ಕಂಪ್ಲಿ ತಹಸೀಲ್ ಸಭಾಂಗಣದಲ್ಲಿ ನಡೆದ ಅಮರಶಿಲ್ಪಿ ಜಕಣಾಚಾರಿ ಜಯಂತ್ಯುತ್ಸವದಲ್ಲಿ ಬುಕ್ಕಸಾಗರದ ಶಿಲ್ಪಿ ವಿಶ್ವನಾಥಾಚಾರ್‌ರನ್ನು ಗೌರವಿಸಲಾಯಿತು. ತಹಸೀಲ್ದಾರ್ ಜೂಗಲ ಮಂಜುನಾಥ, ವಿಶ್ವಕರ್ಮ ಸಮಾಜದ ಅಧ್ಯಕ್ಷ ಡಿ.ಎ.ರುದ್ರಪ್ಪಾಚಾರ್, ಪದಾಧಿಕಾರಿಗಳಾದ ಡಿ.ಮೌನೇಶ್, ಡಿ.ಕಾಳಾಚಾರ್, ಚಂದ್ರಶೇಖರಾಚಾರ್ ಇತರರಿದ್ದರು. 
ಬಳ್ಳಾರಿ

ಭಾಷಣಕ್ಕೆ ಸೀಮಿತವಾದ ಸಂಸ್ಮರಣೆ ದಿನ

ಗಾಯತ್ರಿ ಮಾಲಿಪಾಟೀಲ್

ಪ್ರಮುಖ ಮುಖ್ಯಾಂಶಗಳು

  • ಅಮರಶಿಲ್ಪಿ
  • ಸಂಸ್ಮರಣಾ ದಿನ

ಭಾಷಣಕ್ಕೆ ಸೀಮಿತವಾದ ಸಂಸ್ಮರಣೆ ದಿನ

ಕಂಪ್ಲಿ: ವಿಶ್ವಕರ್ಮ ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣಾ ದಿನವನ್ನು ಸರ್ಕಾರ ಕಾಟಾಚಾರಕ್ಕೆ ಆಚರಿಸುತ್ತಿದ್ದು, ವಿಶ್ವಕರ್ಮ ಸಮುದಾಯಕ್ಕೆ ಬೇಸರ ತಂದಿದೆ ಎಂದು ವಿಶ್ವಕರ್ಮ ಸಮಾಜದ ಕಾರ್ಯದರ್ಶಿ ಡಿ.ಮೌನೇಶ್ ಬೇಸರ ವ್ಯಕ್ತಪಡಿಸಿದರು.
ಪಟ್ಟಣದ ತಹಸಿಲ್ ಕಚೇರಿ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣಾ ದಿನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಆಯಾ ಪ್ರದೇಶದ ಶಿಲ್ಪಿಗಳನ್ನು ಗುರುತಿಸಿ ಗೌರವಿಸಿದರೆ ಜಕಣಾಚಾರಿ ಸಂಸ್ಮರಣೆಗೆ ಅರ್ಥ ಬರಲಿದೆ. ಕೇವಲ ಭಾವಚಿತ್ರಕ್ಕೆ ಪೂಜೆ, ಭಾಷಣಕ್ಕೆ ಸೀಮಿತವಾದ ಸಂಸ್ಮರಣೆ ಅರ್ಥಕಳೆದುಕೊಂಡಿದೆ. ಅಮರಶಿಲ್ಪಿ ಜಕಣಾಚಾರಿ, ವಿಶ್ವಕರ್ಮ ಪೂಜಾ ಮಹೋತ್ಸವ ದಿನಾಚರಣೆಗಳಿಗೆ ಸರ್ಕಾರದಿಂದ ಅನುದಾನ ಬರುತ್ತದೆಯೆ ಎಂಬ ಹಿಂಬರಹ ನೀಡುವಂತೆ ಒತ್ತಾಯಿಸಿ ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದರು.
ಅಖಿಲ ಭಾರತೀಯ ವಿಶ್ವಕರ್ಮ ಮಹಾಸಭಾ ಜಿಲ್ಲಾಧ್ಯಕ್ಷ ಎಂ.ಮಂಜುನಾಥ ಮಾತನಾಡಿ, ಸಂಸ್ಮರಣ ಅಚರಣೆಗೆ ಶಿಷ್ಟಾಚಾರ ಪಾಲಿಸಬೇಕು. ಆಹ್ವಾನಪತ್ರಿಕೆ ಮುದ್ರಿಸಬೇಕು. ಶಿಲ್ಪಿಗಳನ್ನು ಗೌರವಿಸಬೇಕು. ಶಿಲ್ಪಿಗಳಿಗೆ ನೆರವಾಗುವ ಸಲಕರಣೆಗಳ ಕಿಟ್ ವಿತರಿಸಬೇಕು.
ಎಲ್ಲ ಶಾಲಾ-ಕಾಲೇಜು, ಸರ್ಕಾರಿ ಕಚೇರಿಗಳಲ್ಲಿ ಅರ್ಥಪೂರ್ಣವಾಗಿ ಆಚರಿಸಬೇಕು ಎಂದು ಆಗ್ರಹಿಸಿದರು. ತಹಸೀಲ್ದಾರ್ ಜೂಗಲ ಮಂಜುನಾಯಕ ಮಾತನಾಡಿ, ಜಕಣಾಚಾರಿ ಹೊಯ್ಸಳ ಕಲೆ ಜಗತ್ಪ್ರಸಿದ್ಧವಾಗಿದೆ. ಶಿಲ್ಪಿಗಳಿಗೆ ಜಕಣಾಚಾರಿ ಆದರ್ಶವಾಗಿದ್ದು, ಅವರ ಕೊಡುಗೆ ಅಪಾರ ಎಂದರು. ಬುಕ್ಕಸಾಗರದ ಶಿಲ್ಪಿ ವಿಶ್ವನಾಥಾಚಾರ ಅವರನ್ನು ಸನ್ಮಾನಿಸಲಾಯಿತು.
ವಿಶ್ವಕರ್ಮ ಸಮಾಜದ ಅಧ್ಯಕ್ಷ ಡಿ.ಎ.ರುದ್ರಪ್ಪಾಚಾರ್, ಪದಾಧಿಕಾರಿಗಳಾದ ಡಿ.ಕಾಳಾಚಾರ್, ಚಂದ್ರಶೇಖರಾಚಾರ್, ರಾಮಚಂದ್ರಾಚಾರ್, ಪ್ರಮುಖರಾದ ಎ.ರಾಘವೇಂದ್ರ, ಅಳ್ಳಳ್ಳಿ ಮೌನೇಶ್, ನಾರಾಯಣಾಚಾರ್, ವೀರಭದ್ರಾಚಾರ್, ಡಿ.ವಿಜಯಕುಮಾರ್, ಆನಂದಾಚಾರ್, ಎಂ.ವಿಜಯಲಕ್ಷ್ಮೀ ಇತರರಿದ್ದರು.