಟ್ಟ ರಸ್ತೆಯನ್ನು ಶಿವಲಿಂಗನಹಳ್ಳಿ ಗ್ರಾಮಸ್ಥರು ಜೆಸಿಬಿ ನೆರವಿನೊಂದಿಗೆ ದುರಸ್ತಿಗೊಳಿಸುತ್ತಿರುವುದು.
ಹೂವಿನಹಡಗಲಿ: ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಹದಗೆಟ್ಟಿರುವುದರಿಂದ ಶಿವಲಿಂಗನಹಳ್ಳಿ ಗ್ರಾಮಸ್ಥರು ಸ್ವತಃ ದುರಸ್ತಿಗೆ ಮುಂದಾಗಿದ್ದಾರೆ.
ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಗಮನಹರಿಸದ ಕಾರಣ ಮಿರಾಕೋರನಹಳ್ಳಿ ಮಾರ್ಗದಲ್ಲಿನ ರಸ್ತೆ ಗುಂಡಿಗಳನ್ನು ಜೆಸಿಬಿ ಬಳಸಿ ಮುಚ್ಚುತ್ತಿದ್ದಾರೆ. ಬಸರಕೋಡು ತಾಂಡಾ, ಉಪನಾಯಕನಹಳ್ಳಿ ಸೇರಿದಂತೆ ಅನೇಕ ಗ್ರಾಮಗಳಿಗೆ ಈ ರಸ್ತೆ ಸಂಪರ್ಕ ಕಲ್ಪಿಸುತ್ತದೆ. ನಿತ್ಯ ನೂರಾರು ವಿದ್ಯಾರ್ಥಿಗಳು ಹಾಗೂ ಕೂಲಿಕಾರ್ಮಿಕರು ತಾಲೂಕು ಕೇಂದ್ರಕ್ಕೆ ಆಗಮಿಸಲು ಈ ರಸ್ತೆ ಅವಲಂಬಿಸಿದ್ದಾರೆ.
ರಸ್ತೆ ಅಭಿವೃದ್ಧಿಗಾಗಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ ಸಾಕಷ್ಟು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗದ ಕಾರಣ ಸ್ವತಃ ಜಲ್ಲಿಕಲ್ಲು ಹಾಗೂ ಮಣ್ಣು ಹಾಕುವ ಮೂಲಕ ದುರಸ್ತಿ ಕೈಗೊಂಡಿದ್ದಾರೆ. ಸರ್ಕಾರ ಗ್ಯಾರಂಟಿ ಯೋಜನೆಗಳಿಗೆ ಆದ್ಯತೆ ನೀಡಿರುವುದರಿಂದ ಗ್ರಾಮೀಣ ಭಾಗದ ಜನರಿಗೆ ಕನಿಷ್ಠ ಸೌಲಭ್ಯಗಳು ಮರೀಚಿಕೆಯಾಗಿವೆ. ಈ ಹಿನ್ನೆಲೆಯಲ್ಲಿ ನಮ್ಮ ಹಣದಲ್ಲಿ ರಸ್ತೆ ಅಭಿವೃದ್ಧಿಗೊಳಿಸುತ್ತಿದ್ದೇವೆ ಎಂದು ಗ್ರಾಮಸ್ಥರು ತಿಳಿಸಿದರು.