ಸಂಡೂರಿನ ತುಂಬರಗುದ್ದಿಯ ಅರಣ್ಯದಿಂದ ಅದಿರು ಸಾಗಿಸುತ್ತಿರುವ ಲಾರಿಗಳು. 
ಬಳ್ಳಾರಿ

ತುಂಬರಗುದ್ದಿ ಅರಣ್ಯಕ್ಕೆ ಕಾಯಕಲ್ಪ

ಪ್ರಮುಖ ಮುಖ್ಯಾಂಶಗಳು

  • 20.06 ಕೋಟಿ ರೂ. ವೆಚ್ಚದಲ್ಲಿ ಮರುಸ್ಥಾಪನೆ
  • ಕೆಎಂಆರ್‌ಸಿಯಿಂದ ಅನುಮೋದನೆ
ಬಳ್ಳಾರಿ : ಜಿಲ್ಲೆಯ ಸಂಡೂರು ತಾಲೂಕಿನ ಗಣಿಗಾರಿಕೆಯಿಂದ ತೀವ್ರವಾಗಿ ಹಾನಿಗೊಳಗಾಗಿರುವ ತುಂಬರಗುದ್ದಿ ಅರಣ್ಯ ಬ್ಲಾಕ್‌ಗೆ ಗತವೈಭವ ಮರಳಿ ತರಲು ಅರಣ್ಯ ಇಲಾಖೆ ಭಾರಿ ಸಿದ್ಧತೆ ನಡೆಸಿದೆ.
ಅರಣ್ಯ ಬ್ಲಾಕ್ ಅನ್ನು ಪರಿಸರ ಮರುಸ್ಥಾಪನೆ (ಅರಣ್ಯೀಕರಣ) ವಲಯದಡಿ ಪುನರುಜ್ಜೀವನಗೊಳಿಸಲು 20.06 ಕೋಟಿ ರೂ. ವೆಚ್ಚದ ಯೋಜನೆಗೆ ಕರ್ನಾಟಕ ಗಣಿ ಪರಿಸರ ಪುನಃಸ್ಥಾಪನೆ ನಿಗಮ (ಕೆಎಂಆರ್‌ಸಿ)ಯೂ ಅನುಮೋದನೆ ನೀಡಿದ್ದು, ಸದ್ಯ ಹಂತ ಹಂತವಾಗಿ ಕಾರ್ಯ ನಿರ್ವಹಿಸಲಾಗುತ್ತಿದೆ. ಬಳ್ಳಾರಿ ವಲಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ (ಡಿಸಿಎಫ್) ನೇತೃತ್ವದಲ್ಲಿ ಈ ಮಹತ್ವಾಕಾಂಕ್ಷಿ ಯೋಜನೆ ಜಾರಿಗೆ ಬರಲಿದ್ದು, 2030ರ ವೇಳೆಗೆ ಕಾಡಿನ ಚಿತ್ರಣವೇ ಬದಲಾಗುವ ಸಾಧ್ಯತೆಯಿದೆ.
