ಕಂಪ್ಲಿ ವೆಂಕಟರಮಣ ದೇವಸ್ಥಾನದ ಆವರಣದಲ್ಲಿ ಚಂಪಾ ಷಷ್ಠಿ ನಿಮಿತ್ತ ಶ್ರೀ ಮನ್ನಾರಾಯಣಾಶ್ರಮದ ಪರಮಹಂಸ ನಾರಾಯಣ ವಿದ್ಯಾಭಾರತಿ ಸ್ವಾಮೀಜಿ ಆಶೀರ್ವಚನ ನೀಡಿದರು.  
ಬಳ್ಳಾರಿ

ಚಂಪಾ ಷಷ್ಠಿ ಆರಾಧನೆಯಿಂದ ದೋಷ ನಿವಾರಣೆ

ಕಂಪ್ಲಿ: ಚಂಪಾ ಷಷ್ಠಿಯಂದು ನಾಗಸುಬ್ರಹ್ಮಣ್ಯ ಆರಾಧನೆಯಿಂದ ಮನೋರೋಗಾದಿ ಸಂಕಷ್ಟಗಳಿಂದ ಪಾರಾಗಬಹುದು ಎಂದು ಶ್ರೀ ಮನ್ನಾರಾಯಣಾಶ್ರಮದ ಪರಮಹಂಸ ನಾರಾಯಣ ವಿದ್ಯಾಭಾರತಿ ಸ್ವಾಮೀಜಿ ಹೇಳಿದರು.
ನಾಗಸುಬ್ರಹ್ಮಣ್ಯ ಚಂಪಾ ಷಷ್ಠಿ ಆರಾಧನೆಯ ನಿಮಿತ್ತ ಪಟ್ಟಣದ ಸತ್ಯನಾರಾಯಣಪೇಟೆ ವೆಂಕಟರಮಣ ದೇವಸ್ಥಾನದಲ್ಲಿ ಆಯೋಜಿಸಿದ್ದ ಧರ್ಮಜಾಗೃತಿ ಸಭೆಯ ಸಾನ್ನಿಧ್ಯ ವಹಿಸಿ ಬುಧವಾರ ಮಾತನಾಡಿ, ಚಂಪಾಷಷ್ಠಿ ಆರಾಧನೆಯಿಂದ ಕಳತ್ರದೋಷ, ಚರ್ಮವ್ಯಾದಿಗಳಿಂದ ದೂರವಾಗಬಹುದು. ಸುಖಮಯ ದಾಂಪತ್ಯ, ಸ್ಥಿರಲಕ್ಷ್ಮೀ ಪ್ರಾಪ್ತಿ, ಮಾನಸಿಕ ನೆಮ್ಮದಿ ಸಾಧ್ಯ. ಇದಕ್ಕಾಗಿ ಪ್ರತಿ ಸಂವತ್ಸರದ ಚಂಪಾ ಷಷ್ಠಿಯಂದು ಬ್ರಾಹ್ಮಣವಟುವಿಗೆ ಬಿಳಿ ಲುಂಗಿ, ಟವಲ್, ಒಂದು ಲೋಟ ಹಾಲು ದಾನ ನೀಡುವಂತೆ ಆಶೀರ್ವಚನ ನೀಡಿದರು.
ಚಂಪಾ ಷಷ್ಠಿ ನಿಮಿತ್ತ ನಾಗಸುಬ್ರಹ್ಮಣ್ಯ ಪ್ರತಿಮೆಗೆ ಪಂಚಾಮೃತಾಸಹಿತ ಶ್ರೀಸೂಕ್ತ, ಪುರುಷ ಸೂಕ್ತ, ಗಣಪತಿ ಸೂಕ್ತ, ಅಷ್ಟೋತ್ತರ ಶತನಾಮಾವಳಿಯೊಂದಿಗೆ ರುದ್ರಾಭಿಷೇಕ, ಶಕ್ತಾನುಸಾರ ಅನ್ನಸಂತರ್ಪಣೆ ಜರುಗಿತು.
ಭಕ್ತರು ಚರ್ಮ, ಮನೋರೋಗ ನಿವಾರಣೆಗೆ ಸಂಕಲ್ಪ ಕೈಗೊಂಡು ಬ್ರಾಹ್ಮಣ ವಟುವಿಗೆ ವಸ್ತ್ರದಾನ, ಹಾಲು, ನಾಗಬಿಂಬವನ್ನು ದಾನ ಮಾಡಿದರು. ಸೇವಾಧರ್ಮದರ್ಶಿಗಳಾದ ವೈಷ್ಣವಿ ಕೃಷ್ಣಮೂರ್ತಿ, ಲಲಿತಾರಾಣಿ ಗಿರೀಶ್, ರೂಪಾ ಗುರುಪ್ರಸಾದ್, ಸವಿತಾ ಶಶಿಧರ್, ಭಗವತಿ, ಆಶ್ವತ್ಥನಾರಾಯಣ ಇತರರಿದ್ದರು.