ಕಂಪ್ಲಿಯ ವಾಲ್ಮೀಕಿ ವೃತ್ತದಿಂದ ಸಕ್ಕರೆ ಕಾರ್ಖಾನೆ ಮಾರ್ಗದಲ್ಲಿರುವ ರಸ್ತೆ ದುಸ್ಥಿತಿಯಲ್ಲಿರುವುದು. 
ಬಳ್ಳಾರಿ

ಆಮೆಗತಿಯಲ್ಲಿ ಸಾಗಿದ ರಸ್ತೆ ನಿರ್ಮಾಣ ಕಾಮಗಾರಿ

ಶಾಮಸುಂದರ್ ಕೊಪ್ಪಳಕರ್
ಕಂಪ್ಲಿ: ಪಟ್ಟಣದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿ ನಿಧಾನಗತಿಯಲ್ಲಿ ನಡೆದಿರುವುದರಿಂದ ಜನರು ಹೈರಾಣಾಗಿದ್ದಾರೆ. ಧೂಳು, ಪ್ರಯಾಸದ ಸಂಚಾರ, ಆಯ ತಪ್ಪಿ ಬೀಳುವ ಭೀತಿಯಿಂದ ಜನರು ಬೇಸತ್ತಿದ್ದಾರೆ.
ನಡುವಿನ ಮಸೀದಿಯಿಂದ ಜೋಗಿ ಕಾಲುವೆತನಕ ರಸ್ತೆ ವಿಸ್ತರಣೆ ಕಾಮಗಾರಿ 2025ರ ಏ.12ರಂದು ಆರಂಭಗೊಂಡಿತ್ತು. ಜನವಸತಿ ಪ್ರದೇಶವಾಗಿದ್ದರಿಂದ ಆರು ತಿಂಗಳಲ್ಲಿ ಕಾಮಗಾರಿ ಮುಗಿಸುವುದಾಗಿ ಅಧಿಕಾರಿಗಳು ಕೊಟ್ಟ ಭರವಸೆ ಹುಸಿಯಾಗಿದೆ. 10 ತಿಂಗಳಾದರೂ ಕಾಮಗಾರಿ ಕುಂಟುತ್ತಾ ಸಾಗಿದೆ.
ಪೇಟೆ ಬಸವೇಶ್ವರ ನೀಲಮ್ಮ ಜೋಡಿ ರಥ ಸಾಗಲು 2025ರ ನ.30ರೊಳಗೆ ರಸ್ತೆ ಡಾಂಬರೀಕರಣ ಪೂರ್ಣಗೊಳ್ಳಲಿದೆ ಎಂಬುದು ಜನರ ನಂಬಿಕೆಯಾಗಿತ್ತು. ಈತನಕ ಡಾಂಬರೀಕರಣ ಕಾಮಗಾರಿ ಆರಂಭಗೊಂಡಿಲ್ಲ. ಇದರಿಂದಾಗಿ ಧೂಳಿನಲ್ಲಿ ಮಿಂದೇಳುತ್ತಿರುವ ನಿವಾಸಿಗಳು ದಮ್ಮು, ಕೆಮ್ಮು, ಉಸಿರಾಟದ ತೊಂದರೆಯಿಂದ ಬಳಲುವಂತಾಗಿದೆ. ಮುದ್ದಾಪುರ ಅಗಸಿ ಮಸೀದಿಯಿಂದ ನಂ.10 ಮುದ್ದಾಪುರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಮುದ್ದಾಪುರವರೆಗೆ ಮಾತ್ರ ಅಭಿವೃದ್ಧಿಗೊಂಡಿದ್ದು, ಅಲ್ಲಿಂದ ಸಿದ್ದೇಶ್ವರ ಕ್ರಾಸ್‌ವರೆಗೆ ರಸ್ತೆ ಸಂಪೂರ್ಣ ಹದಗೆಟ್ಟಿದೆ. ಬಸ್, ಟ್ರ್ಯಾಕ್ಟರ್ ಸೇರಿದಂತೆ ನಾನಾ ವಾಹನಗಳು ಸಂಚರಿಸುವ ರಸ್ತೆ ಸಂಪೂರ್ಣ ಹದಗೆಟ್ಟಿದೆ.
ವಾಲ್ಮೀಕಿ ವೃತ್ತದಿಂದ ಸಕ್ಕರೆ ಕಾರ್ಖಾನೆ ಸ್ವಾಗತ ಫಲಕದವರೆಗಿನ ರಸ್ತೆ ಅಭಿವೃದ್ಧಿ ಕಾಮಗಾರಿ ಸದ್ಯ ಸ್ಥಗಿತವಾಗಿದೆ. ಫೆ.12ರಂದು ಆಯೋಜಿಸಿದ್ದ ಕಂಪ್ಲಿ ಉತ್ಸವಕ್ಕೆ ಮುನ್ನ ರಸ್ತೆ ಕಾಮಗಾರಿ ಪೂರ್ಣಗೊಳ್ಳಲಿದೆ ಎಂಬ ಜನರ ನಿರೀಕ್ಷೆ ಕೂಡ ಹುಸಿಯಾಗಿದೆ. ರಸ್ತೆ ಕಾಮಗಾರಿಗೆ ಹಾಕಿರುವ ಕಾಂಕ್ರಿಟ್ ಕಲ್ಲುಗಳ ಮೇಲೆ ವಾಹನ ಸವಾರರು ಪ್ರಾಣ ಕೈಯಲ್ಲಿ ಹಿಡಿದು ಸಂಚರಿಸಬೇಕಿದೆ. ಇದರಿಂದಾಗಿ ದ್ವಿಚಕ್ರವಾಹನ ಸವಾರರು ಆಯ ತಪ್ಪಿ ಬೀಳುತ್ತಿದ್ದಾರೆ. ವಿದ್ಯಾರ್ಥಿಗಳು ಕೂಡ ಶಾಲೆ, ಕಾಲೇಜುಗಳಿಗೆ ಭಯದಿಂದಲೇ ತೆರಳುವಂತಾಗಿದೆ.
"