ಕಮರಿದ ಹಸಿರು : ತುಂಬರಗುದ್ದಿ ಮೀಸಲು ಅರಣ್ಯದ ಒಟ್ಟು ವಿಸ್ತೀರ್ಣ 1852.43 ಹೆಕ್ಟೇರ್ ಪ್ರದೇಶವಾಗಿದೆ. ಇದರಲ್ಲಿ 62.08 ಹೆಕ್ಟೇರ್ ಪ್ರದೇಶವೂ ಗಣಿಗಾರಿಕೆ ಚಟುವಟಿಕೆಗಳಿಗೆ ಮುಕ್ತಗೊಳಿಸಲಾಗಿದೆ. ಅಷ್ಟೇ ಅಲ್ಲದೆ, ಈ ಅರಣ್ಯಕ್ಕೆ ಹೊಂದಿಕೊಂಡಂತಿರುವ ಸುಮಾರು 500 ಹೆಕ್ಟೇರ್ ಪ್ರದೇಶದಲ್ಲೂ ವ್ಯಾಪಕ ಗಣಿಗಾರಿಕೆ ನಡೆಯುತ್ತಿದೆ. ನಿರಂತರ ಅದಿರು ಸಾಗಣೆಯ ಭಾರಿ ವಾಹನಗಳ ಸಂಚಾರದಿಂದಾಗಿ ಅರಣ್ಯದ ರಸ್ತೆಗಳು ಸಂಪೂರ್ಣ ಹಾನಿಗೊಳಗಾಗಿವೆ. ಗಣಿ ಧೂಳಿನ ಮಾಲಿನ್ಯದಿಂದಾಗಿ ಮರಗಳ ಗುಣಮಟ್ಟ ಕುಂಠಿತಗೊಂಡಿದ್ದು, ಹೊಸ ಸಸಿಗಳು ಬೆಳೆಯದಂತಾಗಿದೆ. ಅತಿಯಾದ ಜಾನುವಾರು ಮೇಯಿಸುವಿಕೆ ಹಾಗೂ ಅರಣ್ಯ ಒತ್ತುವರಿಯಿಂದಾಗಿ ಕಾಡಿನ ಪರಿಸರ ವ್ಯವಸ್ಥೆ ತೀವ್ರ ನಾಶದ ಅಂಚಿಗೆ ತಲುಪಿದೆ.
ಏನೆಲ್ಲ ನಡೆಯಲಿದೆ : ತುಂಬರಗುದ್ದಿಯ ಅರಣ್ಯ ಸಂಪತ್ತಿನ ರಕ್ಷಣೆ ಮತ್ತು ಪರಿಸರ ಸಮತೋಲನ ಕಾಯ್ದುಕೊಳ್ಳುವ ಉದ್ದೇಶದಿಂದ ಅರಣ್ಯ ಇಲಾಖೆಯು ಹಸಿರೀಕರಣ ಹಾಗೂ ಗಡಿ ಬಲವರ್ಧನೆ ಕಾಮಗಾರಿಗೆ ಚಾಲನೆ ನೀಡಿದೆ. ಕಾಡಿನ ರಕ್ಷಣೆಗಾಗಿ ಒಟ್ಟು 15 ಕಿ.ಮೀ. ಉದ್ದದ ಅರಣ್ಯ ಗಡಿ ಬಲವರ್ಧನೆ ಯೋಜನೆ ಕೈಗೆತ್ತಿಕೊಳ್ಳಲಾಗುತ್ತಿದ್ದು, ಇದರೊಂದಿಗೆ ವಿವಿಧ ಮಾದರಿಗಳ ಅಡಿಯಲ್ಲಿ ವ್ಯಾಪಕ ನೆಡುತೋಪು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಪರಿಸರ ಮರುಸ್ಥಾಪನೆ (ಮಾದರಿ ಎ) ಕಾಡಿನೊಳಗೆ ನೈಸರ್ಗಿಕ ಸಮತೋಲನ ಮರುಸ್ಥಾಪಿಸಲು ಈ ಮಾದರಿಗೆ ಅತ್ಯಂತ ಹೆಚ್ಚಿನ ಒತ್ತು ನೀಡಲಾಗಿದ್ದು, ಒಟ್ಟು 400 ಹೆಕ್ಟೇರ್ ಪ್ರದೇಶದಲ್ಲಿ ಪರಿಸರ ಮರುಸ್ಥಾಪನೆ ಕಾರ್ಯ ನಡೆಯಲಿದೆ. ಅಸಿಸ್ಟೆಡ್ ನ್ಯಾಚುರಲ್ ರೀಜನರೇಷನ್ (ಮಾದರಿ ಬಿ)ಯಲ್ಲಿ ನೈಸರ್ಗಿಕ ಪುನರುತ್ಪತ್ತಿಗೆ ಪೂರಕವಾಗಿ 200 ಹೆಕ್ಟೇರ್ ವಿಸ್ತೀರ್ಣದಲ್ಲಿ ವಿಶೇಷ ನೆಡುತೋಪು ನಿರ್ಮಿಸಲಾಗುವುದು.
