ಕುರುಗೋಡು ತಾಲೂಕಿನ ಎಚ್.ವೀರಾಪುರ ಗ್ರಾಮದ ಜ್ಞಾನಜ್ಯೋತಿ ಜಡೇಶ ಶಿವಲಿಂಗ ಮಂದಿರದಲ್ಲಿ ಸಿದ್ಧಗಂಗಾ ಮಠದ ಡಾ.ಶಿವಕುಮಾರ ಸ್ವಾಮೀಜಿ ಜಯಂತಿ ಆಚರಿಸಲಾಯಿತು.
ಕುರುಗೋಡು: ಸಮಾಜ ಸುಧಾರಣೆ, ಶಿಕ್ಷಣ, ಅನ್ನದಾಸೋಹವನ್ನು ಜೀವನದ ಧ್ಯೇಯವಾಗಿಸಿಕೊಂಡಿದ್ದ ಸಿದ್ಧಗಂಗಾ ಮಠದ ಡಾ.ಶಿವಕುಮಾರ ಸ್ವಾಮೀಜಿ ಸೇವಾ ಪರಂಪರೆ ಮತ್ತು ತತ್ವಗಳು ಯುವ ಪೀಳಿಗೆಯ ಪ್ರಗತಿಗೆ ಸದಾ ಬೆಳಕಾಗಲಿ ಎಂದು ಜಡೇಶ ತಾತ ಹೇಳಿದರು.
ಎಚ್ ವೀರಾಪುರ ಗ್ರಾಮದ ಜ್ಞಾನಜ್ಯೋತಿ ಜಡೇಶ ಶಿವಲಿಂಗ ಮಂದಿರದಲ್ಲಿ ಬುಧವಾರ ಹಮ್ಮಿಕೊಳ್ಳಲಾಗಿದ್ದ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಡಾ.ಶಿವಕುಮಾರ ಸ್ವಾಮೀಜಿ ಬದುಕು ಪ್ರಯೋಗ ಶಾಲೆಯಂತೆ ಇತ್ತು. ಅವರ ಬದುಕು ಜನಸಾಮಾನ್ಯರಲ್ಲಿ ವಿಸ್ಮಯ, ಆಶ್ಚರ್ಯ ಉಂಟು ಮಾಡಿತ್ತು. ವಿಶ್ರಾಂತಿಯನ್ನೇ ಮರೆತು ನಿರಂತರವಾಗಿ ಸಮಾಜ ಸೇವೆಗೆ ಸಮಯ ಮೀಸಲಿಟ್ಟಿದ್ದರು. ಜನಕಲ್ಯಾಣದ ಜತೆಗೆ ಧರ್ಮ ಜಾಗೃತಿ ಮೂಡಿಸುವ ಮೂಲಕ ಸಮಾಜವನ್ನು ಸರಿ ದಾರಿಯಲ್ಲಿ ಮುನ್ನಡೆಸಿದ್ದರು. ಎಲ್ಲರ ಬಾಯಲ್ಲೂ ನಡೆದಾಡುವ ದೇವರಾಗಿ ಉಳಿದುಕೊಂಡಿದ್ದಾರೆ ಎಂದು ಸ್ಮರಿಸಿದರು.
ಶಿಕ್ಷಕ ಎಸ್ ರಾಮಪ್ಪ ಮಾತನಾಡಿ, ಸ್ವಾಮೀಜಿ ಲೌಕಿಕ ಹಾಗೂ ಆಧ್ಯಾತ್ಮಿಕತೆಯನ್ನು ಸಮನ್ವಯಗೊಳಿಸಿ ಬದುಕಿದ್ದರು. ಈ ಮೂಲಕ ಜನರ ಪ್ರೀತಿ, ಅಭಿಮಾನಕ್ಕೆ ಪಾತ್ರರಾಗಿದ್ದರು. ಮೊದಲು ಅನ್ನ ದಾಸೋಹ, ನಂತರ ಜ್ಞಾನ ದಾಸೋಹ ಎಂಬ ನಂಬಿಕೆ ಹೊಂದಿದ್ದರು. ಲಕ್ಷಾಂತರ ಜನರಿಗೆ ಜ್ಞಾನ ದಾಸೋಹಿ ಆಗಿದ್ದರು. ಜನರ ಒಳಿತಿಗಾಗಿ ಜೀವನವನ್ನೇ ಸಮರ್ಪಿಸಿಕೊಂಡಿದ್ದರು ಎಂದರು.