ಬಳ್ಳಾರಿಯ ಕನ್ನಡ ಭವನದಲ್ಲಿ ಆಯೋಜಿಸಿದ್ದ ಸಾಹಿತ್ಯ ಕುರಿತು ಸಂವಾದ ಕಾರ್ಯಕ್ರಮದಲ್ಲಿ ಲೇಖಕರಾದ ಡಾ.ಟಿ.ಎಸ್.ಗೊರವರ, ಆರೀಫ್ ರಾಜಾ, ಡಾ.ಚಿದಾನಂದ ಸಾಲಿ, ಪ್ರಕಾಶನದ ಮುಖ್ಯಸ್ಥ ಸಿ.ಚನ್ನಬಸವಣ್ಣ, ಕಸಾಪ ಜಿಲ್ಲಾಧ್ಯಕ್ಷ ನಿಷ್ಠಿ ರುದ್ರಪ್ಪ ಇದ್ದರು. 
ಬಳ್ಳಾರಿ

ಸಾಹಿತ್ಯದಲ್ಲಿ ಸಂಬಂಧಗಳು ಬೆರೆತಿವೆ

ಪ್ರಮುಖ ಮುಖ್ಯಾಂಶಗಳು

  • ಗ್ರಾಮೀಣ ಬದುಕಿನ ಸೂಕ್ಷ್ಮತೆ

ಬಳ್ಳಾರಿ :

ಸಾಲಿ ಅವರ ಸಾಹಿತ್ಯ ಕೃತಿಗಳಲ್ಲಿ ಬದುಕಿನ ವಿವಿಧ ಮಗ್ಗುಲುಗಳು, ಸಾಮಾಜಿಕ ವಾಸ್ತವ ಹಾಗೂ ಮನುಷ್ಯ ಸಂಬಂಧಗಳು ಬೆರೆತಿವೆ ಎಂದು ಲೇಖಕ ಆರೀಫ್ ರಾಜಾ ಹೇಳಿದರು.

ನಗರದ ಕನ್ನಡ ಭವನದಲ್ಲಿ ಆಯೋಜಿಸಿದ್ದ ಡಾ.ಚಿದಾನಂದ ಸಾಲಿ ಅವರ ಸಾಹಿತ್ಯ ಕುರಿತು ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು. ಜತೆಗೆ ಗ್ರಾಮೀಣ ಬದುಕಿನ ಸೂಕ್ಷ್ಮತೆ, ಸಮಕಾಲೀನ ಸಮಾಜದ ತಲ್ಲಣಗಳು ಹಾಗೂ ಮಾನವೀಯ ಮೌಲ್ಯಗಳು ಪರಿಣಾಮಕಾರಿಯಾಗಿವೆ. ಸಾಹಿತ್ಯದ ಒಂದೇ ಪ್ರಕಾರಕ್ಕೆ ಸೀಮಿತವಾಗದೆ ಕಥೆ, ಕಾವ್ಯ, ಪ್ರಬಂಧ, ಅನುವಾದ ಸೇರಿದಂತೆ ಹಲವು ಪ್ರಕಾರಗಳಲ್ಲಿ ಅವರು ತಮ್ಮ ಸೃಜನಶೀಲತೆಯನ್ನು ವಿಸ್ತರಿಸಿಕೊಂಡಿರುವುದು ಅವರ ಸಾಹಿತ್ಯಿಕ ಪಯಣದ ಪ್ರಮುಖ ವೈಶಿಷ್ಟ್ಯವಾಗಿದೆ. ಪ್ರಕಾರ ಬದಲಾದರೂ ಅವರ ಬರವಣಿಗೆಯಲ್ಲಿರುವ ಮಾನವೀಯ ಕಾಳಜಿ, ಸಾಮಾಜಿಕ ಸ್ಪಂದನೆ ಮತ್ತು ಜೀವನಾನುಭವಗಳೇ ಕೇಂದ್ರಬಿಂದುವಾಗಿವೆ ಎಂದು ಹೇಳಿದರು.