ಕೃತಕ ಅರಣ್ಯೀಕರಣ (ಮಾದರಿ ಡಿ)ಯಲ್ಲಿ ಅರಣ್ಯೀಕರಣ ಉತ್ತೇಜಿಸುವ ಸಲುವಾಗಿ 25 ಹೆಕ್ಟೇರ್ ಪ್ರದೇಶದಲ್ಲಿ ಕೃತಕವಾಗಿ ಗಿಡಗಳನ್ನು ನೆಟ್ಟು ಅರಣ್ಯ ಬೆಳೆಸಲು ನಿರ್ಧರಿಸಲಾಗಿದೆ. ರಸ್ತೆ ಬದಿ ಪ್ಲಾಂಟೇಶನ್ (ಮಾದರಿ ಇ)ಯಲ್ಲಿ ಹಸಿರು ವಲಯವನ್ನು ವಿಸ್ತರಿಸಲು ಒಟ್ಟು 20 ಕಿ.ಮೀ. ಉದ್ದದ ರಸ್ತೆ ಬದಿಗಳಲ್ಲಿ ಸಸಿಗಳನ್ನು ನೆಟ್ಟು ಪೋಷಿಸಲಾಗುವುದು. ಸಾಂಸ್ಥಿಕ ನೆಡುತೋಪು (ಮಾದರಿ ಎಫ್) ವಿವಿಧ ಸಂಸ್ಥೆಗಳ ಸಹಭಾಗಿತ್ವ ಅಥವಾ ಸಾಂಸ್ಥಿಕ ಆವರಣಗಳಲ್ಲಿ ಒಟ್ಟು 20 ಹೆಕ್ಟೇರ್ ಪ್ರದೇಶದಲ್ಲಿ ನೆಡುತೋಪು ಬೆಳೆಸುವ ಗುರಿ ಹೊಂದಲಾಗಿದೆ. ಸಾರ್ವಜನಿಕ ಸಸಿ ವಿತರಣೆ (ಮಾದರಿ ಎಚ್)ಯಲ್ಲಿ ಸಾಮಾಜಿಕ ಅರಣ್ಯೀಕರಣಕ್ಕೆ ಉತ್ತೇಜನ ನೀಡಲು, ಸಾರ್ವಜನಿಕರು ಹಾಗೂ ರೈತರಿಗೆ ವರ್ಷಕ್ಕೆ 30 ಸಾವಿರ ಸಸಿಗಳನ್ನು ಉಚಿತವಾಗಿ ಅಥವಾ ರಿಯಾಯಿತಿ ದರದಲ್ಲಿ ವಿತರಿಸಿ ಮತ್ತಷ್ಟು ಹಸಿರಾಗಿಸುವ ಸಂಕಲ್ಪ ಮಾಡಲಾಗಿದೆ. ಒಟ್ಟಾರೆ 20.06 ಕೋಟಿ ರೂ. ವೆಚ್ಚದಲ್ಲಿ ಏಳು ವರ್ಷದೊಳಗೆ ಕಾಮಗಾರಿ ಪೂರ್ಣಗೊಳಿಸಲು ಉದ್ದೇಶಿಸಿದೆ.
"

ಕೋಟ್... ತುಂಬರಗುದ್ದಿ ಅರಣ್ಯಿಕರಣಕ್ಕೆ ಕೆಎಂಆರ್‌ಸಿಯಿಂದ ಈಗಾಗಲೇ ಅನುಮೋದನೆ ದೊರೆತಿದ್ದು, ಹಂತ ಹಂತವಾಗಿ ಕಾರ್ಯ ರೂಪಿಸಿ ಹಸಿರೀಕರಣಗೊಳಿಸಲು ಉದ್ದೇಶಿಸಲಾಗಿದೆ.- ಡಾ.ಕೆ.ಎನ್.ಬಸವರಾಜ್, ಉಪ ಅರಣ್ಯ ಸಂರಕ್ಷಣಾಧಿಕಾರಿ, ವಿಭಾಗ, ಬಳ್ಳಾರಿ.