ಕುರುಗೋಡಿನಲ್ಲಿ ಬಾಲ ಹಾಗೂ ಕಿಶೋರ ಕಾರ್ಮಿಕರ ಟಾಸ್ಕ್‌ಫೋರ್ಸ್ ಸಮಿತಿಯಿಂದ ಅಂಗಡಿ ಮಾಲೀಕರಿಗೆ ಕರಪತ್ರ ನೀಡಿ ಅರಿವು ಮೂಡಿಸಲಾಯಿತು.
ಕುರುಗೋಡು: ಪಟ್ಟಣದಲ್ಲಿ ಮೂವರು ಬಾಲಕಾರ್ಮಿಕರನ್ನು ರಕ್ಷಿಸಲಾಗಿದೆ ಎಂದು ಜಿಲ್ಲಾ ಬಾಲಕಾರ್ಮಿಕ ಯೋಜನೆಯ ಯೋಜನಾ ನಿರ್ದೇಶಕ ಮೌನೇಶ್ ಬುಧವಾರ ಮಾಹಿತಿ ನೀಡಿದರು.
ಪಟ್ಟಣದಲ್ಲಿ ಪ್ಯಾನ್-ಇಂಡಿಯಾ ರಕ್ಷಣೆ ಮತ್ತು ಪುನರ್ವಸತಿ ಅಭಿಯಾನ ಪ್ರಯುಕ್ತ ಬಾಲ ಹಾಗೂ ಕಿಶೋರ ಕಾರ್ಮಿಕರ ಟಾಸ್ಕ್ ಫೋರ್ಸ್ ಸಮಿತಿಯಿಂದ ಪಟ್ಟಣದ ವಿವಿಧೆಡೆ ದಾಳಿ ನಡೆಸಿದ ಬಳಿಕ ಮಾತನಾಡಿದರು.
ಗೆಣಿಕೆಹಾಳ್ ರಸ್ತೆ, ತೇರು ಬೀದಿ, ಹಳೇ ಎಸ್‌ಬಿಎಂ ರಸ್ತೆಯಲ್ಲಿನ ಅಂಗಡಿ, ಮುಂಗಟ್ಟು, ಗ್ಯಾರೇಜ್ ಸೇರಿದಂತೆ ಇತರೆಡೆ ದಾಳಿ ನಡೆಸಲಾಗಿದೆ. ಕೆಲಸದಲ್ಲಿ ತೊಡಗಿದ್ದ ಮೂವರು ಬಾಲಕಾರ್ಮಿಕರನ್ನು ವಶಕ್ಕೆ ಪಡೆದು ಶಿಕ್ಷಣ ಇಲಾಖೆಗೆ ಒಪ್ಪಿಸಲಾಗಿದೆ. ಅಂಗಡಿಗಳ ಮಾಲೀಕರಿಗೆ ಕರಪತ್ರ ಹಾಗೂ ಪೋಸ್ಟರ್ ನೀಡಿ ಜಾಗೃತಿ ಮೂಡಿಸಲಾಯಿತು ಎಂದು ತಿಳಿಸಿದರು.
ಗ್ರೇಡ್ 2 ತಹಸೀಲ್ದಾರ್ ಮಲ್ಲೇಶಪ್ಪ, ಜಿಲ್ಲಾ ತಂಬಾಕು ನಿಯಂತ್ರಣ ಕೋಶ ಸಲಹೆಗಾರ ಪ್ರಶಾಂತ್ ಕುಮಾರ್, ಮಕ್ಕಳ ರಕ್ಷಣಾ ಘಟಕದ ರವಿಕುಮಾರ್, ಮಕ್ಕಳ ಸಹಾಯವಾಣಿಯ ಕಾರ್ತಿಕ್ ಇತರರು ಇದ್ದರು.