ಕಂಪ್ಲಿ ತಹಸಿಲ್ ಕಚೇರಿ ಸಭಾಂಗಣದಲ್ಲಿ ಬಾಲ ಕಾರ್ಮಿಕ ಯೋಜನೆಯ ಯೋಜನಾ ನಿರ್ದೇಶಕ ಎ.ಮೌನೇಶ್ ಅಧ್ಯಕ್ಷತೆಯಲ್ಲಿ ಟಾಸ್ಕ್‌ಫೋರ್ಸ್ ಸಭೆ ನಡೆಯಿತು.
ಕಂಪ್ಲಿ: ಕಾರ್ಮಿಕರ ಮಕ್ಕಳಿಗೆ ಸರ್ಕಾರದ ನಾನಾ ಯೋಜನೆಗಳಿದ್ದು, ಅರ್ಹ ಫಲಾನುಭವಿಗಳಿಗೆ ತಲುಪಿಸುವಲ್ಲಿ ಅಧಿಕಾರಿಗಳು ಮುಂದಾಗಬೇಕಿದೆ ಎಂದು ಬಾಲ ಕಾರ್ಮಿಕ ಯೋಜನೆಯ ಯೋಜನಾ ನಿರ್ದೇಶಕ ಎ.ಮೌನೇಶ್ ಹೇಳಿದರು.
ತಹಸಿಲ್ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಟಾಸ್ಕ್‌ಪೋರ್ಸ್ ಸಭೆಯಲ್ಲಿ ಮಾತನಾಡಿ, ಕಾರ್ಮಿಕರ ಮಕ್ಕಳು, ಬಾಲ ಕಾರ್ಮಿಕರು, ಅನಾಥರು, ಎಚ್‌ಐವಿ ಪೀಡಿತ, ವಿಮುಕ್ತ ದೇವದಾಸಿಯರ ಮಕ್ಕಳನ್ನು ಶೈಕ್ಷಣಿಕವಾಗಿ ಮುಖ್ಯವಾಹಿನಿಗೆ ಕರೆತರಲು ವಸತಿ ಶಾಲೆ, ವಸತಿ ನಿಲಯಗಳಲ್ಲಿ ಮೀಸಲಿದ್ದು ಸದುಪಯೋಗಪಡಿಸಿಕೊಳ್ಳಬೇಕೆಂದರು.
15ರಿಂದ 18ವರ್ಷದೊಳಗಿನ ಕಾರ್ಮಿಕರಿಗಾಗಿ ಜಿಲ್ಲೆಯಲ್ಲಿ ಕೌಶಲ ತರಬೇತಿ ಕೇಂದ್ರ ತೆರೆಯಲಾಗುವುದು. ಪಟ್ಟಣದ ಗ್ಯಾರೇಜ್, ಬಟ್ಟೆ ಅಂಗಡಿ, ಹೊಟೇಲ್ ಮತ್ತಿತರೆಡೆ ದಾಳಿ ನಡೆಸಿ ನಾಲ್ವರು ಬಾಲ ಕಾರ್ಮಿಕರನ್ನು ರಕ್ಷಿಸಲಾಗಿದ್ದು, ಅವರ ಶಾಲಾ ದೃಢೀಕರಣ ಪತ್ರ ಪಡೆದುಕೊಂಡ ನಂತರ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದರು.
ಕಾರ್ಮಿಕ ನಿರೀಕ್ಷಕ ಶಿವಶಂಕರ ತಳವಾರ, ಅಧಿಕಾರಿಗಳಾದ ಎನ್.ಬಿ.ರೇಣುಕಾರಾಧ್ಯ, ಮಹಾಂತೇಶ, ಕೆ.ವಿರೂಪಾಕ್ಷಪ್ಪ, ಟಿ.ಜ್ಯೋತಿ, ನವ್ಯಾ ಪ್ರಶಾಂತ್, ಪಿ.ಬಸವರಾಜ, ಚಂದ್ರಕಲಾ, ಮದನ್, ವಿಘ್ನೇಶ್ ಇತರರಿದ್ದರು.