ಕಂಪ್ಲಿ ನಡುವಿನ ಮಸೀದಿಯಿಂದ ಜೋಗಿ ಕಾಲುವೆತನಕದ ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಬೇಕು. ರಸ್ತೆಗೆ ಡಾಂಬರ್ ಹಾಕದ ಹಿನ್ನೆಲೆಯಲ್ಲಿ ಧೂಳು ಮನೆಯೊಳಗೆ ಆವರಿಸುತ್ತಿದೆ. ಜನರ ತಾಳ್ಮೆ ಪರೀಕ್ಷಿಸದೆ ಕೂಡಲೆ ರಸ್ತೆ ಕಾಮಗಾರಿ ಪೂರ್ಣಗೊಳಿಸಬೇಕು.

"

ಕಂಪ್ಲಿ ನಡುವಿನ ಮಸೀದಿಯಿಂದ ಜೋಗಿ ಕಾಲುವೆ ಮಾರ್ಗದಲ್ಲಿ ಬೀದಿ ದೀಪ ಹಾಕಲಾಗುತ್ತಿದ್ದು, ನಂತರ ರಸ್ತೆ ಡಾಂಬರೀಕಣ ಕಾಮಗಾರಿ ಕೈಗೊಳ್ಳಲಾಗುವುದು. 15 ದಿನಗಳಲ್ಲಿ ರಸ್ತೆ ಕಾಮಗಾರಿ ಪೂರ್ಣಗೊಳಿಸಲಾಗುವುದು. ನಂ.10 ಮುದ್ದಾಪುರ ಗ್ರಾಮದಿಂದ ಸಿದ್ಧೇಶ್ವರ ಕ್ರಾಸ್‌ತನಕ ಎರಡು ಕಿ.ಮೀ.ರಸ್ತೆಯನ್ನು ಸುಮಾರು ನಾಲ್ಕು ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲು ಪ್ರಸ್ತಾವನೆ ಸಲ್ಲಿಸಲಾಗಿದೆ. ವಾಲ್ಮೀಕಿ ವೃತ್ತದಿಂದ ಕಾರ್ಖಾನೆವರೆಗಿನ ರಸ್ತೆ ವಿಸ್ತರಣೆಯಾಗಬೇಕಿದೆ. ರಸ್ತೆಯ ಎರಡೂ ಬದಿಗೆ ಚರಂಡಿ ನಿರ್ಮಿಸಲು ಸ್ಥಳ ನಿಗದಿಪಡಿಸುವಂತೆ ತಹಸೀಲ್ದಾರ್‌ಗೆ ಪತ್ರ ಬರೆಯಲಾಗಿದೆ. ಚರಂಡಿ ನಿರ್ಮಿಸಿದ ನಂತರ ರಸ್ತೆ ಡಾಂಬರೀಕರಣ ಕೈಗೊಳ್ಳಲಾಗುವುದು.