ಪ್ರಕಾಶನದ ಮುಖ್ಯಸ್ಥ ಸಿ.ಚನ್ನಬಸವಣ್ಣ ಮಾತನಾಡಿ, ಸಾಹಿತ್ಯ ಎನ್ನುವುದು ಸಮಾಜವನ್ನು ನೋಡುವ, ಅರ್ಥಮಾಡಿಕೊಳ್ಳುವ ಮತ್ತು ಪ್ರಶ್ನಿಸುವ ಒಂದು ಸೂಕ್ಷ್ಮ ಮಾಧ್ಯಮ. ಲೇಖಕ ತನ್ನ ಸುತ್ತಲಿನ ಬದುಕಿಗೆ ಸ್ಪಂದಿಸಿದಾಗ ಮಾತ್ರ ಆತನ ಸಾಹಿತ್ಯಕ್ಕೆ ಜೀವಂತಿಕೆ ದೊರೆಯುತ್ತದೆ. ಚಿದಾನಂದ ಸಾಲಿ ಅವರ ಬರಹಗಳು ಬದುಕಿನ ಪ್ರತಿಬಿಂಬವಾಗಿ ಪ್ರತಿಫಲಿಸಿವೆ ಎಂದು ಅಭಿಪ್ರಾಯಪಟ್ಟರು.
ಯುವ ಲೇಖಕ ಡಾ.ಟಿ.ಎಸ್.ಗೊರವರ ಅವರು, ಸಾಲಿ ಅವರ ಸಾಹಿತ್ಯ ಕುರಿತು ಮಾತನಾಡಿ, ಸಮಾಜದ ಅಂಚಿನಲ್ಲಿರುವವರ ನೋವು, ಸಂಘರ್ಷ, ಕನಸು, ನಿರೀಕ್ಷೆ, ಸಂಬಂಧಗಳ ಸಂಕೀರ್ಣತೆ ಹಾಗೂ ಬದಲಾಗುತ್ತಿರುವ ಸಾಮಾಜಿಕ ಪರಿಸ್ಥಿತಿಗಳು ಸಾಲಿ ಅವರ ಕಥನಗಳಲ್ಲಿ ವಿಭಿನ್ನ ನೆಲೆಯಲ್ಲಿ ಕಾಣಿಸಿಕೊಳ್ಳುತ್ತವೆ. ಕಥೆಯ ಪಾತ್ರಗಳನ್ನು ಕೇವಲ ಘಟನೆಗಳ ಭಾಗವಾಗಿ ಸೃಷ್ಟಿಸದೆ, ಅವರ ಒಳಮನಸ್ಸು ಮತ್ತು ಬದುಕಿನ ಸಂಘರ್ಷಗಳೊಂದಿಗೆ ಕಟ್ಟಿಕೊಡುವುದು ಸಾಲಿ ಅವರ ಕಥಾ ಶೈಲಿಯ ಪ್ರಮುಖ ಗುಣವಾಗಿದೆ ಎಂದು ತಿಳಿಸಿದರು.
ಲೇಖಕ ಡಾ.ಚಿದಾನಂದ ಸಾಲಿ ಮಾತನಾಡಿ, ತಮ್ಮ ಬರವಣಿಗೆಯ ಬದುಕಿಗೆ ಬಳ್ಳಾರಿ ನೀಡಿದ ನೆರವು, ಪ್ರೋತ್ಸಾಹ ಹಾಗೂ ಈ ಭಾಗದ ಜನರ ಪ್ರೇರಣೆಯನ್ನು ಸ್ಮರಿಸಿಕೊಂಡರು. ಬಳಿಕ ಕನ್ನಡ ಪುಸ್ತಕ ಪ್ರಾಧಿಕಾರದ ಅತ್ಯುತ್ತಮ ಪ್ರಕಾಶನ ಪ್ರಶಸ್ತಿ ಪಡೆದ ಪಲ್ಲವ ಪ್ರಕಾಶನದ ಮುಖ್ಯಸ್ಥ ಪಲ್ಲವ ವೆಂಕಟೇಶ್ ಅವರನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಸಾಹಿತಿ ಕಾರ್ಯದರ್ಶಿ ಡಾ.ಶಿವಲಿಂಗಪ್ಪ ಹಂದಿಹಾಳು, ಡಾ.ನಾಗರಾಜ ಬಸರಕೋಡು, ಹಿರಿಯ ಲೇಖಕಿ ಡಿ.ಬಿ.ರಜಿಯಾ, ಲೇಖಕರಾದ ದಸ್ತಗೀರ್ ಸಾಬ್ ದಿನ್ನಿ, ಅಬ್ದುಲ್ ಹೈ ತೋರಣಗಲ್, ವೀರೇಂದ್ರ ರಾವಿಹಾಳು, ದಾದಾ ಖಲಂದರ್ ಭಾಗವಹಿಸಿದ್ದರು.
==